ಕರ್ನಾಟಕ

karnataka

ETV Bharat / state

ಆನೇಕಲ್ : ರಸ್ತೆ ದುರಸ್ತಿಗಾಗಿ ಒತ್ತಾಯಿಸಿ ಗ್ರಾಮಸ್ಥರಿಂದ ಗ್ರಾಮ ಪಂಚಾಯತ್ ಮುಂಭಾಗ ಪ್ರತಿಭಟನೆ - protest to road repair

ಆನೇಕಲ್ ತಾಲೂಕಿನ ನೆರಿಗಾ-ಚಂಬೇನಹಳ್ಳಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆ ದುರಸ್ತಿಗಾಗಿ ಒತ್ತಾಯಿಸಿ ಯಮರೆ ಗ್ರಾಮ ಪಂಚಾಯಿತಿ ಮುಂಭಾಗ ಇಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸಿದರು.

villagers-protest-in-front-of-gram-panchayat-regarding-road-repair
ಗ್ರಾಮಸ್ಥರಿಂದ ಗ್ರಾಮ ಪಂಚಾಯತಿ ಮುಂಭಾಗ ಪ್ರತಿಭಟನೆ (ETV Bharat)

By ETV Bharat Karnataka Team

Published : Sep 22, 2024, 9:51 PM IST

ಆನೇಕಲ್ (ಬೆಂಗಳೂರು) : ತಾಲೂಕಿನ ಸರ್ಜಾಪುರದ ಯಮರೆ ಗ್ರಾಮ ಪಂಚಾಯಿತಿ ಮುಂಭಾಗ ಚಂಬೇನಹಳ್ಳಿ ಸುತ್ತಲ ಅಪಾರ್ಟ್​ಮೆಂಟ್​ ನಿವಾಸಿಗಳು ರಸ್ತೆ ದುರಸ್ತಿಗಾಗಿ ಒತ್ತಾಯಿಸಿ ಭಾನುವಾರ ಪ್ರತಿಭಟನೆ ನಡೆಸಿದರು.

ಕತ್ರಿಗುಪ್ಪೆಯಿಂದ ಎಸ್​ಹೆಚ್ ​35 ರಸ್ತೆಗೆ ಸಂಪರ್ಕಿಸುವ ನೆರಿಗಾ-ಚಂಬೇನಹಳ್ಳಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಎಲ್ಲೆಡೆ ಹೊಂಡಗಳೇ ಕಾಣಿಸುತ್ತಿವೆ ಎಂದು ನಿವಾಸಿಗಳು ದೂರಿದರು.

ಪ್ರತಿಭಟನೆ ನೇತೃತ್ವ ವಹಿಸಿದ ಹೇಮಲತಾ ಅವರು ಮಾತನಾಡಿದರು (ETV Bharat)

ಪ್ರತಿಭಟನೆಯ ನೇತೃತ್ವ ವಹಿಸಿದ ಹೇಮಲತಾ ಮಾತನಾಡಿ, ಸತತ ಮೂರು ವರ್ಷಗಳಿಂದ ಯಮರೆ ಗ್ರಾಮ ಪಂಚಾಯಿತಿ ಅಧ್ಯಕ್ಷ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಶಾಸಕರು, ಸಂಸದರನ್ನು ಒಳಗೊಂಡಂತೆ ಹತ್ತು ಹಲವು ಬಾರಿ ಮನವಿಗಳನ್ನು ನೀಡಿದ್ದೇವೆ. ಆದರೂ ಈವರೆಗೆ ಯಾರೊಬ್ಬರಿಂದಲೂ ಕೆಲಸಗಳಾಗದೆ ಕೇವಲ ಭರವಸೆಗಳಷ್ಟೇ ಸಿಕ್ಕಿವೆ. ರಸ್ತೆಯ ಧೂಳು, ಬಳಸುವ ವಾಹನಗಳ ರಿಪೇರಿ ನಮ್ಮನ್ನು ಕಂಗೆಡಿಸಿದೆ ಎಂದರು.

ಈಗಾಗಲೇ ಇರುವ ಕಿರಿದಾದ ರಸ್ತೆಗೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 2020ರ ಅವಧಿಯಲ್ಲಿ ಐದು ಕಿ.ಮೀ. ದೂರಕ್ಕೆ 196 ಲಕ್ಷ ವೆಚ್ಚದಲ್ಲಿ ಈ ರಸ್ತೆ ನಿರ್ಮಿಸಲಾಗಿತ್ತು. ಅದರ ನಿರ್ವಹಣೆಯನ್ನು ಈವರೆಗೆ ಪಿಎಂಜಿಎಸ್​ವೈ ಹೊಣೆ ಹೊತ್ತಿತ್ತು. ಆದರೆ, ರಸ್ತೆ ಕಿತ್ತುಹೋದ ಕಾರಣ ನೆಪಕ್ಕೆ ಪಂಚಾಯತ್ ರಾಜ್ ಅಭಿಯಂತರರ ಉಪವಿಭಾಗ ಆನೇಕಲ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಸಲ್ಲಿಕೆಯ ಪತ್ರವೊಂದನ್ನು ತೋರಿಸಲಾಗ್ತಿದೆ ಎಂದಿದ್ದಾರೆ.

ಸಂಪೂರ್ಣ ಕಿತ್ತುಹೋದ ರಸ್ತೆಯನ್ನು ನಾವು ಹೇಗೆ ನಿರ್ವಹಿಸುವುದು ಎಂದು ಪಿಆರ್​ಇಡಿ ವಿಭಾಗ ಪಿಎಂಜಿಎಸ್​ವೈ ಇಲಾಖೆಗೆ ಮರಳಿ ವಾಪಸ್ ಕಳಿಸಿ ಕೈ ತೊಳೆದುಕೊಂಡಿದೆ. ಅನಂತರ 2021ರಲ್ಲಿ ಗುಣಮಟ್ಟ ಪರಿಶೀಲಿಸಿದ ಪಂಕಜ್ ಎಂಬ ಅಧಿಕಾರಿ ಈ ರಸ್ತೆ ಗುಣಮಟ್ಟದಿಂದ ಕೂಡಿಲ್ಲ ಎಂಬ ವರದಿಯನ್ನು ನೀಡಿದ್ದಾರೆ ಎಂದರು.

ಆದರೂ ಜನತಾದರ್ಶನದಲ್ಲಿ ನಿವಾಸಿಗಳು ರಸ್ತೆ ಕುರಿತು ಅವಲತ್ತುಕೊಂಡಿದ್ದರ ಪರಿಣಾಮ ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಕೆಡಿಪಿ ಸಭೆಯಲ್ಲಿ ಸೂಚಿಸಿದಂತೆ ಇದೇ ರಸ್ತೆಗೆ 1 ಕಿ. ಮೀ ದುರಸ್ತಿಗೆ 63.50 ಲಕ್ಷ ಬೇಡಿಕೆಯನ್ನು ಮುಂದಿಟ್ಟು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದರು.

ಇವೆರಡೂ ಇಲಾಖೆ ಯೋಜನೆಗಳ ಇಬ್ಬಗೆಯ ನೀತಿಗೆ ಅಕ್ಷರಶಃ ಸರ್ಜಾಪುರ, ಚಂಬೇನಹಳ್ಳಿ ನಿವಾಸಿಗಳು ಸೊರಗಿ ಹೋಗಿದ್ದಾರೆ. ಬೇಸಿಗೆಯಲ್ಲಿ ವಿಪರೀತ ಧೂಳಾದರೆ, ಮಳೆಗಾಲದಲ್ಲಿ ಆಳ ಗೊತ್ತಾಗದೆ ಹೊಂಡಗಳಾಗಿ ವಾಹನ ಸವಾರರಿಗೆ ಸಂಚಕಾರ ತಂದಿದೆ ಎಂದು ಹೇಳಿದ್ದಾರೆ.

ಚಂಬೇನಹಳ್ಳಿ - ನೆರಿಗಾ ಮುಖ್ಯರಸ್ತೆಯಲ್ಲಿ ಹತ್ತಾರು ಬಡಾವಣೆಗಳು, ಬಹುಮಹಡಿಗಳ ನಿವಾಸಿಗಳು ರಾತ್ರಿ ವೇಳೆ ಸಂಚರಿಸಲು ಸಾಧ್ಯವಾಗದಷ್ಟು ರಸ್ತೆ ಹದಗೆಟ್ಟಿವೆ ಎಂದು ನಿವಾಸಿಗಳು ತಮ್ಮ ಸಮಸ್ಯೆಯನ್ನು ಹೇಳಿಕೊಂಡರು. ರಸ್ತೆ ಧೂಳಿನಿಂದ ಬಸವಳಿದಿರುವ ವಾಹನ ಸವಾರರು, ಗ್ರಾಮಸ್ಥರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ಎಂದು ತಿಳಿಸಿದ್ದಾರೆ.

ಈ ಕುರಿತಂತೆ ಜನಪ್ರತಿನಿಧಿಗಳ ಇಲಾಖೆಗಳಿಗೆ ದಶಕದಿಂದ ದೂರುಗಳನ್ನ ನೀಡಿದ್ದರೂ ಕ್ರಮವಹಿಸದ ಕಾರಣಕ್ಕೆ ಅನಿವಾರ್ಯವಾಗಿ ಹೋರಾಟಕ್ಕೆ ಇಳಿಯಬೇಕಾಯಿತು ಎಂದು ಪ್ರತಿಭಟನಾಕಾರರು ಪ್ರತಿಭಟನೆಯ ಅಗತ್ಯವನ್ನು ತಿಳಿಸಿದ್ದಾರೆ.

ರಸ್ತೆ ದುರಸ್ತಿ ಕುರಿತು ಸ್ಪಂದಿಸದ ಅಧಿಕಾರಿಗಳು: ಸಂಬಂದಪಟ್ಟ ಇಲಾಖಾ ವೆಬ್ಸೈಟ್, ಸಾಮಾಜಿಕ ಜಾಲತಾಣಗಳಲ್ಲಿಯೂ ರಸ್ತೆ ದುರಸ್ತಿಗೆ ಫೋಟೋ ವಿಡಿಯೋ ಕಳಿಸಿ ಮನವಿ ಮಾಡಿಕೊಳ್ಳಲಾಗಿದೆ. ಆದರೂ ಯಾರೊಬ್ಬರೂ ಈ ಕುರಿತಂತೆ ಸ್ಪಂದಿಸುತ್ತಿಲ್ಲ ಎಂದು ನಿವಾಸಿಗಳು ದೂರಿದ್ದಾರೆ.

ಈ ಕುರಿತು ಹೋರಾಟಗಾರ ವೇಣು ಮಾತನಾಡಿ, 'ರಸ್ತೆ ಮೇಲೆ ಓಡಾಡುವ ವಾಹನಗಳ ಭಾರ ಮಿತಿಯಿದ್ದರೂ ಅತೀ ಬೃಹತ್ ವಾಹನಗಳ ಓಡಾಟದಿಂದ ರಸ್ತೆ ಹಾಳಾಗಿರುವುದು ಸತ್ಯ ಎಂದು ಗ್ರಾಮಸ್ಥರೂ ದೂರುತ್ತಾರೆ. ಆದರೆ ಸ್ಥಳೀಯ ಆಡಳಿತ ಈ ಸಿಮೆಂಟ್ ಪ್ಲಾಂಟ್​ಗಳಿಗೆ ಒಳಗಿಂದೊಳಗೆ ಅನುಮತಿ ಕೊಟ್ಟು ಶ್ರೀರಕ್ಷೆಗೆ ನಿಂತಿದ್ದಾರೆ. ಈ ಕಾರಣಕ್ಕೆ ರಸ್ತೆ ದುರಸ್ತಿಯಾಗುತ್ತಿಲ್ಲವೆಂದು' ಆರೋಪಿಸಿದರು.

ಶೀಘ್ರವಾಗಿ ದುರಸ್ತಿ ಮಾಡಿಸಲಾಗುತ್ತದೆ :ಲೋಕೋಪಯೋಗಿ ಇಲಾಖೆ ಅಧಿಕಾರಿ ನಾರಾಯಣಸ್ವಾಮಿ ಮಾತನಾಡಿ, 'ಕಳೆದ ಬಾರಿ ಮಳೆಯಿಂದ ರಸ್ತೆ ಹದಗೆಟ್ಟಿರಬಹುದು. ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಯಾವ ಇಲಾಖೆಗೆ ಒಳಪಟ್ಟಿದೆ ಎಂಬ ಖಚಿತತೆ ಇಲ್ಲದಿರುವುದರಿಂದ ಸಂಬಂದಪಟ್ಟ ಇಲಾಖೆಯಿಂದ ಪರಿಶೀಲಿಸಿ ಶೀಘ್ರವಾಗಿ ದುರಸ್ತಿ ಮಾಡಿಸಲಾಗುತ್ತದೆ' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ :ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಆಯುಕ್ತರಿಗೆ ಡಿಸಿಎಂ 15 ದಿನಗಳ ಗಡುವು - Bengaluru Pothole

ABOUT THE AUTHOR

...view details