ಬೆಂಗಳೂರು: ಬಸನಗೌಡ ಯತ್ನಾಳ್ ಅವರದ್ದು ವಿನಾಶಕಾಲೇ ವಿಪರೀತ ಬುದ್ಧಿ. ಅವರು ವಿನಾಶ ಆಗಿಯೇ ಆಗ್ತಾರೆ ಎಂದು ಕರ್ನಾಟಕ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ವಿವಿ ಟವರ್ ಕಚೇರಿಯಲ್ಲಿ ಇಂದು ಮಾತನಾಡಿದ ಅವರು, ಯತ್ನಾಳ್ ಅವರು ಪದೇ ಪದೇ ಮಹಾಪುರುಷರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಅವಮಾನ ಮಾಡುವ ರೀತಿ ಹೇಳಿಕೆ ನೀಡುತ್ತಿದ್ದಾರೆ. ಬಸವಣ್ಣ ಹೊಳೆ ಹಾರಿದರು ಅಂತ ಒಮ್ಮೆ ಹೇಳ್ತಾರೆ. ಯತ್ನಾಳ್ ಲಿಂಗಾಯತ ಪಂಚಮಸಾಲಿ ಧರ್ಮದಲ್ಲಿ ಜನಿಸಿ ಈ ರೀತಿ ಮಾತನಾಡುವುದು ಸರಿಯಲ್ಲ. ಜಗಜ್ಯೋತಿ ಬಸವಣ್ಣನವರ ಬಗ್ಗೆ ಹೇಡಿ ಎಂಬ ರೀತಿ ಮಾತಾಡಿದ್ದನ್ನು ಖಂಡಿಸುತ್ತೇನೆ. ಯತ್ನಾಳ್ ಕ್ಷಮೆ ಕೇಳುವುದಕ್ಕೂ ಅರ್ಹರಲ್ಲ. ಅವರು ಎಲ್ಲರ ಬಗ್ಗೆಯೂ ಮಾತನಾಡ್ತಾರೆ. ಹೇಳಿಕೆಗಳನ್ನು ನಿಲ್ಲಿಸದೇ ಇದ್ದರೆ ಬಸವ ಅನುಯಾಯಿಗಳು ಹೋರಾಟ ಮಾಡ್ತಾರೆ ಎಂದು ಎಚ್ಚರಿಕೆ ನೀಡಿದರು.
ಯತ್ನಾಳ್ ಶುಗರ್ ಫ್ಯಾಕ್ಟರಿ ಬಂದಾಗ ಸರ್ಕಾರದ ವಿರುದ್ಧ ಯಾಕೆ ಸ್ವಾಮೀಜಿಗಳು ಮಾತಾಡಬೇಕು?. ಪಂಚಮಸಾಲಿ ಹೋರಾಟ ಯತ್ನಾಳ್ಗೆ ಸೀಮಿತವಾದ ಹೋರಾಟವಾಗಿದೆ. ಜಯ ಮೃತ್ಯುಂಜಯ ಸ್ವಾಮೀಜಿಗಳು ಕೇವಲ ಯತ್ನಾಳ್ ಪರ ಮಾತನಾಡುತ್ತಾರೆ. ವಕ್ಫ್ ಬಗ್ಗೆ ಯತ್ನಾಳ್ ಹೋರಾಟ ಕಪಟ ನಾಟಕ. ಅವರದ್ದು ಯಾವ ರೈತರ ಪರ ಹೋರಾಟವೂ ಅಲ್ಲ. ಹಿಂದೆ ಇದೇ ಯತ್ನಾಳ್ ಬಿಜೆಪಿ ಕಾಲದಲ್ಲಿ ನೋಟಿಸ್ ಕೊಟ್ಟಾಗ ಮಾತಾಡಲಿಲ್ಲ. ವಿಜಯೇಂದ್ರ ಟಾರ್ಗೆಟ್ ಮಾಡಿ ಯತ್ನಾಳ್ ಹೋರಾಟ. ವಿಜಯೇಂದ್ರ ಹಠಾವೋ ಪಾರ್ಟಿ ಬಚಾವೋ ಅಷ್ಟೇ ಯತ್ನಾಳ್ ಅವರ ಹೋರಾಟ. ಹಿಂದೆ ಯತ್ನಾಳ್ ಅವರ ಸರ್ಕಾರ ಇದ್ದಾಗ ಬೊಮ್ಮಾಯಿ ವಕ್ಫ್ ಬಗ್ಗೆ ಏನು ಹೇಳಿದ್ರು?. ಸುಮ್ಮನೆ ಯತ್ನಾಳ್ ಗುಂಪುಗಾರಿಕೆ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಯಾವ ಪಕ್ಷಕ್ಕೂ ಕೂಡ ಯತ್ನಾಳ್ ವಿನಯವಾಗಿಲ್ಲ ಎಂದು ಕಿಡಿಕಾರಿದರು.