ಶಿವಮೊಗ್ಗ: ಕಡ್ಡಾಯವಾಗಿ ಜಿಪಿಎಸ್, ಪ್ಯಾನಿಕ್ ಬಟನ್ ಮತ್ತು ರೆಟ್ರೋ ರಿಫ್ಲೆಕ್ಟಿವ್ ಟೇಪ್ ಅಳವಡಿಕೆ ಸಂಬಂಧಿಸಿದಂತೆ ನಿಗದಿತ ಏಜೆನ್ಸಿ ಬಳಿಯೇ ಹಾಕಿಸಿಕೊಳ್ಳಬೇಕು ಎಂಬ ನಿಯಮ ಕೈಬಿಡಬೇಕು ಎಂದು ನಗರದ ಪ್ರವಾಸಿ ವಾಹನಗಳ ಮಾಲೀಕರು ಒತ್ತಾಯ ಮಾಡಿದ್ದಾರೆ.
ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಅಳವಡಿಸಿಕೊಳ್ಳದಿದ್ದರೆ ಆರ್ಟಿಒನಲ್ಲಿ ವಾಹನಗಳ ಪರವಾನಗಿ ನವೀಕರಣ ಮಾಡುತ್ತಿಲ್ಲ. ಇದರಿಂದ ವಾಹನ ಮಾಲೀಕರು ಸಮಸ್ಯೆ ಎದುರಿಸುವಂತಾಗಿದೆ. ಹೀಗಾಗಿ ಸರ್ಕಾರ ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಅಳವಡಿಸಿಕೊಳ್ಳದಿದ್ದರೂ ವಾಹನದ ಪರವಾನಗಿ ನವೀಕರಣಕ್ಕೆ ಅವಕಾಶ ಮಾಡಿಕೊಡಬೇಕು ಮತ್ತು ರೆಟ್ರೋ ರಿಫ್ಲೆಕ್ಟಿವ್ ಟೇಪ್ ಅನ್ನು ನಿಗದಿತ ಏಜೆನ್ಸಿ ಬಳಿಯೇ ಹಾಕಿಸಿಕೊಳ್ಳಬೇಕು ಎಂಬ ನಿಯಮ ಕೈಬಿಡಬೇಕು ಎಂದು ಆರ್ಟಿಒ ಜಂಟಿ ಆಯುಕ್ತ ಭೀಮನಗೌಡ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ಕಾರು ಮಾಲೀಕರಾದ ರಂಗನಾಥ 'ಈಟಿವಿ ಭಾರತ' ಜೊತೆ ಮಾತನಾಡಿ, "ಆರ್ಟಿಒದಲ್ಲಿ ನಮ್ಮ ವಾಹನ ನವೀಕರಣ ಮಾಡಬೇಕಾದರೆ ಅವರು ಹೇಳಿದ ಕಡೆ ಹೋಗಿ ರೆಟ್ರೋ ರಿಫ್ಲೆಕ್ಟಿವ್ ಟೇಪ್ ಹಾಕಿಸಬೇಕು, ಜಿಪಿಎಸ್ ಕೂಡ ಇವರು ಹೇಳಿದ ಕಡೆಯೇ ಹಾಕಿಸಿಕೊಳ್ಳಬೇಕು ಎಂಬುದು ಸರಿಯಲ್ಲ. ಒಂದು ಕಾರಿಗೆ ರೆಟ್ರೋ ರಿಫ್ಲೆಕ್ಟಿವ್ ಟೇಪ್ ಹಾಕಿಸಲು 2 ಸಾವಿರ ಖರ್ಚಾಗುತ್ತದೆ. ಆದರೆ, ಏಜೆನ್ಸಿಯವರು 6 ಸಾವಿರ ರೂ ಕೇಳುತ್ತಾರೆ. ಅದೇ ರೀತಿ ಜಿಪಿಎಸ್ ಅನ್ನು ಇವರು ಹೇಳಿದ ಕಡೆ ಹಾಕಿಸಿದರೆ 16 ಸಾವಿರ ರೂ ಆಗುತ್ತದೆ. ಅದೆ ಬೇರೆಕಡೆ ಹಾಕಿಸಿದರೆ 4 ಸಾವಿರ ರೂ ಮಾತ್ರ ಆಗುತ್ತದೆ. ಹೀಗಾಗಿ ಬೇರೆ ಕಡೆ ಇವುಗಳನ್ನು ಹಾಕಿಸಿಕೊಳ್ಳಲು ಅವಕಾಶ ಮಾಡಿಕೊಡಿ" ಎಂದು ವಿನಂತಿಸಿಕೊಂಡರು.