ಬೆಂಗಳೂರು : ಇಂದಿರಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಲ್ವರಿಗೆ ಚಾಕು ಇರಿದಿದ್ದ ರೌಡಿಶೀಟರ್ನನ್ನು ಬಂಧಿಸಲಾಗಿದೆ. 8 ದಿನಗಳ ಕಾಲ ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ವೇಳೆ ಯಾಕೆ ಕೃತ್ಯವೆಸಗಿದೆ ಎಂಬುದು ಗೊತ್ತಿಲ್ಲ ಎಂದು ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಫೆ.8ರಂದು ಇಂದಿರಾನಗರ 3ನೇ ಅಡ್ಡರಸ್ತೆಯಲ್ಲಿ ರೌಡಿಶೀಟರ್ ಕದಂಬ ಎಂಬಾತ 20 ನಿಮಿಷಗಳ ಅಂತರದಲ್ಲಿ ಜಸ್ವಂತ್, ತಮ್ಮಯ್ಯ, ಮಹೇಶ್ ಸೀತಾಪತಿ ಹಾಗೂ ದೀಪಕ್ ಕುಮಾರ್ ಎಂಬವರಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹೊಸಕೋಟೆಯಲ್ಲಿ ಆರೋಪಿಯನ್ನು ಸೆರೆಹಿಡಿದಿದ್ದಾರೆ. ಈತನಿಗೆ ಪರಾರಿಯಾಗಲು ಸಹಕರಿಸಿದ್ದ ತಂದೆ ಸುರೇಶ್, ಸಹೋದರ ವಿಷ್ಣು ಹಾಗೂ ಅಕ್ಕ ಸುಶ್ಮಿತಾ ಎಂಬುವರನ್ನೂ ಬಂಧಿಸಲಾಗಿತ್ತು. ಆರೋಪಿ ಕದಂಬನನ್ನು ಪೊಲೀಸ್ ವಶಕ್ಕೆ ಪಡೆದು, ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಓರ್ವನನ್ನು ಹೊರತುಪಡಿಸಿ ಉಳಿದವರಿಗೆ ನಿಖರವಾಗಿ ಇಂತಹದ್ದೇ ಕಾರಣಕ್ಕೆ ಚಾಕು ಇರಿದೆ ಎಂಬುದನ್ನು ಹೇಳಿಲ್ಲ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೂರ್ವ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದ್ದಾರೆ.
ಯಾಕೆ ಚಾಕು ಇರಿದೆ ಎಂದು ಗೊತ್ತಾಗಿಲ್ಲ ಎಂದ ಆರೋಪಿ : ಶುದ್ಧ ನೀರು ಘಟಕದಿಂದ ಕುಡಿಯಲು ನೀರು ತರಲು ಫೆಬ್ರವರಿ 8ರಂದು ರಾತ್ರಿ 9.30ರ ಸುಮಾರಿಗೆ ಹೋಗುತ್ತಿದ್ದ ಜಸ್ವಂತ್ ಎಂಬುವರನ್ನು ಬೈಕ್ನಲ್ಲಿ ಅಡ್ಡಗಟ್ಟಿದ್ದ ಆರೋಪಿ, 'ಎಡಕ್ಕೆ ಹೋಗುವಂತೆ ಸೂಚಿಸಿದರೂ ಬಲಕ್ಕೆ ಹೋಗಿದ್ದ. ಹೀಗಾಗಿ, ಚಾಕುವಿನಿಂದ ಹಲ್ಲೆ ಮಾಡಿದೆ. ಪಾನಿಪುರಿ ವ್ಯಾಪಾರಿ ದೀಪಕ್ ಸೇರಿ ಇನ್ನುಳಿದ ಮೂವರಿಗೆ ಯಾಕೆ ಚಾಕು ಇರಿದೆ ಎಂದು ಗೊತ್ತಾಗಿಲ್ಲ' ಎಂದು ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪದೇ ಪದೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಈ ಹಿಂದೆ ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಇದೇ ರೀತಿಯ ಹೇಳಿಕೆ ನೀಡಿದ್ದ. ಹೀಗಾಗಿ, ಕಳೆದ ವರ್ಷ ಈತನನ್ನು ರೌಡಿಪಟ್ಟಿಗೆ ಸೇರಿಸಲಾಗಿತ್ತು. ಈತನ ಸಹೋದರ ವಿಷ್ಣು ಕೂಡ ರೌಡಿಶೀಟರ್ ಆಗಿದ್ದು, ಈ ಹಿಂದೆ ಪೂರ್ವ ವಿಭಾಗ ಠಾಣೆಯವರು ಗಡಿಪಾರು ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಅಪಾರ್ಟ್ಮೆಂಟ್ನಲ್ಲಿ ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆ ಪ್ರಕರಣ: ಎಫ್ಐಆರ್ನಲ್ಲಿ ಏನಿದೆ?