ಶರಾವತಿ ನೀರು ಬೆಂಗಳೂರಿಗೆ ಯೋಜನೆ ವಿರೋಧಿಸಿ ವೀರಶೈವ ಲಿಂಗಾಯತ ಮಹಾಸಭಾ ಪ್ರತಿಭಟನೆ (ETV Bharat) ಶಿವಮೊಗ್ಗ: ಬೆಂಗಳೂರಿಗೆ ಶರಾವತಿ ನದಿ ನೀರನ್ನು ತೆಗೆದುಕೊಂಡು ಹೋಗುವ ಯೋಜನೆ ಅವೈಜ್ಞಾನಿಕ ಹಾಗೂ ಪ್ರಕೃತಿಗೆ ವಿರುದ್ಧವಾಗಿದೆ. ಹಾಗಾಗಿ ಈ ಯೋಜನೆಯನ್ನು ಕೈಬಿಡಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಶಿವಮೊಗ್ಗ ಘಟಕ ಪ್ರತಿಭಟನೆ ನಡೆಸಿತು. ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿಗೆ ಮನವಿ ಪತ್ರವನ್ನು ನೀಡಿದ್ದು, ಡಿಸಿ ಪರವಾಗಿ ಕಚೇರಿ ಅಧಿಕಾರಿ ಮನವಿ ಪತ್ರ ಸ್ವೀಕರಿಸಿದರು.
"ಶರಾವತಿ ನೀರನ್ನು ಲಿಂಗನಮಕ್ಕಿ ಅಣೆಕಟ್ಟೆಯಿಂದ ಸುಮಾರು 400 ಕಿ.ಮೀ ದೂರಕ್ಕೆ ಒಯ್ಯುವುದು ವೈಜ್ಞಾನಿಕವಲ್ಲ. ಇಂತಹ ಯೋಜನೆಯಿಂದ ಯಾರಿಗೂ ಲಾಭವಿಲ್ಲ. ದಟ್ಟ ಕಾಡಿನ ನಡುವೆ 350 ಎಕರೆ ಜಾಗದಲ್ಲಿ ಪಂಪ್ಡ್ ಸ್ಟೋರೇಜ್ ಮಾಡಿ ವಿದ್ಯುತ್ ಉತ್ಪಾದಿಸುವುದು, ನದಿ ನೀರನ್ನು ಕೊಳವೆ ಮೂಲಕ 400 ಕಿ.ಮೀ ಹರಿಸುವಂಥ ಯೋಜನೆಗಳು ಪ್ರಪಂಚದ ಯಾವುದೇ ಮೂಲೆಯಲ್ಲಿಲ್ಲ. ಅದರಲ್ಲೂ ಮಲೆನಾಡಿನ ಹಳ್ಳಿಗಳಿಗೆ ಬೇಸಿಗೆಯಲ್ಲಿ ಟ್ಯಾಂಕರ್‌ನಲ್ಲಿ ನೀರು ಕೊಡುವ ಸ್ಥಿತಿ ಇರುವಾಗ ಇಂಥ ಬೃಹತ್ ಯೋಜನೆ ಯಾಕೆ?" ಎಂದು ಮಹಾಸಭಾ ಪ್ರಶ್ನಿಸಿದೆ.
"ಕೇವಲ 135 ಕಿ.ಮೀ ಹರಿಯುವ ಇಷ್ಟು ಚಿಕ್ಕ ನದಿಯ ಮೇಲೆ ಆಗಿರುವ ದೌರ್ಜನ್ಯ ಪ್ರಪಂಚದ ಬೇರೆ ಯಾವುದೇ ನದಿಯ ಮೇಲೂ ಆಗಿಲ್ಲ. ಇದು ನದಿ ತಿರುವು ಅಲ್ಲ. ಶರಾವತಿ ಅಪಹರಣ, ಇದೊಂದು ಹಾಸ್ಯಾಸ್ಪದ ಯೋಜನೆ ಆಗಿದೆ. ಹಿಂದೆ ಹಿರೇಭಾಸ್ಕರ ಅಣೆಕಟ್ಟು ನಿರ್ಮಿಸಿದ್ದರಿಂದ ಹೊನ್ನಾವರದಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ನದಿ ನೀರು ಸಮುದ್ರ ಸೇರುವವರೆಗೂ ಜೀವನಾಧಾರವಾಗಿರುವ ಹಲವು ಹಳ್ಳಿಗಳಿಗೆ ಸಂಕಷ್ಟ ಎದುರಾಗಿದೆ. ನದಿ ನೀರು ಸಮುದ್ರ ಸೇರುವುದು ಕಡಿಮೆಯಾದಲ್ಲಿ 15 ಕಿ.ಮೀ.ವರೆಗೆ ಉಪ್ಪು ನೀರು ನುಗ್ಗುತ್ತದೆ. ಅಲ್ಲಿನ ಜೀವವೈವಿಧ್ಯವೇ ಹಾಳಾಗುತ್ತಿದೆ. ಹಲವು ತಜ್ಞರು ಶರಾವತಿ ನೀರು ತಿರುವು ಅವೈಜ್ಞಾನಿಕ ಎಂದು ಹೇಳಿದ್ದರೂ, ಮತ್ತದೇ ಕಾರ್ಯಕ್ರಮವನ್ನು ಸರ್ಕಾರ ರೂಪಿಸುತ್ತಿದೆ" ಎಂದು ಮನವಿ ಪತ್ರದಲ್ಲಿ ಹೇಳಿದೆ.
ಈ ವೇಳೆ ಮಾತನಾಡಿದ ಶಿವಮೊಗ್ಗ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್ ಅವರು, "25 ಸಾವಿರ ಕೋಟಿ ವೆಚ್ಚ ಮಾಡಿ ಇಷ್ಟು ದೂರದಿಂದ ನೀರು ಕೊಂಡೊಯ್ದು ಏನು ಸಾಧಿಸಲು ಸಾಧ್ಯ. ಅಲ್ಲಿಯೇ ಇರುವ ನೀರಿನ ಸದ್ಬಳಕೆ ಮಾಡಿಕೊಂಡರೆ ಸಾಕು. ಅದಕ್ಕೆ ಸರ್ಕಾರ ಹಾಗೂ ಶಾಸಕರುಗಳ ಇಚ್ಛಾಶಕ್ತಿಯ ಅಗತ್ಯವಿದೆ. ಸರ್ಕಾರ ಈ ಅವೈಜ್ಞಾನಿಕ ಯೋಜನೆ ಜಾರಿಯಾಗದಂತೆ ತಡೆಯಬೇಕು. ಇಲ್ಲವಾದಲ್ಲಿ ಜಿಲ್ಲೆಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು" ಎಂದು ಪ್ರತಿಭಟನೆ ವೇಳೆ ಎಚ್ಚರಿಸಿದರು.
ಇದನ್ನೂ ಓದಿ:ಕೃಷ್ಣಾ ನದಿ ನೀರಿನ ಮಟ್ಟ ಹೆಚ್ಚಳ: ಉಗಾರ-ಕುಡಚಿ ಸೇತುವೆ ಜಲಾವೃತ - Kudachi bridge sink