ಬೆಂಗಳೂರು:ವೆಂಕಟಪ್ಪ ಆರ್ಟ್ ಗ್ಯಾಲರಿಯನ್ನು 6 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಣ ಮಾಡಲಾಗುತ್ತಿದ್ದು, ಮುಂದಿನ ತಿಂಗಳಿನಿಂದ ಮತ್ತೆ ಚಿತ್ರಶಾಲೆ ವಿನೂತನವಾಗಿ ಕಾರ್ಯಾರಂಭ ಮಾಡಲು ಸಜ್ಜಾಗಿದೆ.
ಸಿಎಸ್‌ಆರ್ ಅಡಿ ಹೊಸ ರೂಪ; ವೆಂಕಟಪ್ಪ ಸರ್ಕಾರಿ ಕಲಾ ಶಾಲೆಯನ್ನು ಬ್ರಿಗೇಡ್ ಫೌಂಡೇಶನ್ ಕಾರ್ಪೊರೇಟ್ ಕಂಪನಿಗಳ ಸಿಎಸ್‌ಆರ್ ಅಡಿ ಹೊಸ ರೂಪ ನೀಡುತ್ತಿದ್ದಾರೆ. ಈಗ ಮೊದಲಿದ್ದ ಮೂರು ಗ್ಯಾಲರಿಗಳ ಜೊತೆಗೆ ಮತ್ತೆರಡು ಹೊಸ ಕಿರು ಗ್ಯಾಲರಿಗಳನ್ನು ನಿರ್ಮಿಸಲಾಗುತ್ತಿದೆ. ನವೀಕರಣ ಪೂರ್ಣಗೊಂಡ ನಂತರ ಕಟ್ಟಡವನ್ನು ಮತ್ತೆ ಪುರಾತತ್ವ ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಗೆ ಹಸ್ತಾಂತರಿಸಲಾಗುತ್ತದೆ.
1963ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರು ಕಬ್ಬನ್ ಉದ್ಯಾನದ 1.11 ಎಕರೆ ಜಾಗದಲ್ಲಿ ವೆಂಕಟಪ್ಪ ಆರ್ಟ್ ಗ್ಯಾಲರಿ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ನಂತರ 1975ರಲ್ಲಿ ಮೂರು ಅಂತಸ್ತಿನ ಆರ್ಟ್ ಗ್ಯಾಲರಿಯ ಕಟ್ಟಡ ಲೋಕಾರ್ಪಣೆಗೊಂಡಿತ್ತು. ಈಗ ಕಟ್ಟಡಕ್ಕೆ ಯಾವುದೇ ಧಕ್ಕೆಯಾಗದಂತೆ ನವೀಕರಿಸಲಾಗುತ್ತಿದೆ.
ನವೀಕೃತ ಕಟ್ಟಡಲ್ಲಿ ಏನೇನಿದೆ:ವೆಂಕಟಪ್ಪ ಕಲಾ ಶಾಲೆಯ ಛಾವಣಿ ಮತ್ತು ಗೋಡೆಗಳನ್ನು ಬಲಪಡಿಸಲಾಗುತ್ತಿದೆ. ವೆಂಕಟಪ್ಪ, ಕೆ. ಕೆ. ಹೆಬ್ಬಾರ್, ರಾಜಾರಾಂ ಅವರಂತಹ ಹೆಸರಾಂತ ಕಲಾವಿದರ ಕಲಾಕೃತಿಗಳ ಪ್ರದರ್ಶನಕ್ಕಿಡಲು ಶಾಶ್ವತ ಗ್ಯಾಲರಿ ನಿರ್ಮಾಣ ಮಾಡಲಾಗುತ್ತಿದೆ. ಪ್ರದರ್ಶನದ ಸಮಯದಲ್ಲಿ ಕಲಾವಿದರು ತಮ್ಮ ಕಲಾಕೃತಿಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಡಲು ಕೊಠಡಿ ನಿರ್ಮಿಸಲಾಗುತ್ತಿದೆ. 100 ಆಸನಗಳುಳ್ಳ ಸಭಾಂಗಣದ ಆಧುನೀಕರಣ ನಡೆಯುತ್ತಿದೆ.
ನೆಲಮಹಡಿಯಲ್ಲಿದ್ದ ಕಚೇರಿ ಹೆಚ್ಚಿನ ಸ್ಥಳಾವಕಾಶಕ್ಕಾಗಿ ಮೇಲಿನ ಮಹಡಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಪ್ರವಾಸಿಗರು, ಕಲಾ ಆಸಕ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಹ್ವಾನಿಸಲು ಆರ್ಟ್ ಗ್ಯಾಲರಿಯ ಹೊರಾಂಗಣದಲ್ಲಿ ಆಕರ್ಷಕ ಸ್ಥಳಗಳ ನಿರ್ಮಾಣ, ಕೊಳ ಮತ್ತು ಕೆಫೆಟೇರಿಯಾ ನಿರ್ಮಾಣ ಕೂಡ ನೆಡೆಯುತ್ತಿದೆ.
ವೆಂಕಟಪ್ಪ ಆರ್ಟ್ ಗ್ಯಾಲರಿಯನ್ನು 2024ರ ಫೆಬ್ರವರಿಯಲ್ಲಿ ನವೀಕರಣ ಮಾಡಲು ಆರಂಭಿಸಲಾಗಿತ್ತು. ನಿಗದಿಯಂತೆ ಈ ವರ್ಷದ ಅಕ್ಟೋಬರ್ನಲ್ಲಿ ಪೂರ್ಣವಾಗಬೇಕಿತ್ತು. ಆದರೆ ಇದೀಗ ಶೇ.80 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಡಿಸೆಂಬರ್ ಅಂತ್ಯದೊಳಗೆ ಪೂರ್ಣವಾಗಲಿದೆ. ನವೀಕರಣಕ್ಕೆ 5 ಕೋಟಿ ರೂ ಅಂದಾಜು ಮಾಡಲಾಗಿತ್ತು. ಕೆಲಸ ಪೂರ್ಣ ಆಗುವುದರೊಳಗೆ 6 ಕೋಟಿ ರೂ. ತಲುಪಬಹುದು. ಎಲ್ಲ ವೆಚ್ಚವನ್ನು ಬ್ರಿಗೇಡ್ ಫೌಂಡೇಶ್ ಕೊಡುತ್ತಿದೆ ಎಂದು ರಾಜ್ಯ ಪುರಾತತ್ವ ಸಂಗ್ರಹಾಲಯಗಳ ಇಲಾಖೆಯ ಆಯುಕ್ತ ಎ. ದೇವರಾಜು ಹೇಳಿದ್ದಾರೆ.
ಇದನ್ನೂ ಓದಿ:ದಾವಣಗೆರೆಯಲ್ಲಿ ಯುರೋಪ್ ಶೈಲಿಯ ವೃತ್ತಗಳ ಪ್ರಯೋಗ: ಏನಿದರ ಪ್ರಯೋಜನ?