ಕರ್ನಾಟಕ

karnataka

ETV Bharat / state

ಸ್ವಇಚ್ಛೆಯಿಂದ ಲೋಕಾಯುಕ್ತ ಅಧಿಕಾರಿಗಳ ಮುಂದೆ ಹಾಜರಾಗಿದ್ದೇನೆ: ಹೆಚ್‌ ಡಿ ಕುಮಾರಸ್ವಾಮಿ - union Minister H D Kumaraswamy

ಕೇಂದ್ರ ಸಚಿವ ಹೆಚ್.​ ಡಿ ಕುಮಾರಸ್ವಾಮಿ ಅವರು ಲೋಕಾಯುಕ್ತ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದ ಬಗ್ಗೆ ಮಾತನಾಡಿದ್ದಾರೆ. ಸ್ವ ಇಚ್ಛೆಯಿಂದ ಲೋಕಾಯುಕ್ತ ಅಧಿಕಾರಗಳ ಮುಂದೆ ಹಾಜರಾಗಿದ್ದೇನೆ ಎಂದಿದ್ದಾರೆ.

h-d-kumaraswamy
ಹೆಚ್‌ ಡಿ ಕುಮಾರಸ್ವಾಮಿ (ETV Bharat)

By ETV Bharat Karnataka Team

Published : Sep 27, 2024, 10:33 PM IST

ಬೆಂಗಳೂರು :ಸ್ವಇಚ್ಛೆಯಿಂದ ಲೋಕಾಯುಕ್ತ ಅಧಿಕಾರಿಗಳ ಮುಂದೆ ಹಾಜರಾಗಿದ್ದೇನೆ. ನನಗೆ ಯಾವ ನೋಟಿಸ್ ಕೂಡ ಬಂದಿಲ್ಲ ಎಂದು ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಲೋಕಾಯುಕ್ತ ಅಧಿಕಾರಿಗಳ ಮುಂದೆ ಹಾಜರಾದ ನಂತರ ಮಾಧ್ಯಮಗಳ ಜತೆ ಅವರು ಮಾತನಾಡಿದರು. ಬೆಳಗ್ಗೆಯಿಂದ ನೋಡುತ್ತಿದ್ದೇನೆ. ಕುಮಾರಸ್ವಾಮಿ ಅವರಿಗೆ ರಾಜಕೀಯ ಗಂಡಾಂತರ, ಭೂ ಗಂಡಾಂತರ ಎಂದು ಚರ್ಚೆ ನಡೆಯುತ್ತಿದೆ. ಆದರೆ, ನನ್ನ ರಾಜಕೀಯ ಜೀವನದಲ್ಲಿ ಗಂಡಾಂತರ ತಂದುಕೊಳ್ಳುವ ಯಾವುದೇ ಕೆಲಸವನ್ನೂ ಮಾಡಿಲ್ಲ ಎಂದರು.

ಕೇಂದ್ರ ಸಚಿವ ಹೆಚ್.​ ಡಿ ಕುಮಾರಸ್ವಾಮಿ (ETV Bharat)

ರಾಜಕೀಯ ಒತ್ತಡದಿಂದ ನನ್ನ ಮೇಲೆ ಈ ಪ್ರಕರಣವನ್ನು ಮುನ್ನೆಲೆಗೆ ತರಲಾಗಿದೆ. ಈ ಪ್ರಕರಣದಲ್ಲಿ ಕಾನೂನುಬಾಹಿರವಾಗಿ ನನ್ನಿಂದ ಆದೇಶ ಆಗಿಲ್ಲ. ಒಂದು ವೇಳೆ ನಾನು ಡಿನೋಟಿಫಿಕೇಶನ್ ಮಾಡಬೇಕು ಎಂದು ಅಂದುಕೊಂಡಿದ್ದರೆ ನಾನೇ ಮಾಡುತ್ತಿದ್ದೆ. ಅಷ್ಟು ಸಾಮಾನ್ಯ ತಿಳಿವಳಿಕೆ ನನ್ನ ಬಗ್ಗೆ ಟೀಕೆ ಮಾಡುತ್ತಿರುವವರಿಗೆ ಇಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಈಗಾಗಲೇ ಈ ಪ್ರಕರಣದ ಬಗ್ಗೆ ಲೋಕಾಯುಕ್ತರು ಹೇಳಿಕೆ ದಾಖಲಿಸಿಕೊಂಡಿದ್ದರು. ಈಗ ಮತ್ತೆ ಹೇಳಿಕೆ ನೀಡಿದ್ದೇನೆ. ಈ ಪ್ರಕರಣದ ಬಗ್ಗೆ ನನಗೆ ಯಾವ ಆತಂಕವೂ ಇಲ್ಲ ಎಂದು ಹೇಳಿದರು.

ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ :ಲೋಕಾಯುಕ್ತ ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ. 2015ರ ಸಿದ್ದರಾಮಯ್ಯ ಸರ್ಕಾರವಿದ್ದಾಗ ನನ್ನ ಮೇಲೆ ಹಾಕಿರುವ ಕೇಸ್ ಇದು. ಪಲಾಯನ ಮಾಡುವ ಅಗತ್ಯ ನನಗೆ ಇಲ್ಲ. ಅಂಥ ಜಾಯಮಾನವೂ ನನ್ನದಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.

ನನ್ನ ಬಗ್ಗೆ ಹೇಳಿಕೆ ಕೊಟ್ಟಿರುವ ಅಷ್ಟೂ ಮಂದಿ ಸಚಿವರು, ಶಾಸಕರು 2018ರಲ್ಲಿ ನನ್ನ ಸಿಎಂ ಮಾಡಿದ್ದವರು. ಅಂತಹ ಆರೋಪ ನನ್ನ ಮೇಲೆ ಇದ್ದಾಗ ಕಾಂಗ್ರೆಸ್ ಪಕ್ಷ ನನ್ನ ಜತೆ ಸರ್ಕಾರ ಮಾಡಿದ್ದೇಕೆ? ಯಾವ ಮುಖ ಇಟ್ಟುಕೊಂಡು ನನ್ನ ಮುಖ್ಯಮಂತ್ರಿ ಮಾಡಿಕೊಂಡಿದ್ದರು ಇವರು. ಆವತ್ತು ಕುಮಾರಸ್ವಾಮಿ ಕೆಟ್ಟವರಾಗಿರಲಿಲ್ಲವೇ ?ಎಂದು ಕಿಡಿಕಾರಿದರು.

ಇಂದು ಬೆಳಗ್ಗೆ ಮುಖ್ಯಮಂತ್ರಿಗಳ ಹೇಳಿಕೆಯನ್ನು ಗಮನಿಸಿದ್ದೇನೆ. ಅವರಿಗೂ ಉತ್ತರ ಕೊಡುತ್ತೇನೆ. ಇವತ್ತು ನನ್ನನ್ನು ಆರೋಪಿ ಸ್ಥಾನದಲ್ಲಿ ನೋಡುತ್ತಿರುವ ಸಚಿವ ಮಹಾಶಯರು ನನ್ನ ಸಂಪುಟದಲ್ಲಿಯೂ ಸಚಿವರಾಗಿದ್ದರು. ಆಗ ಇವರೆಲ್ಲರ ಪ್ರಾಮಾಣಿಕತೆ, ನೈತಿಕತೆ ಎಲ್ಲಿ ಹೋಗಿತ್ತು? ಎಂದು ಕೇಂದ್ರ ಸಚಿವರು ಖಾರವಾಗಿ ಪ್ರಶ್ನಿಸಿದರು.

ರಾಜೀನಾಮೆ ಕೇಳುವ ನೈತಿಕತೆ ಇವರಿಗೆ ಇಲ್ಲ: ಈ ಸರ್ಕಾರದ ಸಚಿವರು ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ಇವರಿಗೆ ನನ್ನ ರಾಜೀನಾಮೆ ಕೇಳುವ, ನನ್ನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಈ ಪ್ರಕರಣದಲ್ಲಿ ನನ್ನ ಪಾತ್ರ ಏನೂ ಇಲ್ಲ ಎಂಬುದು ದಾಖಲೆಗಳೇ ಹೇಳುತ್ತವೆ. ಇವರ ಹಾಗೆ ನಾನು ಸರ್ಕಾರದ ಭೂಮಿ ಲೂಟಿ ಮಾಡಿಲ್ಲ. ಮುಡಾ ಹಗರಣವನ್ನೇ ನೋಡಿದ್ದೀರಿ. ಕುಮಾರಸ್ವಾಮಿ ಏಕೆ ರಾಜಿನಾಮೆ ಕೊಡಬೇಕು? ಲೂಟಿ ಮಾಡಿರೋದು ಇವರು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ನಾನೇನು ತಪ್ಪು ಮಾಡಿ ಇಲ್ಲಿಗೆ ಬಂದಿಲ್ಲ. ಸ್ವಯಂಪ್ರೇರಿತವಾಗಿ ಬಂದಿದ್ದೇನೆ. ನಾಳೆ (ಶನಿವಾರ) ಬೆಳಗ್ಗೆ 11 ಗಂಟೆಗೆ ದಾಖಲಾತಿಗಳನ್ನು ಬಿಡುಗಡೆ ಮಾಡುತ್ತೇನೆ. ಈ ಸರ್ಕಾರದಲ್ಲಿರುವ ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳು ದರೋಡೆಕೋರರು. ಆ ದಾಖಲೆಗಳನ್ನು ನೋಡಿದ ಮೇಲೆ ಈ ಸಚಿವರುಗಳು ನನ್ನ ಬಗ್ಗೆ ಮಾತನಾಡಲಿ ಎಂದು ಹೇಳಿದರು.

ಇದನ್ನೂ ಓದಿ :ಅಕ್ರಮ ಡಿನೋಟಿಫಿಕೇಷನ್ ಪ್ರಕರಣ: ಲೋಕಾಯುಕ್ತ ವಿಚಾರಣೆಗೆ ಕುಮಾರಸ್ವಾಮಿ ಹಾಜರು - HDk attends Lokayukta hearing

ABOUT THE AUTHOR

...view details