ಕಾರವಾರ: ಬಿಜೆಪಿ ಭದ್ರಕೋಟೆ ಉತ್ತರ ಕನ್ನಡ ಕ್ಷೇತ್ರದಲ್ಲಿ ಮತ್ತೆ ಕಮಲ ಅರಳಿದೆ. ಈ ಬಾರಿ ಸೋಲಿಲ್ಲದ ಸರದಾರನಾಗಿದ್ದ ಅನಂತ್ ಕುಮಾರ್ ಹೆಗಡೆಗೆ ಟಿಕೆಟ್ ಕೈ ತಪ್ಪಿದ್ದು ಬಿಜೆಪಿ ಸೋಲಿಗೆ ಕಾರಣವಾಗಲಿದೆ ಎನ್ನಲಾಗಿತ್ತು. ಆದರೆ ವಿಶ್ವೇಶ್ವರ ಹೆಗಡೆ ಕಾಗೇರಿ 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ಉತ್ತರ ಕನ್ನಡ ಕ್ಷೇತ್ರವನ್ನು ಬಿಜೆಪಿಯ ಭದ್ರಕೋಟೆ ಎಂದೇ ಕರೆಯಲಾಗುತ್ತದೆ. ಅನಂತ್ ಕುಮಾರ್ ಹೆಗಡೆ ಈ ಕ್ಷೇತ್ರದಿಂದ 6 ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಈ ಬಾರಿ ಹೆಗಡೆಗೆ ಟಿಕೆಟ್ ನೀಡದೆ, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಮಣೆ ಹಾಕಲಾಗಿತ್ತು. ಕ್ಷೇತ್ರದಲ್ಲಿ ಹೆಗಡೆ ತನ್ನದೇ ಆದ ಹಿಡಿತ ಇಟ್ಟುಕೊಂಡಿದ್ದು, ಈ ಬಾರಿ ಅವರಿಗೆ ಟಿಕೆಟ್ ಕೊಡದೇ ಇರುವುದು ದೊಡ್ಡ ಹಿನ್ನಡೆಗೆ ಕಾರಣವಾಗಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ವಿರುದ್ಧ ಕಾಗೇರಿ ಭರ್ಜರಿ ಗೆಲುವು ಪಡೆದಿದ್ದಾರೆ.
ಕಾಗೇರಿಗೆ ದಾಖಲೆಯ ಗೆಲುವು: ಮೊದಲ ಸುತ್ತಿನಿಂದಲೇ ಗೆಲುವಿನ ಅಂತರ ಏರಿಸಿಕೊಂಡು ಹೊರಟ ಕಾಗೇರಿ ಅಂತಿಮವಾಗಿ 7,82,495 ಮತಗಳನ್ನು ಪಡೆಯುವ ಮೂಲಕ ಗೆದ್ದು ಬೀಗಿದರು. ಡಾ.ಅಂಜಲಿ ನಿಂಬಾಳ್ಕರ್ 4,45,067 ಮತಗಳನ್ನು ಪಡೆಯುವ ಮೂಲಕ ಸೋಲುಂಡಿದ್ದಾರೆ. ಸುಮಾರು 3,37,428 ಲಕ್ಷ ಮತಗಳ ಅಂತರದಲ್ಲಿ ಕಾಗೇರಿ ಗೆಲುವು ಪಡೆದಿದ್ದು, ಈ ಮೂಲಕ ರಾಜ್ಯದಲ್ಲೇ ಅತೀ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಪಡೆದ ಕೀರ್ತಿಗೆ ಪಾತ್ರರಾಗಿದ್ದಾರೆ.