ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಆರು ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದ್ದು, ಇಂದು 7 ಹೊಸ ರೈಲುಗಳನ್ನು ಉದ್ಘಾಟಿಸಲಿದ್ದಾರೆ. ಸಂಜೆ ನಾಲ್ಕು ಗಂಟೆಗೆ ನಾನು ಕೊಲ್ಹಾಪುರ-ಪುಣೆ ರೈಲಿಗೆ ಹಸಿರು ನಿಶಾನೆ ತೋರಿಸುತ್ತೇನೆ. ಬಳಿಕ ಬೆಳಗಾವಿಯಲ್ಲಿ ಪುಣೆಯಿಂದ ಬರುವ ವಂದೇ ಭಾರತ ರೈಲು ಬರಮಾಡಿಕೊಳ್ಳುತ್ತೇನೆ ಎಂದು ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದರು.
ತಾಂತ್ರಿಕ ಸಮಸ್ಯೆ ನೆಪವೊಡ್ಡಿ ಬೆಳಗಾವಿ-ಬೆಂಗಳೂರು ವಂದೇ ಭಾರತ್ ರೈಲು ಕೈ ಬಿಟ್ಟ ವಿಚಾರಕ್ಕೆ ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಬಂದು ಮೂರು ತಿಂಗಳು ಆಗಿದೆ. ಹಳೆಯದೆಲ್ಲಾ ಕೆದಕಿ ಕೆಲಸ ಮಾಡಲು ಆಗೋದಿಲ್ಲ. ಬೆಳಗಾವಿಗೆ ಈಗ ಒಂದು ವಂದೇ ಭಾರತ್ ರೈಲು ಬರುತ್ತಿದೆ. ಕೆಲವೇ ದಿನಗಳಲ್ಲಿ ಮತ್ತೊಂದು ರೈಲು ಬರಲಿದೆ. ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲಿನ ಬಗ್ಗೆ ನಾನು, ಪ್ರಧಾನಿ ಮೋದಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಂಸದ ಜಗದೀಶ ಶೆಟ್ಟರ್ ಕುಳಿತುಕೊಂಡು ಚರ್ಚಿಸಿದ್ದೇವೆ. ಮೋದಿಯವರು ಹಳೆಯದು ಏನಾಯಿತು ಎಂದು ಕೆದಕಲು ಹೋಗಬಾರದು ಎಂದು ಮನವರಿಕೆ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡರು.
ದಿ.ಸುರೇಶ ಅಂಗಡಿ ಅವರು ಇದ್ದ ಸಂದರ್ಭದಲ್ಲಿ ಬೆಳಗಾವಿ-ಕಿತ್ತೂರು-ಹುಬ್ಬಳ್ಳಿ ನೇರ ರೈಲು ಮಾರ್ಗ ವಿಚಾರದಲ್ಲಿ ಸರ್ವೇ ಕೆಲಸದ ಕುರಿತು ನಾನು ಕೂಡ ಇಲ್ಲಿನ ಜಿಲ್ಲಾಧಿಕಾರಿಗಳನ್ನು ಸಂಪರ್ಕ ಮಾಡಿದ್ದೇನೆ. ಹೇಗಾದರು ಮಾಡಿ ಈ ಅವಧಿಯಲ್ಲೇ ನೇರ ರೈಲಿನ ವ್ಯವಸ್ಥೆ ಮಾಡುತ್ತೇವೆ ಎಂದು ಸಚಿವ ವಿ.ಸೋಮಣ್ಣ ಭರವಸೆ ನೀಡಿದರು.