ವಿಜಯಪುರ:ಎಸ್ಸಿ ಮೀಸಲು ಲೋಕಸಭಾ ಕ್ಷೇತ್ರವಾದ ವಿಜಯಪುರದಲ್ಲಿ ಸಾರ್ವತ್ರಿಕ ಮಹಾ ಚುನಾವಣೆ ಬಿರು ಬಿಸಿಲ ನಡುವೆ ದಿನೇ ದಿನೇ ಕಾವೇರತೊಡಗಿದೆ. ಮೇ 7ರಂದು ಮತದಾನ ನಡೆಯಲಿದ್ದು, ಕಣದಲ್ಲಿರುವ ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿಯಿಂದ ರಮೇಶ ಜಿಗಜಿಣಗಿ ಅಭ್ಯರ್ಥಿಯಾಗಿದ್ದರೆ, ಕಾಂಗ್ರೆಸ್ ಪಕ್ಷ ರಾಜು ಆಲಗೂರ ಅವರನ್ನು ಸ್ಪರ್ಧೆಗಿಳಿಸಿದೆ.
'ಡಬಲ್ ಹ್ಯಾಟ್ರಿಕ್' ಸರದಾರ ಜಿಗಜಿಣಗಿ: 1999ರ ಚುನಾವಣೆಯಿಂದ ಈವರೆಗೆ ಕ್ಷೇತ್ರ ಬಿಜೆಪಿ ವಶದಲ್ಲಿದೆ. ರಮೇಶ ಜಿಗಜಿಣಗಿ ಚಿಕ್ಕೋಡಿಯಿಂದ 3 ಸಲ, ಈ ಕ್ಷೇತ್ರದಿಂದಲೂ 3 ಸಲ ಸತತ ಜಯ ಸಾಧಿಸಿ 'ಡಬಲ್ ಹ್ಯಾಟ್ರಿಕ್' ಸರದಾರ ಎನಿಸಿಕೊಂಡವರು. ಕಾಂಗ್ರೆಸ್ ಪಕ್ಷವು ಮಾಜಿ ಶಾಸಕ ಹಾಗೂ ಹಾಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಜು ಆಲಗೂರರನ್ನು ಈ ಬಾರಿ ಕಣಕ್ಕಿಳಿಸಿದ್ದರಿಂದ ಅಖಾಡದಲ್ಲಿ ಜಿದ್ದಾಜಿದ್ದಿ ಕಾಣುತ್ತಿದೆ. ಕೈ ಅಭ್ಯರ್ಥಿ ಪರವಾಗಿ ರಾಹುಲ್ ಗಾಂಧಿ ಪ್ರಚಾರ ಸಭೆ ನಡೆಸಿದರೆ, ಬಿಜೆಪಿ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಬಾಗಲಕೋಟೆ ಸಮಾವೇಶದ ಮೂಲಕ ಕ್ಯಾಂಪೇನ್ ಮಾಡಿದ್ದರು.
ರಾಜ್ಯದ ಪ್ರಮುಖ ಪ್ರವಾಸಿ ತಾಣ:ಗುಮ್ಮಟನಗರಿ ವಿಜಯಪುರ ಆದಿಲ್ ಷಾಹಿಗಳ ಕಾಲದ ಸ್ಮಾರಕಗಳಿಂದಾಗಿ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ. ಬಸವಾದಿ ಶರಣರು ಇಲ್ಲಿನವರೇ ಆಗಿರುವ ಕಾರಣದಿಂದಾಗಿ 'ಬಸವನಾಡು' ಎಂದು ಪ್ರಸಿದ್ಧಿ ಪಡೆದಿದೆ. ದ್ರಾಕ್ಷಿ, ನಿಂಬೆ, ದಾಳಿಂಬೆ, ಕಬ್ಬು ಸೇರಿದಂತೆ ಇನ್ನಿತರ ತೋಟಗಾರಿಕೆ ಬೆಳೆಗಳಿಗೂ ಹೆಸರುವಾಸಿ. ಅಖಂಡ ಜಿಲ್ಲೆಯಾಗಿದ್ದಾಗ ಪಂಚನದಿಗಳ ಬೀಡೆಂದೂ ಕರೆಸಿಕೊಳ್ಳುತ್ತಿದ್ದ ಜಿಲ್ಲೆ ಇದು. ಬಾಗಲಕೋಟೆ ಜಿಲ್ಲೆಯನ್ನಾಗಿ ವಿಭಜಿಸಿದ ನಂತರ ಇದೀಗ ಈ ಜಿಲ್ಲೆಯ ಒಂದು ಗಡಿಗೆ ಕೃಷ್ಣಾ ನದಿ, ಇನ್ನೊಂದೆಡೆ ಭೀಮಾನದಿ ಮಧ್ಯದಲ್ಲಿ ಡೋಣಿ ಹರಿಯುತ್ತದೆ. ಸಾಹಿತ್ಯ ಶ್ರೀಮಂತಿಕೆಯಿಂದಾಗಿ ಭೀಮಾಸಿರಿ ಎಂದೆನಿಸಿಕೊಂಡಿದೆ. 'ಭೀಮಾತೀರ' ಎಂಬುದೊಂದು ಕುಖ್ಯಾತಿ. ಅತಿವೃಷ್ಟಿ ಇಲ್ಲವೇ ಅನಾವೃಷ್ಠಿ ಕಾರಣದಿಂದಾಗಿ ಜಿಲ್ಲೆಯಲ್ಲಿ ಹಲವು ನೀರಾವರಿ ಯೋಜನೆಗಳಿದ್ದರೂ ಇಂದಿಗೂ ಬರಪೀಡಿತ ಜಿಲ್ಲೆ ಎಂಬ ಹಣೆಪಟ್ಟಿ ಹಾಗೆಯೇ ಇದೆ.
ವಿಧಾನಸಭಾ ಕ್ಷೇತ್ರಗಳಲ್ಲಿ ಕೈ-ಕಮಲ ಬಲಾಬಲ:ವಿಜಯಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ 6ರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮತ್ತು ಜೆಡಿಎಸ್ ಒಂದೊಂದು ಕ್ಷೇತ್ರವನ್ನು ಗೆದ್ದುಕೊಂಡಿವೆ.
ಕಳೆದ 3 ಲೋಕಸಭೆ ಚುನಾವಣೆಗಳ ಫಲಿತಾಂಶ:2009ರಲ್ಲಿ ಈ ಕ್ಷೇತ್ರ ಒಟ್ಟು 13,73,604 ಮತದಾರರನ್ನು ಹೊಂದಿತ್ತು. ಒಟ್ಟು ಮಾನ್ಯ ಮತಗಳ ಸಂಖ್ಯೆ 6,49,631. ಬಿಜೆಪಿ ಅಭ್ಯರ್ಥಿ ರಮೇಶ ಚಂದಪ್ಪ ಜಿಗಜಿಣಗಿ ಗೆದ್ದಿದ್ದರು. ಅವರು ಒಟ್ಟು 3,08,939 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್‌ನ ಪ್ರಕಾಶ್ ಕುಬಾಸಿಂಗ್ ರಾಥೋಡ್ ಒಟ್ಟು 2,66,535 ಮತಗಳೊಂದಿಗೆ 2ನೇ ಸ್ಥಾನ ಪಡೆದಿದ್ದರು.
ವಿಜಯಪುರ ಲೋಕಸಭಾ ಮತಕ್ಷೇತ್ರ (ವಿಜಯಪುರ ಲೋಕಸಭಾ ಮತಕ್ಷೇತ್ರ) 2014ರ ಚುನಾವಣೆಯಲ್ಲಿ ಕ್ಷೇತ್ರ ಒಟ್ಟು 16,22,635 ಮತದಾರರನ್ನು ಹೊಂದಿತ್ತು. ಆಗ ಒಟ್ಟು ಮಾನ್ಯ ಮತಗಳ ಸಂಖ್ಯೆ 9,58,470. ಬಿಜೆಪಿಯ ರಮೇಶ ಜಿಗಜಿಣಗಿ ಈ ಕ್ಷೇತ್ರದಿಂದ ಮತ್ತೆ ಗೆದ್ದು ಸಂಸದರಾದರು. ಜಿಗಜಿಣಗಿ ಒಟ್ಟು 4,71,757 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ಪ್ರಕಾಶ್ ರಾಥೋಡ್ 4,01,938 ಮತಗಳೊಂದಿಗೆ ಮತ್ತೆ ಸೋಲು ಕಂಡರು.
2019ರ ಚುನಾವಣೆಯಲ್ಲಿ 17,97,587 ಮತದಾರರನ್ನು ಹೊಂದಿದ್ದ ಕ್ಷೇತ್ರದಲ್ಲಿ 10,99,068 ಮತಗಳು ಮಾನ್ಯವಾಗಿದ್ದವು. ರಮೇಶ್ ಜಿಗಜಿಣಗಿ ಮೂರನೇ ಬಾರಿ ಗೆದ್ದು ಸಂಸತ್ ಪ್ರವೇಶಿಸಿದ್ದರು. ಇವರು ಒಟ್ಟು 6,35,867 ಮತಗಳನ್ನು ಪಡೆದರೆ, ಜನತಾ ದಳ (ಜಾತ್ಯತೀತ) ಮತ್ತು ಕಾಂಗ್ರೆಸ್‌ನ ಡಾ.ಸುನೀತಾ ದೇವಾನಂದ ಚವಾಣ್ 3,77,829 ಮತ ಗಳಿಸಿದ್ದರು.
ಕ್ಷೇಂತ್ರದ ಜನರ ನಿರೀಕ್ಷೆಗಳೇನು?:ಜಿಲ್ಲೆಯಲ್ಲಿ ಸಮಗ್ರ ನೀರಾವರಿಯಾಗಬೇಕು. ಜನತೆ ದುಡಿಯಲು ಗುಳೇ ಹೋಗುವುದನ್ನು ತಡೆಯಬೇಕು. ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಮಾಡಬೇಕು. ಗೋಳಗುಮ್ಮಟವನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಬೇಕು. ಪ್ರವಾಸೋದ್ಯಮ ಇನ್ನಷ್ಟು ಅಭಿವೃದ್ಧಿಯಾಗಬೇಕು. ವಿಮಾನ ನಿಲ್ದಾಣ ಮೇಲ್ದರ್ಜೆಗೇರಿಸುವ ಜೊತೆಗೆ ರಾತ್ರಿ ಲ್ಯಾಂಡಿಂಗ್ ವ್ಯವಸ್ಥೆಯಾಗಬೇಕು. ಕಾರ್ಗೋ ವಿಮಾನಗಳಿಗೆ ಅವಕಾಶ ನೀಡಬೇಕು ಎಂಬುದು ಕ್ಷೇತ್ರದ ಜನರ ಬೇಡಿಕೆಗಳು.
ಮತದಾರರ ಮಾಹಿತಿ (Etv Bharat) ಮತದಾರರ ಮಾಹಿತಿ: ಒಟ್ಟು 19,46,090 ಮತದಾರರಿದ್ದಾರೆ. ಈ ಪೈಕಿ 9,87,974 ಪುರುಷರು, 9,57,906 ಮಹಿಳೆಯರು ಹಾಗು 210 ಇತರೆ ಮತದಾರರಿದ್ದಾರೆ. 1,886 ಸೇವಾ ಮತದಾರರಿದ್ದು ಈ ಪೈಕಿ 1,852 ಪುರುಷರು ಮತ್ತು 34 ಮಹಿಳಾ ಮತದಾರರಿದ್ದಾರೆ. ಕ್ಷೇತ್ರವು 44,169 ಯುವ ಮತದಾರರನ್ನು ಹೊಂದಿದ್ದು, ಈ ಪೈಕಿ 25,280 ಪುರುಷರು, 18,886 ಮಹಿಳೆಯರು ಮತ್ತು 03 ಇತರೆ ಮತದಾರರಿದ್ದಾರೆ. ಒಟ್ಟು 21,803 ದಿವ್ಯಾಂಗರಲ್ಲಿ 12,664 ಪುರುಷರು ಮತ್ತು 9,139 ಮಹಿಳಾ ಮತದಾರರಿದ್ದಾರೆ. 17,157 ಜನ 85 ಮೇಲ್ಪಟ್ಟ ಮತದಾರರನ್ನು ಹೊಂದಿದೆ. ಈ ಪೈಕಿ 7,096 ಪುರುಷರು, 10,061 ಮಹಿಳೆಯರಿದ್ದಾರೆ.