ಮೈಸೂರು: ವಿಷ್ಣುವರ್ಧನ್ ಅವರಿಗೆ ಅಭಿಮಾನಿಗಳು ಕೊಟ್ಟ ಪ್ರೀತಿ, ವಿಶ್ವಾಸದ ಶಕ್ತಿಯಿಂದ ಅವರು ಸಾಧಿಸುವಂತಾಯ್ತು. ವಿಷ್ಣು ಅವರಿಗೆ ಸಮಾಜಕ್ಕೆ, ತಮ್ಮ ಅಭಿಮಾನಿಗಳಿಗಾಗಿ ಏನಾದ್ರು ಮಾಡಬೇಕೆಂಬ ಆಸೆ ಇತ್ತು ಎಂದು ವಿಷ್ಣುವರ್ಧನ್ ಪತ್ನಿ ಭಾರತಿ ವಿಷ್ಣುವರ್ಧನ್ ತಿಳಿಸಿದ್ದಾರೆ. ಇಂದು ಡಾ. ವಿಷ್ಣುವರ್ಧನ್ ಅವರ 15ನೇ ಪುಣ್ಯಸ್ಮರಣೆ. ಈ ಹಿನ್ನೆಲೆ, ಮೈಸೂರಿನ ಹೊರವಲಯದ ಹೆಚ್.ಡಿ. ಕೋಟೆ ರಸ್ತೆಯ ಉದ್ಬೂರು ಗೇಟ್ ಬಳಿ ಇರುವ ವಿಷ್ಣು ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ವಿಷ್ಣುವರ್ಧನ್ ನಿಮ್ಮ ಶಕ್ತಿಯಿಂದ ಏನೆಲ್ಲಾ ಸಾಧಿಸಿದ್ದಾರೆ. ಆದ್ದರಿಂದಲೇ ಅಭಿಮಾನಿಗಳಿಗೋಸ್ಕರ ಏನಾದರು ಮಾಡಬೇಕೆಂಬ ಆಸೆ ಹೊಂದಿದ್ದರು. ಇದೀಗ ಸರ್ಕಾರ ಉದ್ಬೂರಿನ ಬಳಿ ವಿಷ್ಣುವರ್ಧನ್ ಸ್ಮಾರಕವಾಗಿದೆ. ಇಲ್ಲಿ ಯಾರೂ ಶಾಶ್ವತವಲ್ಲ. ಆದ್ರೆ ಇದನ್ನು (ಸ್ಮಾರಕ) ನಡೆಸಿಕೊಂಡು ಹೋಗುವ ಜವಾಬ್ದಾರಿ ನಿಮ್ಮ ಮೇಲಿದೆ. ಅದನ್ನು ನೀವು ಮಾಡಬೇಕಾಗಿದೆ ಎಂದು ಮನವಿ ಮಾಡಿದರು. ಭಾರತಿ ವಿಷ್ಣುವರ್ಧನ್ ಅವರ ಮನವಿಗೆ ಅಭಿಮಾನಿಗಳು ಒಪ್ಪಿ, ನೂರಾರು ವರ್ಷ ಇದೇ ರೀತಿ ಕಾರ್ಯಕ್ರಮ ಮುಂದುವರಿಸಿಕೊಂಡು ಹೋಗುವುದಾಗಿ ಮಾತು ಕೊಟ್ಟರು.