ಬೆಂಗಳೂರು: ''ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರು ಸಮೀಪದಲ್ಲೇ ಮೊಬೈಲ್ ಉತ್ಪಾದನಾ ಕಂಪನಿ ಆರಂಭವಾಗಲಿದೆ. ಇದರಿಂದ 40 ಸಾವಿರ ಉದ್ಯೋಗ ಸೃಷ್ಟಿಯಾಗುವ ಗುರಿ ಇದೆ'' ಎಂದು ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಮಲ್ಲೇಶ್ವರ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ''ಮುಂದಿನ ಸಲ ಬಂದಾಗ ನಾನು ಈ ಕಂಪನಿಗೆ ಭೇಟಿ ಕೊಡುತ್ತೇನೆ. ಉತ್ಪಾದನಾ ವಲಯಕ್ಕೂ ಕೇಂದ್ರ ಬಜೆಟ್ ಹೆಚ್ಚಿನ ಆದ್ಯತೆ ನೀಡಿದೆ. ಉದ್ಯೋಗ ಸೃಷ್ಟಿಯಾಗುವುದೇ ಉತ್ಪಾದನಾ ವಲಯದಿಂದ. ಮೊಬೈಲ್ ಫೋನ್, ಎಲೆಕ್ಟ್ರಾನಿಕ್ಸ್, ಸೆಮಿಕಂಡಕ್ಟರ್, ಫುಟ್‌ವೇರ್ ಉತ್ಪಾದಕ ವಲಯಗಳಿಗೆ ಬಜೆಟ್ ಪುಷ್ಟಿ ನೀಡಿದೆ'' ಎಂದು ಹೇಳಿದರು.
ಕರ್ನಾಟಕ ರೈಲ್ವೆಗೆ 7,564 ಕೋಟಿ ರೂ. ಅನುದಾನ :''ಬಜೆಟ್ನಲ್ಲಿ ಕರ್ನಾಟಕ ರೈಲ್ವೆಗೆ 7,564 ಕೋಟಿ ರೂ. ಅನುದಾನ ನೀಡಲಾಗಿದೆ. ಯುಪಿಎ ಅವಧಿಯಲ್ಲಿ 850 ಕೋಟಿ ರೂ. ಕೊಡಲಾಗುತ್ತಿತ್ತು. 51,479 ಕೋಟಿಯಷ್ಟು ರೈಲ್ವೇ ವಲಯದಲ್ಲಿ ಬಂಡವಾಳ ಹೂಡಲಾಗಿದೆ. ಅಮೃತ್ ಸ್ಟೇಷನ್ ಯೋಜನೆಯಡಿ 61 ರೈಲ್ವೇ ನಿಲ್ದಾಣಗಳ ಮರು ನಿರ್ಮಾಣ ಆಗಿದೆ. 1,652 ಕಿ.ಮೀ. ಹೊಸ ರೈಲ್ವೇ ಮಾರ್ಗದ ನಿರ್ಮಾಣ ರಾಜ್ಯದಲ್ಲಾಗಿದೆ. 10 ವಂದೇ ಭಾರತ್ ರೈಲುಗಳು ಕರ್ನಾಟಕದಲ್ಲಿ ಸಂಚರಿಸುತ್ತಿವೆ, ಮತ್ತಷ್ಟು ಬರಲಿವೆ. ಸಬ್ ಅರ್ಬನ್ ರೈಲ್ವೇ ಯೋಜನೆಗೆ 15,762 ಕೋಟಿ ರೂ. ಕೊಡಲಾಗಿದೆ. 15,611 ಕೋಟಿ ರೂ. ಮೆಟ್ರೋಗೆ ಕೊಡಲಾಗಿದೆ'' ಎಂದು ಮಾಹಿತಿ ನೀಡಿದರು.
''ಕಳೆದ 60 ವರ್ಷದಲ್ಲಿ ಆಗದಿರುವ ಕೆಲಸ ಪ್ರಧಾನಿ ನರೇಂದ್ರ ಮೋದಿ ಅವಧಿಯಲ್ಲಿ ಆಗಿದೆ. ಒಂದು ಮತ್ತು ಎರಡನೇ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯ ದೇಶದ ಯಾವ ಭಾಗಕ್ಕೆ ಹೋದರೂ ಕಾಣುತ್ತದೆ. 12 ಲಕ್ಷದವರೆಗೆ ತೆರಿಗೆ ಇಲ್ಲದಿರುವುದು ಐಐಎಂ, ಐಐಟಿ ಇದೆಲ್ಲಾ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಿದೆ. ವಾಜಪೇಯಿ ಅವಧಿ ಬಳಿಕ ಯುಪಿಎ ಅವಧಿಯಲ್ಲಿ ಭಾರತದ ಆರ್ಥಿಕತೆ ಬಹಳ ಕೆಟ್ಟ ಪರಿಸ್ಥಿತಿ ಇತ್ತು. 2014 ರಲ್ಲಿ ಬ್ಯಾಂಕಿಂಗ್ ವಲಯ ಅಷ್ಟು ಉತ್ತಮವಾಗಿರಲಿಲ್ಲ. ಪ್ರಧಾನಿ ಮೋದಿ ಅದಕ್ಕೊಂದು ಆಯಾಮ ನೀಡಿದರು. ಪ್ರತಿ ವರ್ಷ ಹೈವೇ, ರೈಲ್ವೇ, ಏರ್ ಪೋರ್ಟ್ ಅಭಿವೃದ್ಧಿ ಆಯಿತು'' ಎಂದು ಹೇಳಿದರು.