ಬೆಂಗಳೂರು :ದೇಶದ ಬ್ಯಾಂಕಿಂಗ್ ವಲಯದ ಪ್ರಾಮಾಣಿಕತೆಯನ್ನು ಖಾತ್ರಿಪಡಿಸಲು ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಕೋಟ್ಯಂತರ ರೂ. ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವ ಅಗತ್ಯವಿದೆ ಎಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಹೈಕೋರ್ಟ್‌ಗೆ ಮನವಿ ಮಾಡಿದೆ.
ವಾಲ್ಮೀಕಿ ನಿಗಮದಲ್ಲಿನ ಹಣಕಾಸು ಹಗರಣ ಆರೋಪ ಸಂಬಂಧದ ತನಿಖೆಯನ್ನು ಸಿಬಿಐಗೆ ವಹಿಸಲು ನಿರ್ದೇಶನ ನೀಡುವಂತೆ ಕೋರಿ ಯೂನಿಯನ್ ಬ್ಯಾಂಕ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ಧ ಪೀಠಕ್ಕೆ ಬ್ಯಾಂಕ್ ಪರ ವಕೀಲರು ವಿವರಿಸಿದರು.
ಬ್ಯಾಂಕ್ ಪರ ವಾದ ಮಂಡಿಸಿದ ಸುಪ್ರೀಂಕೋರ್ಟ್‌ನ ಹಿರಿಯ ವಕೀಲರಾದ ವೆಂಕಟರಮಣಿ, ಡೆಲ್ಲಿ ಸ್ಪೆಷಲ್ ಪೊಲೀಸ್ ಆಕ್ಟ್ ಉಲ್ಲೇಖಿಸಿ, ಬ್ಯಾಂಕಿಂಗ್ ಉದ್ಯಮ ದೇಶದ ಆರ್ಥಿಕ ಶಿಸ್ತಿನಲ್ಲಿ ಅತ್ಯಂತ ಪ್ರಮುಖ ಸ್ಥಾನವನ್ನು ಅಲಂಕರಿಸಿದೆ. ವಿತ್ತೀಯ ಶಿಸ್ತುಗಳು ಭಾರಿ ದೊಡ್ಡ ಪರಿಣಾಮಗಳನ್ನು ಬೀರುತ್ತವೆ. ಬ್ಯಾಂಕುಗಳು ಇದೀಗ ಹಲವು ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.
ಮಾಸ್ಟರ್ ಸುತ್ತೋಲೆ ಹೊರಡಿಸಿದ RBI:ಆರ್‌ಬಿಐ ಬ್ಯಾಂಕುಗಳ ಪ್ರಾಮಾಣಿಕತೆ ಖಾತ್ರಿಪಡಿಸಲು ಮಾಸ್ಟರ್ ಸುತ್ತೋಲೆ ಹೊರಡಿಸಿದೆ. ಅದರಂತೆ ಬ್ಯಾಂಕುಗಳ ವಹಿವಾಟಿನ ಯಾವುದೇ ಅಕ್ರಮಗಳಿಗೆ ಸಂಬಂಧಿಸಿದಂತೆ ವಿಶೇಷ ತನಿಖಾ ಸಂಸ್ಥೆ ಅಗತ್ಯವಿದೆ ಎಂದು ತಿಳಿಸಿದೆ. ಅದರಂತೆ ವಾಲ್ಮೀಕಿ ಹಗರಣವನ್ನೂ ಸಿಬಿಐ ತನಿಖೆಗೆ ವಹಿಸುವುದೇ ಸೂಕ್ತ ಎಂದು ಪ್ರತಿಪಾದಿಸಿದರು.
ಬ್ಯಾಂಕ್ ಈಗಾಗಲೇ ತನಿಖೆ ಕೋರಿ ಸಿಬಿಐಗೆ ಪತ್ರ ಬರೆದಿದೆ. ಹಾಗಾಗಿ ವಾಸ್ತವವಾಗಿ ದೂರು ದಾಖಲಾಗಿದೆ. ಸಿಬಿಐ ತನಿಖೆಯನ್ನು ಕೈಗೆತ್ತಿಕೊಂಡಂತಾಗಿದೆ. ಒಟ್ಟಾರೆ ಬ್ಯಾಂಕುಗಳ ಹಿತದೃಷ್ಟಿಯಿಂದ ಕೋಟ್ಯಂತರ ರು. ದುರುಪಯೋಗವಾಗಿರುವ ಇದರ ತನಿಖೆಯನ್ನು ಕೇಂದ್ರೀಯ ಅಪರಾಧ ತನಿಖಾ ದಳಕ್ಕೆ ವಹಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಸಲ್ಲಿಸಿದರು.