ಕರ್ನಾಟಕ

karnataka

ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ - H D Kumaraswamy

ಸಿಎಂ ಸಿದ್ದರಾಮಯ್ಯನವರು ಅಧಿಕಾರ ದುರುಪಯೋಗ ಮಾಡಿಕೊಂಡಿರುವುದಕ್ಕೆ ಅವರ ರಾಜೀನಾಮೆ ಕೇಳಿದ್ದೇನೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

By ETV Bharat Karnataka Team

Published : 5 hours ago

Published : 5 hours ago

union-minister-h-d-kumaraswamy
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (ETV Bharat)

ಬೆಂಗಳೂರು: ಸಿಎಂ ಸಿದ್ದರಾಮಯ್ಯನವರ ವಿರುದ್ಧ ಎಫ್ಐಆರ್ ದಾಖಲಾಗಿರುವುದಕ್ಕೆ ನಾನು ರಾಜೀನಾಮೆ ಕೇಳಿಲ್ಲವಲ್ಲ, ಅವರು ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿರುವುದಕ್ಕೆ ರಾಜೀನಾಮೆ ಕೇಳಿದ್ದೇನೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಬೆಂಗಳೂರಿನ ಹೆಚ್​ಎಂಟಿ ಸಂಸ್ಥೆಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಧಿಕಾರ ದುರುಪಯೋಗ ಮಾಡಿಕೊಂಡು ಸರ್ಕಾರ ನಡೆಯುತ್ತಿದೆ. ಅಧಿಕಾರಿಗಳ ಮುಖಾಂತರ ಸಾಕ್ಷಿಗಳನ್ನು ನಾಶ ಮಾಡ್ತಿದ್ದಾರೆ. ಅದಕ್ಕೆ ರಾಜೀನಾಮೆ ಕೇಳಿದ್ದೇನೆ ಎಂದರು.

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ (ETV Bharat)

ನನ್ನ ಮೇಲೆ‌ ಎಫ್ಐಆರ್ ದಾಖಲಾಗಿದೆ ಎಂದು ಎಷ್ಟು ಸಲ ಹೇಳಲಿ?. ಏನಿದೆ ನನ್ನ ಮೇಲಿನ ಎಫ್ಐಆರ್​ನಲ್ಲಿ. ಹಣ ತೆಗೆದುಕೊಂಡಿದ್ದೀನಾ? ಸರ್ಕಾರದಿಂದ ಪವರ್ ಮಾಡಿಕೊಂಡಿದ್ದೀನಾ. ಅದು ಆಡಳಿತಾತ್ಮಕ ನಿರ್ಧಾರಗಳು. ಅದರ ಮೇಲೆ‌ ಕೆಲವರು ಪಾಪ, ಹೋಗಿ ಕಷ್ಟಪಡುತ್ತಿದ್ದಾರೆ. ಹದಿನೈದು ವರ್ಷಗಳ ಹಳೆಯದ್ದು, ಇದು ಕಳ್ಳನಿಗೆ ಒಂದು ಪಿಳ್ಳೆ ನೆಪ. ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ಎಂಬಂತೆ ಇದನ್ನಿಟ್ಟುಕೊಂಡು ರಕ್ಷಣೆ ಪಡೆಯುವುದು ಮುಖ್ಯಮಂತ್ರಿಗಳ ಸ್ಥಾನಕ್ಕೆ ಗೌರವ ತರುವುದಿಲ್ಲ ಎಂದು ತಮ್ಮ ಪಕ್ಷದ ಶಾಸಕ ಜಿ.ಟಿ.ದೇವೇಗೌಡರ ಮಾತಿಗೆ ತಿರುಗೇಟು ನೀಡಿದರು.

ತಮ್ಮನ್ನೇ ಟಾರ್ಗೆಟ್ ಮಾಡಲಾಗುತ್ತಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದರ ಬಗ್ಗೆ ನಿಮಗೆ ನಗು ಬರಲ್ವಾ? ಆ ದೂರಿನಲ್ಲಿ ವಾಸ್ತವಾಂಶ ಇದೆಯಾ ಎಂದು ಪ್ರಶ್ನಿಸಿದರು.

ನಿನ್ನೆ ಸಿಎಂ ಮಹಾತ್ಮ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾಧ್ಯಮದವರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಆಗ ಸಿಎಂ ಸಿದ್ದರಾಮಯ್ಯ ಭಾಷಣ ಏನು?. ಇತ್ತೀಚಿನ ದಿನಗಳಲ್ಲಿ ಸುಳ್ಳು ವರದಿಗಳು ಬಹಳ ಬರ್ತಿವೆ. ಅದಕ್ಕೆ ಬಹಳ ಮಹತ್ವ ಕೊಡಬಾರದು ಅಂತ ಹೇಳಿದ್ದಾರೆ. ಪದೇ ಪದೆ ನಾನು ಹೇಳ್ತೀನಿ, ಏನಾದ್ರು ಟಫ್‌ ಆಗಿರೋದನ್ನು ಹುಡುಕರಪ್ಪ ಅಂತ. ಇಂತಹದನ್ನು ಹುಡುಕಿ ನಗೆಪಾಟಲು ಆಗಬೇಡಿ ಅಂತ. ಎಫ್ಐಆರ್ ಹಾಕಲೇಬೇಕೆಂದು ಕಳೆದ ಎರಡು ದಿನಗಳಿಂದ ಯಾರ ಯಾರ ಮೇಲೆ ಒತ್ತಡ ಹಾಕಿದ್ದಾರೆ. ಇದೆಲ್ಲ ಹೇಳೋಕೆ ಹೋದ್ರೆ..., ಯಾವುದೋ ಒಬ್ಬ ವ್ಯಕ್ತಿ ಕೇಸ್ ಹಾಕಿದ್ದಾನೆ ಅಲ್ಲವೇ? ಎಂದರು.

ಮುಡಾ ಅಧಿಕಾರಿಯನ್ನಲ್ಲ, ಕುಮಾರಸ್ವಾಮಿ ಅವರನ್ನು ಬಂಧಿಸಬೇಕು ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಹೆಚ್​ಡಿಕೆ, ಮಾಡಲಿ, ಮಾಡುವುದಕ್ಕೆ ಹೇಳಿ ಎಂದು ಗರಂ ಆದರು.

ಈಗ ಅದಕ್ಕೆಲ್ಲ ಉತ್ತರ ಕೊಡುವುದಿಲ್ಲ: ತಮ್ಮ ವಿರುದ್ಧ ಉದ್ಯಮಿ ವಿಜಯ್ ತಾತಾ ದೂರು ನೀಡಿರುವ ವಿಚಾರಕ್ಕೆ, ಈಗ ಅದಕ್ಕೆಲ್ಲ ಉತ್ತರ ಕೊಡುವುದಿಲ್ಲ. ದೂರು ಕೊಡಲಿ, ನನಗೆ ಏನು ಸಂಬಂಧ?. ಅವನು ಯಾರು? ಅವನ ಬಗ್ಗೆ ಯಾಕೆ ಚರ್ಚೆ ಮಾಡಲಿ, ಸಂಬಂಧ ಇಲ್ಲದವನು. ಯಾರು ಕೊಡಿಸಿದ್ದಾರೆ, ಅದೆಲ್ಲವೂ ಆಮೇಲೆ ಚರ್ಚೆ ಮಾಡೋಣ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಸಿಎಂ ಪತ್ನಿಯ 14 ನಿವೇಶನ ವಾಪಸ್ ಪ್ರಕರಣಕ್ಕೆ ತಿರುವು: ಕೋರ್ಟ್​ ಆದೇಶದ ಉಲ್ಲಂಘನೆ ಎಂದ ಹೆಚ್​ಡಿಕೆ - H D Kumaraswamy

ABOUT THE AUTHOR

...view details