ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಆಗಿರುವ 187 ಕೋಟಿ ರೂ. ಅವ್ಯವಹಾರದ ಹಿನ್ನೆಲೆಯಲ್ಲಿ ಸಚಿವ ನಾಗೇಂದ್ರ ಜೂನ್ 6ರೊಳಗೆ ರಾಜೀನಾಮೆ ಬಿಜೆಪಿ ಗಡುವು ನೀಡಿದೆ. ಇನ್ನು ಸಚಿವರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಎಸ್.ಟಿ ಮೋರ್ಚಾದಿಂದ ಇಂದು ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕಲು ಇಂದು ಯತ್ನಿಸಲಾಯಿತು. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು, ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡರು.
ನಗರದ ಕುಮಾರ ಪಾರ್ಕ್ನಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಗೆ ಮುತ್ತಿಗೆ ಹಾಕಲು ಬಿಜೆಪಿ ಎಸ್.ಟಿ ಮೋರ್ಚಾ ಕಾರ್ಯಕರ್ತರು ತೆರಳಿದರು. ಸಚಿವ ಮತ್ತು ಸರ್ಕಾರರ ವಿರುದ್ಧ ಧಿಕ್ಕಾರ ಕೂಗಿದರು. ಕುಮಾರಪಾರ್ಕ್ ರಸ್ತೆಯ ಮೂಲಕ ಸಿಎಂ ನಿವಾಸದ ಕಡೆ ತೆರಳುತ್ತಿದ್ದಂತೆ ಅಶೋಕ ಹೋಟೆಲ್ ಬಳಿಯೇ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ತಡೆದರು. ಸಿಎಂ ನಿವಾಸದ ಮುಂದೆ ಪ್ರತಿಭಟನೆ, ಧರಣಿ, ಮುತ್ತಿಗೆಗೆ ಅವಕಾಶ ನಿರಾಕರಿಸಿದರು. ಇದನ್ನು ಒಪ್ಪದ ಬಿಜೆಪಿ ಎಸ್ಟಿ ಮೋರ್ಚಾ ಕಾರ್ಯಕರ್ತರು ಸಿಎಂ ನಿವಾಸ ಮುತ್ತಿಗೆ ಯತ್ನಕ್ಕೆ ಮುಂದಾದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಪ್ರತಿಭಟನಾ ನಿರತ ಕಾರ್ಯಕರ್ತರನ್ನು ವಶಕ್ಕೆ ಪಡೆದು ಸ್ಥಳದಿಂದ ಕರೆದೊಯ್ದರು.
ಬಿಜೆಪಿ ಗಡುವು:ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ದಲಿತರ ಹಣವನ್ನು ಕಾಂಗ್ರೆಸ್ ಸರ್ಕಾರ ಲೂಟಿ ಮಾಡಿದೆ. ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ಜೂನ್ 6 ರೊಳಗೆ ರಾಜೀನಾಮೆ ನೀಡದಿದ್ದರೆ ರಾಜ್ಯಾದ್ಯಂತ ಪ್ರತಿಭಟಿಸಲಾಗುವುದು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದಲಿತರ ಹಣ ನುಂಗಿದ ಕಾಂಗ್ರೆಸ್ ಎಂಬ ಬ್ಯಾನರ್ ಅಡಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುವುದು. ದಲಿತರ ಹಣವನ್ನು ಟಕಾಟಕ್ ಎಂದು ಲೂಟಿ ಮಾಡಿದ ಕಾಂಗ್ರೆಸ್ ಸರ್ಕಾರವನ್ನು ಟಕಾಟಕ್ ಎಂದೇ ಅಧಿಕಾರದಿಂದ ಕೆಳಕ್ಕಿಳಿಸುವ ದಿನ ದೂರವಿಲ್ಲ. ಈ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದರು.
ಪರಿಶಿಷ್ಟ ಪಂಗಡದ 187 ಕೋಟಿ ರೂ. ಹಣವನ್ನು ಗುಳುಂ ಮಾಡಿದ್ದೇ ಕಾಂಗ್ರೆಸ್ ಸರ್ಕಾರದ ಸಾಧನೆ. ಚುನಾವಣೆಗೆ ಮುನ್ನ ದಲಿತರ ಉದ್ಧಾರ ಎಂದು ಕಾಂಗ್ರೆಸ್ ಹೇಳುತ್ತಿತ್ತು. ನಂತರ ದಲಿತರನ್ನು ಶೋಷಣೆ ಮಾಡಿದೆ. ರಾಮನ ಹೆಸರು ಕಂಡರೆ ಆಗದ ಕಾಂಗ್ರೆಸ್‌ಗೆ ವಾಲ್ಮೀಕಿ ಹೆಸರಿನ ನಿಗಮವನ್ನೂ ಕಂಡರೆ ಆಗುವುದಿಲ್ಲ. ಹೆಣ್ಣುಮಕ್ಕಳಿಗೆ ಸುರಕ್ಷತೆ ಗ್ಯಾರಂಟಿ ಇಲ್ಲವೆಂದು ಗೊತ್ತಿತ್ತು. ಈಗ ಅಧಿಕಾರಿಗಳಿಗೂ ಗ್ಯಾರಂಟಿ ಇಲ್ಲ, ಹಣ ವರ್ಗಾಯಿಸಲು ಸಚಿವರು ಮೌಖಿಕವಾಗಿ ಸೂಚಿಸಿದ್ದಾರೆ ಎಂದು ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ ಚಂದ್ರಶೇಖರನ್ ಪತ್ರದಲ್ಲಿ ತಿಳಿಸಿದ್ದಾರೆ. ಜಿ.ಪದ್ಮನಾಭ್, ಸುಜಾ ಮೊದಲಾದ ಅಧಿಕಾರಿಗಳ ಹೆಸರನ್ನೂ ಉಲ್ಲೇಖಿಸಿದ್ದಾರೆ. ಈ ಪತ್ರದಲ್ಲಿ ಹಗರಣದ ಸಂಪೂರ್ಣ ವಿವರ ದಾಖಲೆಯೊಂದಿಗೆ ತಿಳಿಸಿದ್ದಾರೆ. ಇದಕ್ಕಿಂತ ಇನ್ನೇನು ಸಾಕ್ಷಿ ಬೇಕು ಎಂದು ಪ್ರಶ್ನಿಸಿದ್ದಾರೆ.