ಬೆಂಗಳೂರು: ಎಡಿಜಿಪಿ ಚಂದ್ರಶೇಖರ್ಗೆ ಎಲ್ಲಿ ಬೆದರಿಕೆ ಹಾಕಿದ್ದೇನೆ?. ರಾಜಕೀಯವಾಗಿ ದೂರು ನೀಡಿದ್ದಾರೆ. ಅವರು ನನಗೆ ಹೆದರಬೇಕಿಲ್ಲ. ನಾನೂ ಅವರಿಗೆ ಹೆದರಬೇಕಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಲೋಕಾಯುಕ್ತ ಎಸ್ಐಟಿ ಎಡಿಜಿಪಿ ಚಂದ್ರಶೇಖರ್ ಬೆದರಿಕೆ ದೂರು ನೀಡಿರುವುದರ ವಿಚಾರವಾಗಿ ಬೆಂಗಳೂರಿನ ತಮ್ಮ ನಿವಾಸದ ಬಳಿ ಪ್ರತಿಕ್ರಿಯಿಸುತ್ತಾ, ನಾನು ಬೆದರಿಕೆ ಹಾಕಿದ್ದೇನಾ?. ಯಾವಾಗ ಬೆದರಿಕೆ ಹಾಕಿದ್ದೇನೆ?. ನಿಮ್ಮ ಮುಂದೆನೇ ಮಾತನಾಡಿದ್ದಲ್ವಾ?. ನಿಮ್ಮ ಮುಂದೆ ಬೆದರಿಕೆಯಾಗಿ ಮಾತನಾಡಿದ್ದೇನಾ?. ಕೆಲವು ವಿಚಾರಗಳನ್ನು ಪ್ರಸ್ತಾಪ ಮಾಡಿದ್ದೇನೆ ಅಷ್ಟೇ. ಈಗ ನನ್ನ ವಿರುದ್ಧ ದೂರು ನೀಡಿದ್ದಾರೆ, ನೀಡಲಿ. ಎಂದು ತಿಳಿಸಿದರು.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (ETV Bharat) ಅದು ನ್ಯಾಯಾಲಯಕ್ಕೆ ಬರುತ್ತೆ. ಅಲ್ಲಿ ಎದುರಿಸೋಣ. ನಾನು ಎಲ್ಲಿಯೂ ಹೆದರಿ ಓಡಿಹೋಗಲ್ಲ. ಅವರೂ ನನಗೆ ಹೆದರಬೇಕಾಗಿಲ್ಲ. ನಾನೂ ಅವರಿಗೆ ಹೆದರಬೇಕಾಗಿಲ್ಲ. ನನ್ನ ವಿರುದ್ಧ 12 ವರ್ಷಗಳಿಂದ ಗಣಿಗಾರಿಕೆ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ. ಯಾವಾಗ ಕರೆದರೂ ಹೋಗಿದ್ದೇನೆ. ಬರುವುದಿಲ್ಲ ಅಂದಿದ್ದೇನಾ ಎಂದು ಪ್ರಶ್ನಿಸಿದರು.
ನಿನ್ನೆ ನೀಡಿದ ದೂರಿನ ಹಿಂದೆ ರಾಜಕೀಯ ಇದೆ. ಕರ್ನಾಟಕ ಸರ್ಕಾರ ಅವರನ್ನು ರಕ್ಷಿಸುತ್ತೆ, ರಕ್ಷಿಸಲಿ. ಕೋರ್ಟ್ ಇದೆ, ಅಲ್ಲಿ ಎದುರಿಸುತ್ತೇನೆ. ನ್ಯಾಯಾಲಯದಲ್ಲಿ ನಮಗೆ ನಂಬಿಕೆ ಇದೆ. ಆ ಬಗ್ಗೆ ರಾಜಕೀಯವಾಗಿ ಬೀದಿಯಲ್ಲಿ ನಾನು ನಿತ್ಯ ಚರ್ಚೆ ಮಾಡಲಾ?. ಆ ವ್ಯಕ್ತಿ ನಿನ್ನೆ ನೀಡಿದ ದೂರು ಬಗ್ಗೆ ಕೋರ್ಟ್ನಲ್ಲಿ ನಮ್ಮ ವಕೀಲರು ಏನು ಸಮಜಾಯಿಷಿ ಕೊಡಬೇಕೋ ಕೊಡುತ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ:ಕುಮಾರಸ್ವಾಮಿ, ನಿಖಿಲ್, ಸುರೇಶ್ ಬಾಬು ವಿರುದ್ಧ ಪೊಲೀಸರಿಗೆ ದೂರು ನೀಡಿದ ಎಡಿಜಿಪಿ ಚಂದ್ರಶೇಖರ್