ಮೈಸೂರು: ಹಿಟಾಚಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ನಾಗರಹಾವಿಗೆ ಪಶು ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನೀಡಿ ಜೀವ ಉಳಿಸಿದ್ದಾರೆ.
ಮೈಸೂರು ತಾಲೂಕಿನ ವರಗೋಡು ಗ್ರಾಮದ ಜಮೀನಿವೊಂದರಲ್ಲಿ ಮಣ್ಣು ತುಂಬುತ್ತಿದ್ದಾಗ ಹಿಟಾಚಿಗೆ ಸಿಲುಕಿ ನಾಗರಹಾವು ಗಂಭೀರವಾಗಿ ಗಾಯಗೊಂಡಿದೆ. ಇದರನ್ನು ಗಮನಿಸಿದ ಹಿಟಾಚಿ ಚಾಲಕ ಕೂಡಲೇ ಉರಗ ರಕ್ಷಕ ನಿತಿನ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ನಿತಿನ್ ಸ್ಥಳಕ್ಕಾಗಮಿಸಿ ಗಾಯಗೊಂಡಿದ್ದ ನಾಗರಹಾವನ್ನು ಮೈಸೂರು ನಗರದ ಪಶುವೈದ್ಯಕೀಯ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು, ಪಶುವೈದ್ಯರಾದ ಡಾ. ಯಶ್ವಂತ್ ಕುಮಾರ್ ಹಾವಿಗೆ 24 ಹೊಲಿಗೆ ಹಾಕಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಹಾವು ಚೇತರಿಸಿಕೊಂಡ ಬಳಿಕ ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಗಿದೆ.
ಈ ಬಗ್ಗೆ ಪಶುವೈದ್ಯ ಡಾ. ಯಶ್ವಂತ್ ಕುಮಾರ್ 'ಈಟಿವಿ ಭಾರತ' ಜೊತೆ ಮಾತನಾಡಿ, "ಜಮೀನಿನಲ್ಲಿ ಮಣ್ಣು ತುಂಬುವಾಗ ಹಿಟಾಚಿಗೆ ಸಿಲುಕಿ ಹಾವು ಗಂಭೀರವಾಗಿ ಗಾಯಗೊಂಡಿದೆ. ತಕ್ಷಣ ಹಾವನ್ನು ಪಶುವೈದ್ಯಕೀಯ ಆಸ್ಪತ್ರೆಗೆ ತರಲಾಯಿತು. ಇಲ್ಲಿ ಶಸ್ತ್ರಚಿಕಿತ್ಸೆ ನಡೆಸಿದ್ದರಿಂದ ಹಾವಿನ ಜೀವ ಉಳಿದಿದೆ. ಆದ್ದರಿಂದ ಈ ರೀತಿ ಘಟನೆಗಳಾದಾಗ ಧೈರ್ಯವಾಗಿ ಜನ ಹಾವನ್ನು ಆಸ್ಪತ್ರೆಗೆ ತೆಗೆದುಕೊಂಡು ಬಂದರೆ ಜೀವ ಉಳಿಸಬಹುದು" ಎಂದು ತಿಳಿಸಿದರು.
ಇದನ್ನೂ ಓದಿ: 'ಸುಳ್ಳು ಹಾವು': ಇದರಲ್ಲಿ ವಿಷದ ಪ್ರಮಾಣ ಎಷ್ಟಿರುತ್ತೆ ಗೊತ್ತಾ?