ನವದೆಹಲಿ/ಹುಬ್ಬಳ್ಳಿ: ಕೋವಿಡ್ ಚಿಕಿತ್ಸೆಗೆ ಸಂಬಂಧಪಟ್ಟ ನೇತೃತ್ವದ ವಿಚಾರಣಾ ಆಯೋಗದ ವರದಿ ಬಗ್ಗೆ ನೀಡಿದ ಹೇಳಿಕೆಯಿಂದ ವಿವಾದ ಸೃಷ್ಟಿಯಾದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಡಿ.ಕುನ್ಹಾ ಅವರಿಗೆ ಪತ್ರ ಬರೆದು ಕ್ಷಮೆ ಕೋರಿದ್ದಾರೆ.
ಈ ಹಿಂದೆ ರಾಜ್ಯ ವಿಧಾನಸಭೆ ಉಪ ಚುನಾವಣೆ ವೇಳೆ ಪ್ರಚಾರ ಭಾಷಣದಲ್ಲಿ 'ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ಹಗರಣ ನಡೆದಿದೆ' ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸುವಾಗ ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಡಿ.ಕುನ್ಹಾ ನೇತೃತ್ವದ ವಿಚಾರಣಾ ಆಯೋಗದ ವರದಿ ಬಗ್ಗೆ ಪ್ರಸ್ತಾಪಿಸಿದ್ದು ವಿವಾದಕ್ಕೆ ಕಾರಣವಾಗಿತ್ತು.
ನ್ಯಾಯಮೂರ್ತಿ ಅವರಲ್ಲಿ ಕ್ಷಮೆ:ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಇದಕ್ಕೆ ಸ್ಪಷ್ಟನೆ ನೀಡಿದ್ದಲ್ಲದೆ, ವಾಸ್ತವದಲ್ಲಿ ತಾವೇನು ಮಾತನಾಡಿದ್ದೇನೆ ಎಂಬುದರ ಬಗ್ಗೆ ವಿವರಿಸಿ ನ್ಯಾಯಮೂರ್ತಿ ಕುನ್ಹಾ ಅವರಿಗೆ ಪತ್ರ ಬರೆದಿದ್ದಾರೆ. ಅಲ್ಲದೇ, ''ವಿವಾದಾತ್ಮಕ ಹೇಳಿಕೆಯಿಂದ ತಮ್ಮ ಮನಸ್ಸಿಗೆ ನೋವುಂಟು ಮಾಡಿದ್ದರೆ ಅದಕ್ಕಾಗಿ ಪ್ರಾಮಾಣಿಕವಾಗಿ ಕ್ಷಮೆಯಾಚಿಸುವೆ'' ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಸಚಿವ ಪ್ರಲ್ಹಾದ್ ಜೋಶಿ ಪತ್ರ (ETV Bharat) ಪತ್ರದ ಸಾರಾಂಶ:''ನನ್ನ ಸುದೀರ್ಘ ವರ್ಷಗಳ ರಾಜಕೀಯ ಮತ್ತು ಸಾರ್ವಜನಿಕ ಜೀವನದಲ್ಲಿ ಯಾವತ್ತೂ ಪ್ರತ್ಯಕ್ಷ - ಪರೋಕ್ಷವಾಗಿ ನ್ಯಾಯಾಂಗದ ಸದಸ್ಯರ ಖ್ಯಾತಿಗೆ ಚ್ಯುತಿ ಬರುವಂತೆ ನಡೆದುಕೊಂಡಿಲ್ಲ ಮತ್ತು ಹೇಳಿಕೆಯನ್ನೂ ನೀಡಿಲ್ಲ. ನಾನು ಇತ್ತೀಚೆಗೆ ನೀಡಿದ ಹೇಳಿಕೆ ಮೇಲ್ನೋಟಕ್ಕೆ ವಿವಾದ ಹುಟ್ಟುಹಾಕಿದೆ. ಆದರೆ, ಯಾವತ್ತೂ ನ್ಯಾಯಾಂಗದ ಸದಸ್ಯರ ಖ್ಯಾತಿ ತಗ್ಗಿಸುವ ಪ್ರವೃತ್ತಿ ತೋರಿಲ್ಲ. ನ್ಯಾಯಾಂಗ ಮತ್ತು ತಮ್ಮ ಬಗ್ಗೆ ಈಗಲೂ ಗೌರವವಿದೆ'' ಎಂದು ಜೋಶಿ ವಿವರಿಸಿದ್ದಾರೆ.
ಇದನ್ನೂ ಓದಿ:ವಿವಾದಾತ್ಮಕ ಹೇಳಿಕೆ ಸಂಬಂಧ ಪ್ರಕರಣ ದಾಖಲಾದರೆ ಪ್ರಲ್ಹಾದ್ ಜೋಶಿ ಜೈಲಿಗೆ: ದಿನೇಶ್ ಗುಂಡೂರಾವ್
''ನ್ಯಾಯಾಂಗ ಮತ್ತು ಗೌರವಾನ್ವಿತ ನ್ಯಾಯಾಧೀಶರು ಸಂವಿಧಾನದ ಕವಚವಾಗಿದ್ದಾರೆ. ನ್ಯಾಯದಾನದ ಪವಿತ್ರ ಕರ್ತವ್ಯದಲ್ಲಿ ಪ್ರಮುಖ ಪಾತ್ರ ಹೊಂದಿದವರೆಂದು ನಂಬಿದವನಾಗಿದ್ದೇನೆ. ಆದರೆ, ತಮ್ಮ ನೇತೃತ್ವದ ಸಮಿತಿ ವರದಿ ಉಲ್ಲೇಖಿಸಿ ಇತ್ತೀಚೆಗೆ ನೀಡಿದ ಹೇಳಿಕೆ ಅವಹೇಳನದಿಂದ ಕೂಡಿದೆ ಎಂಬ ಆರೋಪ ಕೇಳಿಬಂದಿದ್ದು, ಇದಕ್ಕಾಗಿ ತಮ್ಮಲ್ಲಿ ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತೇನೆ'' ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಖ್ಯಾತಿ ಕುಗ್ಗಿಸುವ ಯತ್ನ ನನ್ನದಾಗಿರಲಿಲ್ಲ:''ಸಿಎಂ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರ ತರಾತುರಿಯಲ್ಲಿ ನ್ಯಾಯಮೂರ್ತಿ ಮೈಕೆಲ್ ಡಿ.ಕುನ್ಹಾ ಅವರಿಂದ ವರದಿ ತರಿಸಿಕೊಂಡಿದೆ ಎಂದು ಹೇಳಿದ್ದೇನೆಯೇ ಹೊರತು ತಮ್ಮ ಮೇಲೆ ಯಾವುದೇ ವೈಯಕ್ತಿಕ ಹೇಳಿಕೆ ನೀಡಿಲ್ಲ. ತಮಗೆ ಮತ್ತು ಆಯೋಗಕ್ಕೆ ಅಪಕೀರ್ತಿ ತರಲು ಅಥವಾ ಜನರ ಮನಸ್ಸಿನಲ್ಲಿ ನಿಮ್ಮ ಇಮೇಜ್ ಕಡಿಮೆ ಮಾಡುವ ಉದ್ದೇಶದ್ದೂ ಅಲ್ಲ'' ಎಂದಿದ್ದಾರೆ.
''ಆಯೋಗದ ಸದಸ್ಯರಾಗಿ ತಮ್ಮ ಕರ್ತವ್ಯ ನಿರ್ವಹಣೆ ಮತ್ತು ನಿಷ್ಪಕ್ಷಪಾತವನ್ನು ಅನುಮಾನಿಸಲು ನನಗೆ ಯಾವುದೇ ಕಾರಣವಿಲ್ಲ ಎಂಬುದನ್ನು ಈ ಮೂಲಕ ನೇರವಾಗಿ ತಮ್ಮ ಗಮನಕ್ಕೆ ತರಲು ಬಯಸಿದ್ದೇನೆ. ನನ್ನ ಹೇಳಿಕೆಗಳು ತಮಗೆ ಯಾವುದೇ ನೋವು ಅಥವಾ ಅನುಮಾನ ಉಂಟುಮಾಡಿದ್ದರೆ ಅದಕ್ಕೆ ವಿಷಾದಿಸುತ್ತೇನೆ ಮತ್ತು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ'' ಎಂದು ಸಚಿವ ಜೋಶಿ ಅವರು ಮೈಕಲ್ ಡಿ.ಕುನ್ಹಾ ಅವರಲ್ಲಿ ಕೋರಿದ್ದಾರೆ.
ಇದನ್ನೂ ಓದಿ:ನ್ಯಾ. ಕುನ್ಹಾ ಅವರಿಗೆ ಏಜೆಂಟ್ ಎಂದು ನಾನು ಕರೆದಿಲ್ಲ: ಇಂಟಿಗ್ರಿಟಿ ಪ್ರಶ್ನೆ ಮಾಡ್ತೀನಿ ಅನ್ನಿಸಿದರೆ ವಿಷಾದಿಸುತ್ತೇನೆ, ಪ್ರಲ್ಹಾದ್ ಜೋಶಿ