ಹುಬ್ಬಳ್ಳಿ :ಕಾಂಗ್ರೆಸ್ ಅಧಿಕಾರಕ್ಕೆ ಬರುವುದಕ್ಕಾಗಿ ದೇಶವನ್ನು ಒಡೆಯೋದಕ್ಕೆ ಹಿಂದೆ ಮುಂದೆ ನೋಡುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ. ಬಸವ ಜಯಂತಿ ಹಿನ್ನೆಲೆ ಕೇಶ್ವಾಪುರದಲ್ಲಿನ ಬಸವೇಶ್ವರ ಪ್ರತಿಮೆಗೆ ಮಾರ್ಲಾಪಣೆ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಯಾಮ್ ಪಿತ್ರೋಡಾ ಹೇಳಿಕೆ ದೇಶ ಒಂದೇ ಇರಲಿಲ್ಲ ಅನ್ನೋದು ಅವರ ಮಾತಿನ ಅರ್ಥ. ಕಾಂಗ್ರೆಸ್ ಪಕ್ಷ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ದೇಶವನ್ನು ಒಂದು ಮಾಡೋ ವಿಚಾರದಲ್ಲಿ ಇಲ್ಲ ಎಂದರು.
ದೇಶ ಒಡೆಯೋ ವಿಚಾರ ಕಾಂಗ್ರೆಸ್ನವರಿಗೆ ಇದೆ. ನಾವು ಬಂದ ಮೇಲೆ ದೇಶ ಒಂದಾಯ್ತು ಅಂತಾರೆ. ಇನ್ನು ಡಿ ಕೆ ಸುರೇಶ್, ದಕ್ಷಿಣ ಭಾರತ ಬೇರೆ ರಾಷ್ಟ್ರ ಆಗಬೇಕು ಅಂತಾರೆ. ಶ್ಯಾಮ್ ಪಿತ್ರೋಡಾ ಜನರ ಚರ್ಮದ ಬಣ್ಣದ ಆಧಾರದ ಮೇಲೆ ದೇಶ ಒಡೆಯೋ ಹುನ್ನಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿ ಇರದೇ ಹೋದರೆ ದೇಶ ಒಡೆಯೋಕು ಹಿಂದೆ ಮುಂದೆ ನೋಡಲ್ಲ ಅನ್ನೋದು ಇದರಿಂದ ಸ್ಪಷ್ಟವಾಗುತ್ತಿದೆ ಎಂದು ಹರಿಹಾಯ್ದರು.
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಸಂಪೂರ್ಣ ಗೊಂದಲ ಇದೆ. ನಮ್ಮ ನಿಲುವು ಸ್ಪಷ್ಟವಾಗಿದೆ. ಶಿಕ್ಷೆ ಆಗಬೇಕು. ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಆದರೆ ಸರ್ಕಾರ ಈ ಬಗ್ಗೆ ಸಮರ್ಪಕ ಉತ್ತರ ಕೊಡಲಿಲ್ಲ. 21ಕ್ಕೆ ವಿಡಿಯೋ ಬಂದಿವೆ. ಕೇವಲ ಹಾಸನ ಅಲ್ಲ, ಹುಬ್ಬಳ್ಳಿಗೂ ಬಂದಿವೆ. ಸರ್ಕಾರ ಏಕೆ ಎಫ್ಐಆರ್ ಮಾಡಲಿಲ್ಲ. ಏಕೆ ವಿದೇಶಕ್ಕೆ ಹೋಗದಂತೆ ತಡೆಯಲಿಲ್ಲ. ಈ ಪ್ರಶ್ನೆಗೆ ಇನ್ನೂ ಉತ್ತರ ಬಂದಿಲ್ಲ ಎಂದರು.
ರೇವಣ್ಣ ಅವರ ವಿಷಯದಲ್ಲಿ ಸಂಶಯಕ್ಕೆ ಎಡೆಮಾಡಿಕೊಡುವಂತೆ ಸರ್ಕಾರದ ವರ್ತನೆ ಇದೆ. ಕಿಡ್ನ್ಯಾಪ್ ಪ್ರಕರಣಕ್ಕೆ ಸರಿಯಾದ ದಾಖಲೆಗಳಿಲ್ಲ. ಹೀಗಾಗಿ ಇದನ್ನು ಸಿಬಿಐಗೆ ಕೊಡಬೇಕು. ಇಲ್ಲದೇ ಹೋದ್ರೆ ಡಿ. ಕೆ ಶಿವಕುಮಾರ್ ರಾಜೀನಾಮೆ ಕೊಡಲಿ ಎಂದು ಆಗ್ರಹಿಸಿದರು. ಡಿ. ಕೆ ಶಿವಕುಮಾರ್ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ. ಎಸ್ಐಟಿ ತನಿಖೆ ಸಮರ್ಪಕವಾಗಿಲ್ಲ. ಆದರೆ ಈ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಮಹಿಳಾ ಕುಲಕ್ಕೆ ಅಪಮಾನ ಎಂದರು.
ಕುಮಾರಸ್ವಾಮಿ ಅವರು ಡಿ. ಕೆ ಶಿವಕುಮಾರ್ ಕುರಿತು ಪುಂಖಾನುಪುಂಖವಾಗಿ ಮಾತಾಡಿದ್ದಾರೆ. ಸರ್ಕಾರ ಅನೇಕ ಪ್ರಶ್ನೆಗಳಿಗೆ ಉತ್ತರ ಕೊಡಲಿಲ್ಲ. ಹೀಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸಲಿ. ಎಲ್ಲವೂ ತನಿಖೆ ಆಗಲಿ ಎಂದರು.