ಬೆಂಗಳೂರು: ಬಾಕಿ ಬಿಲ್ ಪಾವತಿ ಮಾಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವೆಂಡರ್ಸ್ ಪತ್ರ ಬರೆದಿರುವ ಪ್ರಕರಣ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಉಡಾಫೆ ಮಾತನ್ನಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಜೆಪಿ ನಗರದ ತಮ್ಮ ನಿವಾಸದ ಬಳಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಉಡಾಫೆ ಮಾತುಗಳನ್ನಾಡುವುದು ಬಿಟ್ಟು ಮೊದಲು ಕಿಯೋನಿಕ್ಸ್ ವೆಂಡರ್ಸ್ಗಳ ಬಾಕಿ ಬಿಲ್ಗಳನ್ನು ಚುಕ್ತಾ ಮಾಡಲಿ ಎಂದು ಒತ್ತಾಯಿಸಿದರು.
ಈ ಸರ್ಕಾರ ಗುತ್ತಿಗೆದಾರರು ಹಾಗೂ ವೆಂಡರ್ಸ್ಗಳ ಬಿಲ್ ಪಾವತಿಸಲು ಮೀನಮೇಷ ಎಣಿಸುತ್ತಿದೆ. ಸರ್ಕಾರದ ಆಂತರ್ಯ ಏನೆಂಬುದು ಎಲ್ಲರೂ ಬಲ್ಲ ವಿಷಯ. ತಮಗೆ ಬಿಡುಗಡೆ ಆಗಬೇಕಿರುವ ಬಿಲ್ಗಳನ್ನು ಪಾವತಿಸಿ ಎಂದು ಗುತ್ತಿಗೆದಾರರು ಧೈರ್ಯದಿಂದ ಕೇಳಬೇಕು. ಅವರೇನೂ ಭಿಕ್ಷುಕರಲ್ಲ, ಸಣ್ಣ ಪ್ರಮಾಣದ ಗುತ್ತಿಗೆದಾರರು ತಮ್ಮ ಮನೆ ಹೆಣ್ಣುಮಕ್ಕಳ ಒಡವೆಗಳನ್ನು ಒತ್ತೆ ಇಟ್ಟು ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದಾರೆ. ಮಾಡಿರುವ ಸಾಲಗಳನ್ನು ತೀರಿಸಲಾಗದೆ ಬೀದಿಗೆ ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಬೂಬು ಹೇಳುವುದು ಬಿಡಬೇಕು:ಎಲ್ಲರ ಮೇಲೆ ಬೇಕಾಬಿಟ್ಟಿ ಮಾತನಾಡುವ ಖರ್ಗೆ ಅವರು ಸಬೂಬು ಹೇಳುವುದು ಬಿಡಬೇಕು. ಈವರೆಗೆ ಗುತ್ತಿಗೆದಾರರ ಎಲ್ಒಸಿಗಳನ್ನು ಬಿಡುಗಡೆ ಮಾಡುವುದಕ್ಕೆ ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಸಚಿವರು ಹಿಂದಿನ ಸರ್ಕಾರದ ಮೇಲೆ ಗೂಬೆ ಕೂರಿಸುವ ಬದಲು ಗುತ್ತಿಗೆದಾರರ ಬಾಕಿ ಮೊತ್ತವನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯ ಮಾಡಿದರು.
ನಾನು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೆ. ಯಾವತ್ತೂ ಯಾರಿಗೂ ತೊಂದರೆ ಕೊಡುವ ಕೆಲಸ ಮಾಡಿಲ್ಲ. ಗುತ್ತಿಗೆದಾರರಿಗೆ ಒಂದು ಮನವಿ ಮಾಡುತ್ತೇನೆ. ಮೊದಲು ಒಗ್ಗಟ್ಟಾಗಿ, ನಿಮ್ಮ ನಿಮ್ಮಲ್ಲಿಯೇ ಗುಂಪುಗಳನ್ನು ಮಾಡಿಕೊಂಡರೆ ಅದನ್ನು ಸರ್ಕಾರ ದುರುಪಯೋಗ ಮಾಡಿಕೊಳ್ಳುತ್ತದೆ. ನಿಮ್ಮಲ್ಲಿ ಒಡಕು ಬರಬೇಕೆಂದು ಸರ್ಕಾರ ಬಯಸುತ್ತದೆ. ಇದನ್ನು ನೀವು ಅರ್ಥ ಮಾಡಿಕೊಳ್ಳಿ. ಒಂದು ವರ್ಷ ಯಾರು ಕೆಲಸ ಮಾಡಬೇಡಿ. ಅಕ್ಕಪಕ್ಕದ ರಾಜ್ಯಗಳವರನ್ನು ಕರೆದುಕೊಂಡು ಬಂದು ಕೆಲಸ ಮಾಡಿಸಲಿ. ಯಾರು ಬಂದು ಕೆಲಸ ಮಾಡುತ್ತಾರೋ ನೋಡೋಣ. ಹೇಗೂ ಇವರು ಕೆಲಸವನ್ನು ಕೊಡುತ್ತಿಲ್ಲ. ನೀವು ಹಿಂದಿನ ದುಡ್ಡು ಕೇಳುತ್ತಿದ್ದೀರಿ ಎಂದು ಕುಮಾರಸ್ವಾಮಿ ಅವರು ಕಿವಿಮಾತು ಹೇಳಿದರು.
ಆತ್ಮಹತ್ಯೆಗೆ ಶರಣಾಗಬೇಡಿ ಎಂದು ಮನವಿ: ಯಾರೇ ಆಗಲಿ ಧೃತಿಗೆಡುವ ಅಗತ್ಯವಿಲ್ಲ. ಸರ್ಕಾರ ನಿಮ್ಮ ಹಣ ನಿಮಗೆ ಕೊಡಲೇಬೇಕು. ಆತ್ಮಹತ್ಯೆಗೆ ಶರಣಾಗಬೇಡಿ. ದಯಾಮರಣಕ್ಕೆ ಯಾಕೆ ಅರ್ಜಿ ಹಾಕಿಕೊಳ್ಳುತ್ತೀರಾ? ನೀವು ತಪ್ಪು ಮಾಡಿಲ್ಲ, ತಪ್ಪು ಮಾಡಿರುವುದು ಸರ್ಕಾರ. ಸರ್ಕಾರದ ವಿರುದ್ಧ ಹೋರಾಟ ಮಾಡುವ ಧೈರ್ಯ ಮಾಡಿ. ನೀವು ಭಿಕ್ಷುಕರಲ್ಲ ಎಂದು ಗುತ್ತಿಗೆದಾರರಿಗೆ ಧೈರ್ಯ ಹೇಳಿದರು.
ನಿಮಗೆ ಸಿಕ್ಕಿರುವ ಕಾಮಗಾರಿಯನ್ನು ಪ್ರಾಮಾಣಿಕವಾಗಿ ಮಾಡಿ. ದಯಾಮರಣಕ್ಕೆ ಯಾಕೆ ಅರ್ಜಿ ಹಾಕುತ್ತೀರಿ. ಅಂತಹ ಮನಸ್ಥಿತಿಯಿಂದ ಹೊರಬನ್ನಿ. ಕೆಲಸವನ್ನೇ ಮಾಡದೆ ಬಿಲ್ ತೆಗೆದುಕೊಂಡು ಹಣ ಹೊಡೆದ ಎಷ್ಟೋ ಅಧಿಕಾರಿಗಳು, ದೊಡ್ಡ ದೊಡ್ಡ ಗುತ್ತಿಗೆದಾರರು ಇದ್ದಾರೆ. ಸರಿಯಾದ ಕೆಲಸ ಮಾಡಿದ್ದರೆ ನೀವು ಯಾಕೆ ಹೆದರಬೇಕು ಎಂದರು.