ಬೆಂಗಳೂರು:ಕರ್ನಾಟಕಕ್ಕೆ ಒಂದೇ ಒಂದು ರೂಪಾಯಿಯನ್ನು ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿಲ್ಲ. ರಾಜ್ಯಕ್ಕೆ ಸಕಾಲದಲ್ಲಿ ಅನುದಾನವನ್ನು ಕೊಡಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯ ಸರ್ಕಾರಕ್ಕೆ ತಿರುಗೇಟು ನೀಡಿದರು.
ಬೆಂಗಳೂರಿನಲ್ಲಿ ಭಾನುವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಕಿ ಅಂಶದೊಂದಿಗೆ ರಾಜ್ಯ ಸರ್ಕಾರದ ತಾರತಮ್ಯ ಆರೋಪಕ್ಕೆ ವಾಗ್ದಾಳಿ ನಡೆಸಿದರು.
15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ ಎಲ್ಲಾ ಹಣವನ್ನು ಕರ್ನಾಟಕಕ್ಕೆ ನೀಡಲಾಗಿದೆ. ರಾಜ್ಯದ ತೆರಿಗೆ ಹಂಚಿಕೆಯಲ್ಲಿ ಕಳೆದ 10 ವರ್ಷದಲ್ಲಿ ಶೇ.258ರಷ್ಟು ಹೆಚ್ಚಳವಾಗಿದೆ. ಕೇಂದ್ರದ ಸಹಾಯಾನುದಾನದಲ್ಲಿ ಶೇ.273ರಷ್ಟು ಏರಿಕೆಯಾಗಿದೆ ಎಂದು ವಿವರಿಸಿದರು.
ರಾಜ್ಯದ ತೆರಿಗೆ ಹಂಚಿಕೆ 2004-14ರ ಅವಧಿಯಲ್ಲಿ ವಾರ್ಷಿಕ 81,795 ಕೋಟಿ ರೂ. ಇತ್ತು. ಅದೇ ಮೋದಿ ಸರ್ಕಾರದ ಅವಧಿಯಲ್ಲಿ 2014-2024ರ ಫೆಬ್ರವರಿವರೆಗೆ 2,93,226 ಕೋಟಿ ರೂ.ಗೆ ಏರಿಕೆಯಾಗಿದೆ. ಹೀಗಾಗಿ ಸುಳ್ಳು ಆರೋಪ ಮಾಡಬೇಡಿ. ಅಂಕಿಅಂಶ ಇಟ್ಟು ಮಾತನಾಡಿ. ಜನರ ದಾರಿ ತಪ್ಪಿಸುವುದು ಸರಿಯಲ್ಲ. ವಾಸ್ತವಾಂಶವನ್ನು ನೋಡಿ ಎಂದು ತಿರುಗೇಟು ಕೊಟ್ಟರು.
15ನೇ ಹಣಕಾಸು ಆಯೋಗ ಕರ್ನಾಟಕಕ್ಕೆ 5,495 ಕೋಟಿ ರೂ ವಿಶೇಷ ಅನುದಾನದ ಶಿಫಾರಸು ಮಾಡಿದ್ದು, ಅದನ್ನು ಬಿಡುಗಡೆ ಮಾಡಿಲ್ಲ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ಪದೇ ಪದೆ ಆರೋಪಿಸುತ್ತಿದೆ. ಆದರೆ ಅದೊಂದು ಅಪ್ಪಟ ಸುಳ್ಳು ಆರೋಪ. ಆಯೋಗ ತನ್ನ ಅಂತಿಮ ವರದಿಯಲ್ಲಿ ಅಂಥ ಯಾವುದೇ ಶಿಫಾರಸು ಮಾಡಿಲ್ಲ. ನಾವು ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡಿದರೂ ಕಾಂಗ್ರೆಸ್ ಸರ್ಕಾರ ಸುಳ್ಳು ಹೇಳುತ್ತಿದ್ದು, ಇಬ್ಬಗೆ ನೀತಿ ಅನುಸರಿಸುತ್ತಿದೆ ಎಂದು ಕಿಡಿ ಕಾರಿದರು.
ಇದನ್ನೂ ಓದಿ:ಮನೆಯಿಂದ ಆದಾಯ ಪಡೆಯುತ್ತಿದ್ದಿರಾ? ಈ ಟ್ಯಾಕ್ಸ್ ವಿವರಗಳ ಬಗ್ಗೆ ತಿಳಿಯಿರಿ
ಯುಪಿಎ ಕಾಲದ 12ನೇ ಹಣಕಾಸು ಆಯೋಗದ ವೇಳೆ ಒಟ್ಟು ತೆರಿಗೆಯಲ್ಲಿ ಕರ್ನಾಟಕದ ಪಾಲು ಶೇ.30.5 ಇತ್ತು. ಅದು ಕಾಂಗ್ರೆಸ್ ಸರ್ಕಾರಕ್ಕೆ ಸರಿಯಾಗಿತ್ತು. ಇನ್ನು 13ನೇ ಹಣಕಾಸು ಆಯೋಗದ ಶಿಫಾರಸಿನಂತೆ ಕರ್ನಾಟಕದ ಪಾಲು ಶೇ.32. ಅದು ಕಾಂಗ್ರೆಸ್ ಸರ್ಕಾರಕ್ಕೆ ಸಮ್ಮತವಾಗಿತ್ತು. 15ನೇ ಹಣಕಾಸು ಆಯೋಗದ ಶಿಫಾರಸನ್ನು ಮೋದಿ ಸರ್ಕಾರ ಬಂದ ಬಳಿಕ ಸ್ವೀಕರಿಸಲಾಗಿತ್ತು. ಅದರಂತೆ ರಾಜ್ಯದ ಪಾಲು ಶೇ.42ಗೆ ಏರಿಕೆಯಾಯಿತು. ಆದರೆ ಈ ಹೆಚ್ಚಳವಾಗಿರುವುದನ್ನು ಕಾಂಗ್ರೆಸ್ ಒಪ್ಪುತ್ತಿಲ್ಲ. ಕಡಿಮೆ ಕೊಡುತ್ತಿರುವಾಗ ಸಮ್ಮತವಾಗಿತ್ತು. ಈಗ ಹೆಚ್ಚಿಗೆ ಕೊಡುವಾಗ ಅದನ್ನು ಒಪ್ಪುತ್ತಿಲ್ಲ ಎಂದು ವಾಗ್ದಾಳಿ ಮಾಡಿದರು.
ಬೆಂಗಳೂರಲ್ಲಿ ಯಾದಗಿರಿಯವನೂ ಕೆಲಸ ಮಾಡುತ್ತಾನೆ, ಕಾರವಾರದವನೂ ಕೆಲಸ ಮಾಡುತ್ತಾನೆ. ತೆರಿಗೆಯಲ್ಲಿ ಅವನ ಕೊಡುಗೆಯೂ ಇದೆ. ಹೊರ ರಾಜ್ಯದವರೂ ಇಲ್ಲಿ ಕೆಲಸ ಮಾಡಿ ತೆರಿಗೆ ಕೊಡುತ್ತಾರೆ. ಆದರೆ ರಾಜ್ಯ ಸರ್ಕಾರ ರಾಜ್ಯ ಇಷ್ಟು ತೆರಿಗೆ ಸಂಗ್ರಹಿಸಿದೆ, ಅದನ್ನು ನಮಗೆ ವಾಪಸ್ ಮಾಡಿ ಎಂಬ ವಾದ ಸಂಕುಚಿತ ಮನೋಭಾವದ್ದು. ಇದೊಂದು ರಾಜಕೀಯ ಆರೋಪವಷ್ಟೇ. ರಾಜ್ಯದ ಜನರು ಅದಕ್ಕೆ ಮರುಳಾಗಬಾರದು ಎಂದು ತಿಳಿಸಿದರು.
ಇದನ್ನೂ ಓದಿ:ತೆರಿಗೆ ಉಳಿತಾಯಕ್ಕೆ 10 ಬೆಸ್ಟ್ ಹೂಡಿಕೆ ವಿಧಾನಗಳು ಇಲ್ಲಿವೆ ನೋಡಿ - Tax saving
ಜಲ ಜೀವನ್ ಮಿಷ್‌ನ ಯೋಜನೆ ಅಡಿ ಬೆಂಗಳೂರಲ್ಲಿ 72,489 ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ರಾಷ್ಟ್ರದಲ್ಲಿ ಒಟ್ಟು 11 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಬೆಂಗಳೂರಲ್ಲಿ 28,075 ಶೌಚಾಲಯ ಕಟ್ಟಲಾಗಿದೆ ಮತ್ತು 323 ಜನೌಷಧಿ ಕೇಂದ್ರ ತೆರೆಯಲಾಗಿದೆ. ಜನೌಷಧಿ ಕೇಂದ್ರ ಸ್ಥಾಪನೆಯಲ್ಲಿ ಕರ್ನಾಟಕವು 2ನೇ ಸ್ಥಾನದಲ್ಲಿದೆ. ಪ್ರಧಾನ ಮಂತ್ರಿ ಆವಾಜ್ ಯೋಜನೆಯಡಿ ಬೆಂಗಳೂರಲ್ಲಿ 1.95 ಲಕ್ಷ ಮನೆಗಳಿಗೆ ಮಂಜೂರಾತಿ ನೀಡಲಾಗಿದೆ. ಉಜ್ವಲ ಯೋಜನೆಯಡಿ ಬೆಂಗಳೂರು ನಗರದಲ್ಲಿ 30,220 ಫಲಾನುಭವಿಗಳಿದ್ದಾರೆ. ಪಿಎಂ ಗರೀಬ್ ಕಲ್ಯಾಣ ಅನ್ನ ಯೋಜನೆಯಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ 32.51 ಲಕ್ಷ ಜನರು ಉಚಿತ ಪಡಿತರ ಪಡೆಯುತ್ತಿದ್ದಾರೆ ಎಂದು ಅಂಕಿಅಂಶ ಮುಂದಿಟ್ಟರು.
ಇದನ್ನೂ ಓದಿ:ಕೇಂದ್ರದಿಂದ ರಾಜ್ಯಕ್ಕೆ 25,435 ಕೋಟಿ ಅನುದಾನ ಇಳಿಕೆ: ಹಣಕಾಸು ಆಯೋಗದ ವರದಿಯಲ್ಲಿ ವಿವರಣೆ
ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆ ರಾಷ್ಟ್ರವಾಗಿ ಮಾಡಿ ಜಗತ್ತಿನ ಟಾಪ್-3 ಎಕಾನಮಿ ಮಾಡಲು ಕೇಂದ್ರ ಸರ್ಕಾರ ಹಲವು ಯೋಜನೆ ಕೈಗೊಂಡು ದೇಶದ ಅಭಿವೃದ್ಧಿಗೆ ಮುಂದಾಗುತ್ತಿದೆ. ಜಾಗತಿಕ ಆರ್ಥಿಕತೆಯಲ್ಲಿ 10ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಭಾರತ ಏರಿದೆ. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ನಿಮ್ಮ ಮನೆಯನ್ನು ಸೌರ ವಿದ್ಯುತ್ ಕೇಂದ್ರವನ್ನಾಗಿ ಪರಿವರ್ತಿಸಲು ಅವಕಾಶ ಒದಗಿಸುತ್ತಿದೆ. ನಿಮ್ಮ ಮಹಡಿಯಲ್ಲಿ ರೂಫ್ ಟಾಪ್ ಸೌರ ವಿದ್ಯುತ್ ಘಟಕ ಸ್ಥಾಪಿಸಲು ವಿಶೇಷ ಸಬ್ಸಿಡಿ ಘೋಷಿಸಿದೆ. ಅದರಿಂದ ಉತ್ಪತ್ತಿಯಾಗುವ ವಿದ್ಯುತ್ಅನ್ನು ನೀವು ಬಳಸುವ ಜೊತೆಗೆ ವಿದ್ಯುತ್ ಸರ್ಕಾರಕ್ಕೆ ಮಾರಾಟ ಮಾಡುವ ಹೊಸ ಯೋಜನೆ ಜಾರಿಗೆ ತರಲಾಗುತ್ತಿದೆ. ಈ ಯೋಜನೆಯ ಹೆಸರು ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜಿಲಿ ಯೋಜನೆ. ಮೇಲ್ಛಾವಣಿ ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸುವ ಮನೆಗಳಿಗೆ ಉಚಿತ ವಿದ್ಯುತ್ ನೀಡುವ ಗುರಿ ಹೊಂದಿರುವ ಯೋಜನೆ ಇದಾಗಿದೆ ಎಂದರು.
ಇದನ್ನೂ ಓದಿ:ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಬೇಕೆ? ಹಾಗಾದ್ರೆ ಸರಿಯಾದ ITR ಫಾರ್ಮ್ ಆಯ್ಕೆಮಾಡುವುದು ಹೇಗೆ ಗೊತ್ತಾ? - Income Tax Return Form