ಕರ್ನಾಟಕ

karnataka

ETV Bharat / state

ಹಗರಣ ನಡೆದಿರುವುದು ನಿಜ, ಅದರಲ್ಲಿ ನಮ್ಮ ಪಾತ್ರವಿಲ್ಲ: ಸಿಎಂ ಉತ್ತರ ಖಂಡಿಸಿ ಪರಿಷತ್​ನಲ್ಲಿ ಪ್ರತಿಪಕ್ಷಗಳಿಂದ ಧರಣಿ - Valmiki Corporation scam

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಗರಣ ವಿಚಾರ ಪರಿಷತ್​ನಲ್ಲಿ ಇಂದೂ ಸಹ ಗದ್ದಲಕ್ಕೆ ದಾರಿ ಮಾಡಿಕೊಟ್ಟಿತು. ಪರಿಷತ್ ಪ್ರಶ್ನೋತ್ತರ ಕಲಾಪದ ನಂತರ ನಿಯಮ 68ರ ಅಡಿಯಲ್ಲಿ ನಿಲುವಳಿ ಸೂಚನೆ ಮೇಲಿನ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಉತ್ತರ ನೀಡಿದರು. ಸಿಎಂ ಲಿಖಿತ ಉತ್ತರ ಓದಿದ್ದಕ್ಕೆ ಬಿಜೆಪಿ, ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು.

KARNATAKA LEGISLATIVE COUNCIL
ವಿಧಾನ ಪರಿಷತ್ ಕಲಾಪ (ETV Bharat)

By ETV Bharat Karnataka Team

Published : Jul 22, 2024, 3:01 PM IST

Updated : Jul 22, 2024, 3:36 PM IST

ವಿಧಾನ ಪರಿಷತ್​​ನಲ್ಲಿ ಮಾತನಾಡುತ್ತಿರುವ ಸಿಎಂ ಸಿದ್ದರಾಮಯ್ಯ (ETV Bharat)

ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ ಹಗರಣ ನಡೆದಿರುವು ನಿಜ. ಆದರೆ, ಅದರಲ್ಲಿ ನಮ್ಮ ಯಾವುದೇ ಪಾತ್ರ ಇಲ್ಲ ಎಂದು ಹಗರಣ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ ನೀಡಿದ ಉತ್ತರ ಖಂಡಿಸಿ ಬಿಜೆಪಿ ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದ್ದು, ಪ್ರತಿಪಕ್ಷಗಳ ಪ್ರತಿಭಟನೆ ನಡುವೆ ಲಿಖಿತ ಉತ್ತರವನ್ನು ಸಿಎಂ ಸಿದ್ದರಾಮಯ್ಯ ಸದನದಲ್ಲಿ ಓದಿ ಮಂಡಿಸಿದರು.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದ ನಂತರ ನಿಯಮ 68ರ ಅಡಿಯಲ್ಲಿ ನಿಲುವಳಿ ಸೂಚನೆ ಮೇಲಿನ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡಿದರು. ವಾಲ್ಮೀಕಿ ನಿಗಮದಲ್ಲಿ ಅಕ್ರಮ ನಡೆದಿದೆ. 187 ಕೋಟಿ ಅಕ್ತಮವಾಗಿದೆ ಎಂದು ಆರೋಪಿಸಿದ್ದಾರೆ. ಇಡೀ ಚರ್ಚೆ ನೋಡಿದಾಗ ಸಿಎಂಗೆ ಕಳಂಕ ತರಬೇಕು, ಮಸಿ ಬಳಿಯಬೇಕು, ಎಸ್ಸಿ-ಎಸ್ಟಿ ಜನರ ವಿರುದ್ಧ ಇದ್ದೇವೆ ಎಂದು ಜನರಿಗೆ ತಿಳಿಸಲು ಸುಳ್ಳು ಆರೋಪ ಮಾಡಿದ್ದಾರೆ. ಅವರ ಆರೋಪದಲ್ಲಿ ಸತ್ಯಾಂಶವಿಲ್ಲ. ಅಕ್ರಮ ನಡೆದೇ ಇಲ್ಲ ಎಂದು ನಾನು ಹೇಳಲ್ಲ. ಆದರೆ, ಅಕ್ರಮಕ್ಕೆ ಸರ್ಕಾರ, ಹಣಕಾಸು ಇಲಾಖೆ, ಸಿದ್ದರಾಮಯ್ಯಗೆ ಸಂಬಂಧವಿಲ್ಲ. ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ. ಆದರೆ, ಯಾಕೆ ರಾಜೀನಾಮೆ ಕೊಡಬೇಕು? ಎಂದು ಪ್ರಶ್ನಿಸಿದರು.

ಅಕ್ರಮ ನಡೆದಿದೆ, ತನಿಖೆ ಪ್ರಾರಂಭವಾಗಿದೆ, ಅಂತಿಮವಾಗಿ ಸತ್ಯ ಹೊರಬರಲಿದೆ. ಈಗಲೇ ಇಂತವರು ತಪ್ಪು ಮಾಡಿದ್ದಾರೆ ಎನ್ನಲ್ಲ. ತನಿಖೆ ಮಾಡಿ ಆರೋಪಪಟ್ಟಿ ಸಲ್ಲಿಕೆಯಾದ ನಂತರ ಕೋರ್ಟ್​​ನಲ್ಲಿ ಆರೋಪ ಸಾಬೀತಾದಲ್ಲಿ ಶಿಕ್ಷೆ ಅನುಭವಿಸಲಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು, ಇದರಲ್ಲಿ ಎರಡನೇ ಮಾತಿಲ್ಲ. ಭ್ರಷ್ಟಾಚಾರದಲ್ಲಿ ಯಾರೇ ಭಾಗಿಯಾಗಿದ್ದರೂ ಕೋರ್ಟ್ ಮೂಲಕ ಶಿಕ್ಷೆ ಕೊಡಿಸುವ ಕೆಲಸ ಮಾಡಲಾಗುತ್ತದೆ. ಗೊಬೆಲ್ಸ್ ಥಿಯರಿ ತಂತ್ರಗಾರಿಕೆ ಬಳಸಿ ಸುಳ್ಳನ್ನೇ ಸಾವಿರ ಬಾರಿ ಹೇಳಿ ನಿಜ ಮಾಡುವ ತಂತ್ರವನ್ನು ಬಿಜೆಪಿಯವರು ಮಾಡುತ್ತಾರೆ ಎಂದು ಟೀಕಿಸಿದರು.

ವಿಧಾನ ಪರಿಷತ್​​ನಲ್ಲಿ ಮಾತನಾಡುತ್ತಿರುವ ಸಿಎಂ ಸಿದ್ದರಾಮಯ್ಯ (ETV Bharat)

ಸುಳ್ಳನ್ನು ಸತ್ಯ ಮಾಡುವುದು ಕಷ್ಟ. ಹಿಟ್ಲರ್ ತಾನೇ ಆತ್ಮಹತ್ಯೆ ಮಾಡಿಕೊಳ್ಳಲಿಲ್ಲವೇ? ಇಲ್ಲಿ ಸಿಎಂಗೆ ಮಸಿ ಬಳಿಯಬೇಕು, ಎಸ್ಸಿ-ಎಸ್ಟಿ, ಒಬಿಸಿ, ಅಲ್ಪಸಂಖ್ಯಾತ, ಮಹಿಳೆ, ರೈತ, ಕಾರ್ಮಿಕರಿಗೆ ವಿರುದ್ಧವಾಗಿದೆ ಎಂದು ಬಿಂಬಿಸುತ್ತಿದ್ದಾರೆ. ಆದರೆ, ಇದು ಬಿಜೆಪಿಗೆ ಅನ್ವಯ, ಇವರು ಸಾಮಾಜಿಕ ನ್ಯಾಯದ ಪರವಿಲ್ಲ. ಸಂವಿಧಾನವನ್ನೇ ವಿರೋಧ ಮಾಡಿದವರು ಬಿಜೆಪಿಯವರು. ಸಮಾನ ಅವಕಾಶ ಕಲ್ಪಿಸಿಕೊಡುವುದರ ಮೇಲೆಯೇ ಬಿಜೆಪಿಯವರಿಗೆ ನಂಬಿಕೆ ಇಲ್ಲ. ಈಗ ವಾಲ್ಮೀಕಿ ಪ್ರಕರಣ ಹಿಡಿದು ಇಡೀ ಕಾಂಗ್ರೆಸ್​ಗೆ ಮಸಿಬಳಿಯಲು ಯತ್ನಿಸಿದ್ದಾರೆ. ವಾಲ್ಮೀಕಿ ನಿಗಮದಲ್ಲಿ ಯಾರೇ ಅಕ್ರಮ ಮಾಡಿದ್ದರೂ ತಪ್ಪಿತಸ್ಥರನ್ನು ಯಾವ ಕಾರಣಕ್ಕೂ ಬಿಡಲ್ಲ ಎಂದರು.

ನಾವು ದಲಿತ, ಎಸ್ಸಿ-ಎಸ್ಟಿ ಪರ ಇಲ್ಲ ಎನ್ನಲು ಯಾವುದೇ ಆಧಾರ ಇಲ್ಲ. ನಮ್ಮ ರಾಜ್ಯದಲ್ಲಿ ಎಸ್ಸಿಪಿ ಟಿಎಸ್ಪಿ ಕಾಯ್ದೆ ಮಾಡಿದವರು ನಾವೇ. ಕೇಂದ್ರದಲ್ಲಿ ಮಾಡಿದ್ದಾರಾ? ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಮಾಡಿದ್ದಾರಾ? ನಮ್ಮ ಸರ್ಕಾರ ಮಾತ್ರ ಇದನ್ನು ಮಾಡಿದೆ. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಮಾಡಿದ್ದರಾ? ಎಲ್ಲಿಯೂ ಮಾಡಿಲ್ಲ. 10 ವರ್ಷದಿಂದ ಮೋದಿ ಇದ್ದಾರಲ್ಲ ಅವರು ಮಾಡಿದ್ದಾರಾ? ಅವರಿಗೆ ಯಾವ ಬದ್ಧತೆ ಇದೆ? ಕಾನೂನು ಮಾಡಿರುವವರು ನಾವು. 2018ರಲ್ಲಿ ನಾನು 29 ಸಾವಿರ ಕೋಟಿಗೂ ಹೆಚ್ಚು ಖರ್ಚು ಮಾಡಿದರೆ ನಂತರದ ಐದು ವರ್ಷ ಇವರು ಇದನ್ನು ದಾಟಿಲ್ಲ. ನಾವು ಈಗ 39 ಸಾವಿರ ದಾಟಿದ್ದೇವೆ. ಪ್ರತಿವರ್ಷ ಜಾಸ್ತಿಯಾಗಬೇಕೋ, ಇಲ್ಲವೋ, ಇವರು ಯಾಕೆ ಜಾಸ್ತಿ ಮಾಡಲಿಲ್ಲ? ಯಾರು ಎಸ್ಸಿ-ಎಸ್ಟಿ ವಿರೋಧಿಗಳು ಹಾಗಾದರೆ? ಅಂಬೇಡ್ಕರ್ ಹೇಳಿದಂತೆ ನಡೆದುಕೊಳ್ಳುತ್ತಿರುವ ಯಾವುದಾದರೂ ಸರ್ಕಾರ ಇದ್ದರೆ ಅದು ಕಾಂಗ್ರೆಸ್ ಸರ್ಕಾರ. ಸಿದ್ದರಾಮಯ್ಯ ಸರ್ಕಾರ ಎಂದು ಸಮರ್ಥಿಸಿಕೊಂಡರು.

ಇದಕ್ಕೆ ಬಿಜೆಪಿ ಸದಸ್ಯ ರವಿಕುಮಾರ್ ಆಕ್ಷೇಪಿಸಿದರು. ಗ್ಯಾರಂಟಿಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ. ಎಲ್ಲಿ ನೀವು ಹೇಳಿದ ಪ್ರಮಾಣದ ಹಣ ಬಳಕೆಯಾಗಿದೆ? ಎಂದು ಪ್ರಶ್ನಿಸಿದರು. ಇದಕ್ಕೆ ಕೆರಳಿದ ಸಿಎಂ, ಪದೇ ಪದೇ ಅಡ್ಡಿಪಡಿಸಿದರೆ ನಿಮಗೆ ಅಧಿಕಾರ ಇದೆ, ಸಚೇತಕರು ಮೂವ್ ಮಾಡಿದರೆ ಅಮಾನತು ಮಾಡಬಹುದು. ನಮ್ಮ ಕಡೆಯವರು ಏಳಬೇಡಿ, ವಿರೋಧಪಕ್ಷದವರು ಎದ್ದರೆ ಕೂರಬೇಡಿ, ತಾಳ್ಮೆಗೂ ಮಿತಿ ಇದೆ, ನಾನು ಬಿಜೆಪಿ ಸದಸ್ಯರ ಜೊತೆ ಮಾತನಾಡಲ್ಲ. ಸಭಾಪತಿಗಳ ಜೊತೆ ಮಾತ್ರ ಮಾತನಾಡುತ್ತೇನೆ, ಯೋಗ್ಯತೆ ಇಲ್ಲ ನಿಮಗೆ ಒಬ್ಬ ವಿರೋಧ ಪಕ್ಷದ ನಾಯಕರ ನೇಮಕ ಮಾಡಲಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.

ವಿಧಾನ ಪರಿಷತ್​​ನಲ್ಲಿ ಮಾತನಾಡುತ್ತಿರುವ ಸಿಎಂ ಸಿದ್ದರಾಮಯ್ಯ (ETV Bharat)

ಮತ್ತೆ ಮಧ್ಯಪ್ರವೇಶ ಮಾಡಿದ ಸಿಟಿ ರವಿ, ನಮ್ಮ ಸಂಶಯ ಪ್ರಶ್ನೆಗಳಿಗೆ ಅವರು ಉತ್ತರ ಕೊಡಬೇಕು. ಅದು ಅವರ ಕರ್ತವ್ಯ. ಸುಮ್ಮನೇ ಏನೇನೋ ಹೇಳುವುದಲ್ಲ ಎಂದರು. ಬಿಜೆಪಿ ನಡೆಗೆ ಅಸಮಧಾನಗೊಂಡ ಸಭಾಪತಿಗಳು ಹೀಗೆ ಮಾಡಿದರೆ ಸದನ ಮುಂದೂಡಿ ಹೊರಹೋಗುತ್ತೇನೆ ಅಷ್ಟೆ ಎಂದರು. ಅಷ್ಟಕ್ಕೂ ಸುಮ್ಮನಾಗದ ಸಿಟಿ ರವಿ, ಪ್ರಜಾಪ್ರಭುತ್ವ ಜಬರ್ ದಸ್ತಿ ಮೇಲೆ ನಡೆಯಲ್ಲ. ಮಾತನಾಡಲು ಅನುಮತಿ ಕೊಟ್ಟ ಮೇಲೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ಮಾಡುತ್ತಾರೆ. ಸಿಎಂ ದುರ್ಬಲರಾದಾಗ ನಮ್ಮ ವಿರುದ್ಧ ಕೆಂಡಕಾರುತ್ತಾರೆ ಎಂದರು. ಇದಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್ ಸದಸ್ಯರು, ಇಲ್ಲಿ ವಿರೋಧ ಪಕ್ಷದ ನಾಯಕರ ಆಡಿಷನ್ ನಡೆಯುತ್ತಿದೆ ಎಂದು ಲೇವಡಿ ಮಾಡಿದರು.

ನಂತರ ಮಾತು ಮುಂದುವರೆಸಿದ ಸಿಎಂ, ಗುತ್ತಿಗೆಯಲ್ಲಿ ಎಸ್ಸಿ-ಎಸ್ಟಿ ಮೀಸಲಾತಿ ತಂದಿದ್ದು ಯಾರು? ಇಡೀ ದೇಶದಲ್ಲಿ ನಾವೇ ಮೊದಲು ತಂದಿದ್ದು, ಕೇಂದ್ರದಲ್ಲಿ, ಅನೇಕ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಅಲ್ಲಿ ಯಾಕೆ ತಂದಿಲ್ಲ? ಬಡ್ತಿಯಲ್ಲಿ ಮೀಸಲಾತಿ ತಂದಿದ್ದು ಕಾಂಗ್ರೆಸ್ ಸರ್ಕಾರ ಎಂದರು. ಈ ವೇಳೆ ಮತ್ತೆ ಬಿಜೆಪಿ ಸದಸ್ಯರು ಅಡ್ಡಿಪಡಿಸಿದರು. ಇದಕ್ಕೆ ಅಸಮಧಾನಗೊಂಡ ಸಭಾಪತಿಗಳು, ನಡು ನಡುವೆ ಎದ್ದು ಅನಿಮತಿ ಇಲ್ಲದೆ ಮಾತನಾಡಿದರೆ ಹೊರಹಾಕುತ್ತೇನೆ ಎಂದು ಛಲವಾದಿ ನಾರಾಯಣಸ್ವಾಮಿಗೆ ಎಚ್ಚರಿಕೆ ನೀಡುತ್ತಾ ಇದು ಎಲ್ಲರಿಗೂ ಅನ್ವಯ ಆಗಲಿದೆ ಎಂದರು.

ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಿ ಟಿ ರವಿ ಮತ್ತು ರವಿಕುಮಾರ್ ನಡುವೆ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಪೈಪೋಟಿ ಇದೆ. ಹೈಕಮಾಂಡ್‌ ಮೆಚ್ಚಿಸಲು ಈ ರೀತಿ ನನಗೆ ಅಡ್ಡಿಪಡಿಸುತ್ತಿದ್ದಾರೆ ಎಂದರು. ಇದಕ್ಕೆ ತಿರುಗೇಟು ನೀಡಿದ ರವಿಕುಮಾರ್, ಎಸ್ಟಿ ಹಗರಣ ನಿಲುವಳಿ ತಂದರೆ ಬಿಜೆಪಿಯವರ ಬಗ್ಗೆ ಸಿಎಂ ಮಾತನಾಡುತ್ತಿದ್ದಾರೆ. ವಿಷಯಾಂತರ ಮಾಡಿದ್ದಾರೆ. ಇದನ್ನು ನಾವು ಒಪ್ಪಲ್ಲ ಎಂದರು.

ಬಿಜೆಪಿ‌ ಸದಸ್ಯರು ಪದೇ ಪದೇ ಅಡ್ಡಿಪಡಿಸಿದ್ದಕ್ಕೆ ಆಕ್ರೋಶಗೊಂಡ ಸಿಎಂ, ಹಗರಣ ಆಗಿದೆ ಎಂದು ಒಪ್ಪಿಕೊಂಡಿದ್ದೇನೆ. ತನಿಖೆ ನಡೆಯುತ್ತಿದೆ ಎಂದು ಒಪ್ಪಿಕೊಂಡಿದ್ದೇನೆ. ಇವರ ಗದ್ದಲದ ನಡುವೆ ಉತ್ತರಿಸಲಾಗಲ್ಲ. ಹಾಗಾಗಿ, ಲಿಖಿತ ಉತ್ತರ ಓದಿಬಿಡುತ್ತೇನೆ, ಕಡತಕ್ಕೆ ಸೇರಿಸಿ ಎನ್ನುತ್ತಾ ಉತ್ತರವನ್ನು ಓದಿದರು.

ಸಿಎಂ ಲಿಖಿತ ಉತ್ತರ ಓದಿದ್ದಕ್ಕೆ ಬಿಜೆಪಿ, ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು. ರಾಜಕೀಯ ಭಾಷಣ ನಿಲ್ಲಿಸಿ ಎಂದು ಘೋಷಣೆ ಕೂಗಿದರು.

ಸಭಾಪತಿ ಬಸವರಾಜ ಹೊರಟ್ಟಿ ಭಾಷಣ ಓದುವುದು ಬೇಡ ರೆಕಾರ್ಡ್ ಆಗಿದೆ ಎಂದು ಪ್ರಕಟಿಸಿದ್ದೇನೆ. ಎಲ್ಲರಿಗೂ ಪ್ರತಿ ನೀಡಿ ಎಂದರೂ ಕೇಳದ ಸಿಎಂ ಇಡೀ ಉತ್ತರವನ್ನು ಸದನದಲ್ಲಿ ಓದಿದರು. ನಂತರ ಸಭಾಪತಿಗಳು ಸಿಎಂ ಉತ್ತರವನ್ನು ಸದನದಲ್ಲಿ ಮಂಡಿಸಿರುವುದಾಗಿ ಪ್ರಕಟಿಸಿ ಕಲಾಪವನ್ನು ಸಮಯವನ್ನು ತಿಳಿಸದೆಯೇ ಮುಂದೂಡಿಕೆ ಮಾಡಿ ಅಚ್ಚರಿ ಮೂಡಿಸಿದರು.

ಇದನ್ನೂ ಓದಿ:ವಾಲ್ಮೀಕಿ ಹಗರಣದ ವಿರುದ್ಧ ಹೋರಾಟ ಮುಂದುವರೆಸುತ್ತೇವೆ: ಆರ್.ಅಶೋಕ್‌ - R Ashok

Last Updated : Jul 22, 2024, 3:36 PM IST

ABOUT THE AUTHOR

...view details