ಕಾರ್ಯಾಚರಣೆ ಬಗ್ಗೆ ಜಿಲ್ಲಾಧಿಕಾರಿ ಪ್ರತಿಕ್ರಿಯೆ (ETV Bharat) ಕಾರವಾರ (ಉತ್ತರ ಕನ್ನಡ):ಅಂಕೋಲಾದ ಶಿರೂರು ಬಳಿ ಗುಡ್ಡ ಕುಸಿತ ದುರಂತ ನಡೆದು ಎರಡು ತಿಂಗಳಾಗಿದೆ. ಘಟನೆಯಲ್ಲಿ ನಾಪತ್ತೆಯಾದವರ ಪೈಕಿ ಇನ್ನೂ ಮೂವರ ಮೃತದೇಹಗಳು ಪತ್ತೆಯಾಗಿಲ್ಲ. ಮಳೆ ಹಾಗೂ ನದಿಯ ಹರಿವಿನ ವೇಗ ಹೆಚ್ಚಿದ್ದ ಕಾರಣಕ್ಕೆ ಸ್ಥಗಿತಗೊಳಿಸಿದ್ದ ಕಾರ್ಯಾಚರಣೆಯನ್ನು ಪುನಃ ಪ್ರಾರಂಭಿಸುವ ಆಗ್ರಹ ಕೇಳಿಬಂದಿದೆ.
ಧಾರಾಕಾರ ಮಳೆಯಿಂದ ಅಂಕೋಲಾ ತಾಲೂಕಿನ ಶಿರೂರು ಬಳಿ ಬೃಹತ್ ಪ್ರಮಾಣದಲ್ಲಿ ಗುಡ್ಡ ಕುಸಿತವಾಗಿ ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿದ್ದ ಹೋಟೆಲ್, ಮನೆ ಹಾಗೂ ಬೃಹತ್ ಲಾರಿಗಳು ಕೊಚ್ಚಿ ನದಿಗೆ ಬಿದ್ದಿದ್ದವು. ಅಲ್ಲದೇ ಇದೇ ವೇಳೆ ಹೋಟೆಲ್, ಮನೆಯಲ್ಲಿದ್ದ ಒಟ್ಟು 11 ಮಂದಿ ನಾಪತ್ತೆಯಾಗಿದ್ದರು. ಪಕ್ಕದ ಉಳುವರೆ ಗ್ರಾಮದ ಹಲವು ಮನೆಗಳು ಧರಾಶಾಹಿಯಾಗಿದ್ದವು.
ಶಿರೂರು ಬಳಿ ಗುಡ್ಡಕುಸಿತ ಆಗಿದ್ದ ಸಂದರ್ಭದ ಚಿತ್ರ (ETV Bharat) ಉತ್ತರಕನ್ನಡ ಜಿಲ್ಲಾಡಳಿತ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚಾರ ಸುಗಮಗೊಳಿಸಲು ಹರಸಾಹಸಪಟ್ಟಿತ್ತು. ರಕ್ಷಣಾ ತಂಡಗಳು ಕೂಡ ಘಟನೆಯಲ್ಲಿ ನಾಪತ್ತೆಯಾದವರ ಶೋಧಕ್ಕಾಗಿ ಮಳೆ ನಡುವೆಯೇ ತಿಂಗಳುಗಳ ಕಾಲ ಕಾರ್ಯಾಚರಣೆ ನಡೆಸಿದ್ದವು. ಆದರೆ, 8 ಮಂದಿ ಮೃತದೇಹಗಳು ಮಾತ್ರ ಪತ್ತೆಯಾಗಿದ್ದವು. ಕಣ್ಮರೆಯಾದ ಇನ್ನೂ ಮೂವರ ಸುಳಿವು ಈವರೆಗೂ ಸಿಕ್ಕಿಲ್ಲ.
ಕೂಡಲೇ ನಾಪತ್ತೆಯಾದವರ ಹುಡುಕಾಟ ನಡೆಯಬೇಕಿದೆ:ಇದೀಗ ಮಳೆ ಕಡಿಮೆಯಾಗಿದೆ. ಕೂಡಲೇ ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಸಬೇಕು. ಅಲ್ಲದೆ, ಶಾಸಕರು ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ, ಮತ್ತೆ ಕಾರ್ಯಾಚರಣೆಗೆ ಉತ್ಸುಕತೆ ತೋರಿದ್ದಾರೆ. ನದಿಯಲ್ಲಿರುವ ಮಣ್ಣಿನ ರಾಶಿಯನ್ನು ತೆರವು ಮಾಡಬೇಕಾಗಿದೆ. ಇಲ್ಲದಿದ್ದರೆ, ಮುಂದೊಂದು ದಿನ ನದಿ ತನ್ನ ದಿಕ್ಕನ್ನು ಬದಲಿಸಿ ರಾಷ್ಟ್ರೀಯ ಹೆದ್ದಾರಿಯೂ ಕೊಚ್ಚಿ ಹೋಗುವ ಆತಂಕ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಶಿರೂರು ದುರ್ಘಟನೆಯಲ್ಲಿ ಕೇರಳ ಮೂಲದ ಲಾರಿ ಚಾಲಕ ಅರ್ಜುನ್, ಶಿರೂರಿನ ಜಗನ್ನಾಥ ನಾಯ್ಕ ಮತ್ತು ಗಂಗೆಕೊಳ್ಳದ ಲೊಕೇಶ ನಾಯ್ಕ ಇದುವರೆಗೆ ಪತ್ತೆಯಾಗಿಲ್ಲ. ಮನೆಯವರನ್ನು ಕಳೆದುಕೊಂಡ ಕುಟುಂಬಸ್ಥರು ಸಾಕಷ್ಟು ಬಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿ ಮೃತದೇಹಗಳನ್ನು ಹುಡುಕಿಕೊಡುವಂತೆ ಅಂಗಲಾಚಿದ್ದರು. ಕಾರ್ಯಾಚರಣೆ ಮುಂದುವರಿಸುವಂತೆ ಕಾರವಾರ ಶಾಸಕ ಸತೀಶ ಸೈಲ್ ಕೂಡ ಜಿಲ್ಲಾಡಳಿತದ ಮೇಲೆ ಒತ್ತಡ ಹಾಕಿದ್ದರು. ಆದರೆ, ಹವಾಮಾನ ವೈಪರೀತ್ಯದ ಕಾರಣದಿಂದ ಕಾರ್ಯಾಚರಣೆ ನಡೆಸಲು ಕಷ್ಟವಾಗಿತ್ತು.
ಜಿಲ್ಲಾಧಿಕಾರಿ ಹೇಳಿದ್ದೇನು?: ''ಶಿರೂರಿನ ಗುಡ್ಡ ಕುಸಿತವಾದ ಸ್ಥಳದಲ್ಲಿ ಗಂಗಾವಳಿ ನದಿಯಲ್ಲಿ ಡ್ರೆಜಿಂಗ್ ಯಂತ್ರದ ಮೂಲಕ ಶೋಧ ಕಾರ್ಯಾಚರಣೆ ನಡೆಸಲು ಪ್ಲ್ಯಾನ್ ಮಾಡಲಾಗಿದೆ. ಹೀಗಾಗಿ, ಅಭಿಶೇನಿಯಾ ಒಶಿಯನ್ ಸರ್ವಿಸ್ ಕಂಪನಿಯಿಂದ ಮಹಾರಾಷ್ಟ್ರದಿಂದ ಡ್ರೆಜಿಂಗ್ ಯಂತ್ರ ತರಿಸುವ ಸಿದ್ಧತೆ ನಡೆದಿದೆ. ಪ್ರತಿಕೂಲ ವಾತಾವರಣ ಕಡಿಮೆಯಾದ ಬಳಿಕ ಸೆಪ್ಟೆಂಬರ್ 16ರಿಂದ ಮತ್ತೆ ಕಾರ್ಯಾಚರಣೆ ನಡೆಸಲಾಗುವುದು'' ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಮಾಹಿತಿ ನೀಡಿದರು.
ಇದನ್ನೂ ಓದಿ:18 ರಿಂದ ಹುಬ್ಬಳ್ಳಿ- ಪುಣೆ ವಂದೇ ಭಾರತ್ ಸಂಚಾರ ಆರಂಭ: ದರ ಎಷ್ಟು ಗೊತ್ತಾ? - Vande Bharat ticket rate