ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆ ವೇಗವಾಗಿ ಹರಡುತ್ತಿದೆ. ಮಂಗನಕಾಯಿಲೆಗೆ ಸೋಮವಾರ ಒಂದೇ ದಿನ ಇಬ್ಬರು ಬಲಿಯಾಗಿದ್ದು,ಸಾವಿನ ಸಂಖ್ಯೆ 5ಕ್ಕೆ ಏರಿದೆ. ಮಂಗನ ಕಾಯಿಲೆ ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಿಸಿದ್ದು, ಸಿದ್ದಾಪುರ ತಾಲೂಕು ಮಂಗನ ಕಾಯಿಲೆಯ ಹಾಟ್ ಸ್ಪಾಟ್ ಆಗಿದೆ.
ಒಂದೇ ದಿನ ಇಬ್ಬರು ಬಲಿ:ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಹೆಗ್ಗೆಕೊಪ್ಪ ಹೆಗ್ಗೆಕೊಪ್ಪದ 80 ವರ್ಷದ ವೃದ್ಧ ಮಂಗನ ಕಾಯಿಲೆಯಿಂದ ಸೋಮವಾರ ಸಂಜೆ ಮೃತಪಟ್ಟರೆ, ಇಂದು ಬೆಳಗ್ಗೆ ಕಲ್ಲೂರಿನ 68 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದರು. ಇದರಿಂದ ಸಿದ್ದಾಪುರ ತಾಲೂಕಿನಲ್ಲಿ ಇಲ್ಲಿಯವರೆಗೆ ಮಂಗನ ಕಾಯಿಲೆಗೆ 5 ಜನ ಬಲಿಯಾಗಿದ್ದಾರೆ. ಇಬ್ಬರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದ ಪರಿಣಾಮ ಸಾವನ್ನಪ್ಪಿದ್ದು, ಕ್ರಮೇಣ ಸಾವಿನ ಸಂಖ್ಯೆಯಲ್ಲೂ ಕೂಡ ಏರಿಕೆಯಾಗಿದೆ.
ಮಂಗನ ಕಾಯಿಲೆ ಸೋಂಕು ಹೇಗಿರುತ್ತದೆ ?:ಸೋಂಕಿತ ಮಂಗನ ರಕ್ತ ಹೀರುವ ಉಣ್ಣೆಗಳು ಈ ವೈರಸ್ ಅನ್ನು ಮನುಷ್ಯರಿಗೆ ತಗುಲಿಸಿದಾಗ ಮೂರು - ನಾಲ್ಕು ದಿನಗಳ ನಂತರ ಇದ್ದಕ್ಕಿದ್ದಂತೆ ಜ್ವರ, ದೃಷ್ಟಿದೋಷ, ತಲೆನೋವು, ಮಾನಸಿಕ ಅಸಮತೋಲನ, ಮೈ ಕೈ ನೋವು, ವಾಂತಿ, ಅತಿಸಾರ ಮತ್ತು ಪ್ಲೆಟ್ಲೇಟ್ ಸಂಖ್ಯೆಯಲ್ಲಿ ಇಳಿಕೆಯಾಗುತ್ತದೆ. ಅಲ್ಲದೇ ಒಸಡಿನಲ್ಲಿ ರಕ್ತಸ್ರಾವ ಆಗುತ್ತದೆ. ಹೀಗೆ ಆರಂಭಿಕ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈವರೆಗೆ ಈ ರೋಗಕ್ಕೆ ನಿಖರ ಔಷದ ಕಂಡು ಹಿಡಿಯಲಾಗಿಲ್ಲ. ಆದರೆ, ಜಿಲ್ಲೆಯಲ್ಲಿ ಸದ್ಯ ಕಾಡಿನೊಂದಿಗೆ ಸಂಪರ್ಕ ಹೊಂದಿರುವ ಕೆಲ ಭಾಗದಲ್ಲಿ ಮತ್ತು ಮಂಗನ ಕಾಯಿಲೆ ಕಾಣಿಸಿಕೊಂಡ ಪ್ರದೇಶದಲ್ಲಿ ತೈಲವನ್ನು ನೀಡಲಾಗುತ್ತಿದೆ.