ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ) : ''ಎರಡು ತಿಂಗಳ ಅನ್ನಭಾಗ್ಯ ಅಕ್ಕಿ ಹಣ ಮಾತ್ರ ಬಾಕಿ ಇದೆ, ಇನ್ಮೇಲೆ ಪ್ರತಿ ತಿಂಗಳು ಹಣ ಹಾಕಲಾಗುವುದು'' ಎಂದು ಅನ್ನಭಾಗ್ಯ ಅಕ್ಕಿ ಹಣ ವಿಳಂಬ ವಿಚಾರಕ್ಕೆ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಪ್ರತಿಕ್ರಿಯಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಗ್ರಾಮದ ಪ್ರಸನ್ನ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ದೇವಾಲಯದ ರಾಜಗೋಪುರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಮಾಧ್ಯಮದವರೊಂದಿಗೆ ಮಾತನಾಡಿ, ಅನ್ನಭಾಗ್ಯ ಯೋಜನೆ ಅಕ್ಕಿ ಹಣ ವಿಳಂಬ ವಿಚಾರ ಸಂಬಂಧ ಸ್ಪಷ್ಟನೆ ನೀಡಿದರು.

''ನಾಲ್ಕೈದು ತಿಂಗಳು ಹಣ ಬಾಕಿ ಇಲ್ಲ, ಕೇವಲ ಎರಡೇ ಎರಡು ತಿಂಗಳ ಹಣ ಮಾತ್ರ ಬಾಕಿ ಇದೆ, ಅದನ್ನು ಸಹ ಈಗ ಕೊಡ್ತೇವೆ. ಎರಡೆರಡು ತಿಂಗಳಿಗೆ ಒಂದು ಬಾರಿ ಹಾಕುತ್ತಿದ್ದೇವೆ. ಇನ್ಮೇಲೆ ಪ್ರತಿ ತಿಂಗಳು ಹಣ ಹಾಕಲು ಏರ್ಪಾಡು ಮಾಡುತ್ತೇವೆ'' ಎಂದ ಸಚಿವರು ಈ ಬಗ್ಗೆ ವಿಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿ, ''ವಿಪಕ್ಷಗಳು ಟೀಕೆ ಮಾಡಿದರೇನೆ ನಾವು ಸರಿಯಾಗಿ ಕೆಲಸ ಮಾಡುವುದು'' ಎಂದರು.
ಇದನ್ನೂ ಓದಿ: ಡಿಕೆ ಶಿವಕುಮಾರ್ಗೆ ಒಳಗೆ ಸಿಎಂ ಪಟ್ಟದ ಬೇಗುದಿ ಇದೆ, ಬಹಿರಂಗವಾಗಿ ಅದನ್ನು ಹೇಳೋಕೆ ಆಗುತ್ತಿಲ್ಲ : ಪ್ರಲ್ಹಾದ್ ಜೋಶಿ
''ಈ ಭಾಗದ ಗ್ರಾಮ ಪಂಚಾಯತಿಯ ಅಭಿವೃದ್ಧಿಗೆ ಒಂದು ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಒಂದು ವಾರದಲ್ಲಿ ಶಾಲೆಯ ಅಭಿವೃದ್ಧಿ, ಶಾಲೆಯ ಕಾಂಪೌಂಡ್, ಆಟದ ಮೈದಾನ, ಶೌಚಾಲಯ ವ್ಯವಸ್ಥೆ ಹಾಗೂ ಸುಸಜ್ಜಿತ ಶಾಲಾ ಕೊಠಡಿಗಳ ಮೇಲ್ದರ್ಜೆಗೆ ಏರಿಸಲಾಗುವುದು. ಇನ್ಫೋಸಿಸ್ ನೇತೃತ್ವದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿದ್ದು, ಅತಿ ಶೀಘ್ರದಲ್ಲಿ ಚಾಲನೆ ಸಿಗಲಿದೆ. ಮಕ್ಕಳ ಸಮಗ್ರ ಅಭಿವೃದ್ಧಿಗೆ ಈ ವ್ಯವಸ್ಥೆಯು ಸಹಕಾರಿಯಾಗಲಿದೆ. ಉನ್ನತ ವಿದ್ಯಾಭ್ಯಾಸ ಮಾಡಲು ಮಕ್ಕಳಿಗೆ ಸಹಕಾರಿಯಾಗಲಿದೆ'' ಎಂದು ತಿಳಿಸಿದರು.
''ನಿವೇಶನ ರಹಿತರು ಸುಮಾರು 4,500 ಸಾವಿರ ಜನರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅವರಿಗೆ ಸರ್ಕಾರಿ ಜಮೀನು ಗುರುತಿಸಿದ್ದು, ಎರಡು ತಿಂಗಳಲ್ಲಿ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ'' ಎಂದು ಕೆ.ಹೆಚ್. ಮುನಿಯಪ್ಪ ಮಾಹಿತಿ ನೀಡಿದರು.
ಇದನ್ನೂ ಓದಿ: ನಮ್ಮ ಮೆಟ್ರೋಗೂ ಕೇಂದ್ರ ಸರ್ಕಾರ ಸಬ್ಸಿಡಿ ನೀಡಲಿ : ಸಚಿವ ರಾಮಲಿಂಗಾರೆಡ್ಡಿ