ಚಿಕ್ಕೋಡಿ(ಬೆಳಗಾವಿ): ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಮಳೆ ಅಬ್ಬರಿಸುತ್ತಿರುವ ಹಿನ್ನೆಲೆ ಕೃಷ್ಣಾ ನದಿ ನೀರಿ ಮಟ್ಟ ಹೆಚ್ಚಳವಾಗಿದ್ದು, ಕುಡಚಿ ಸೇತುವೆ ಜಲಾವೃತಗೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಸೇತುವೆಯ ಎರಡು ಕಡೆ ಬ್ಯಾರಿಕೇಡ್ ಹಾಕಿ ಸಂಚಾರ ನಿರ್ಬಂಧಿಸಲಾಗಿದೆ.
ದೂದಗಂಗಾ, ವೇದಗಂಗಾ ಮತ್ತು ಪಂಚಗಂಗಾ ನದಿಗಳಲ್ಲಿ ಒಳಹರಿವು ಹೆಚ್ಚಳ ಹಿನ್ನೆಲೆ ವೇದಗಂಗಾ ನದಿಗೆ ಕಟ್ಟಲಾಗಿರುವ ಅಕ್ಕೋಳ-ಸಿದ್ನಾಳ, ಜತ್ರಾಟ-ಭೀವಶಿ ಸೇತುವೆ, ದೂದಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಕಾರದಗಾ-ಬೋಜ್, ಬೋಜವಾಡಿ-ಕುನ್ನೂರ, ಬೋಜ್-ಕುನ್ನೂರ, ಮಲ್ಲಿಕವಾಡ-ದತ್ತವಾಡ ಸೇತುವೆಗಳು ಮುಳುಗಿವೆ.
ಮಹಾರಾಷ್ಟ್ರದ ಸಾತಾರಾ ಜಿಲ್ಲೆಯಲ್ಲಿರುವ ಕೊಯ್ನಾ ಜಲಾಶಯ ಭರ್ತಿ ಹಿನ್ನೆಲೆ 13 ಸಾವಿರ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಬಿಡಲಾಗುತ್ತಿದೆ. ಜಲಾಶಯಕ್ಕೆ ಒಳಹರಿವು ಹೆಚ್ಚಿದರೆ ಇನ್ನೂ ಹೆಚ್ಚಿನ ಪ್ರಮಾಣದ ನೀರು ಬಿಡುವ ಸಾಧ್ಯತೆ ಇದೆ. ಹೀಗಾಗಿ ಚಿಕ್ಕೋಡಿ, ರಾಯಬಾಗ, ಕಾಗವಾಡ, ಅಥಣಿ ತಾಲೂಕಿನ ಕೃಷ್ಣಾ ನದಿ ತೀರದ ಜನರಲ್ಲಿ ಪ್ರವಾಹ ಭೀತಿ ಎದುರಾಗಿದೆ.
ದೇವಸ್ಥಾನಕ್ಕೆ ನುಗ್ಗಿದ ನೀರು:ಮತ್ತೊಂದೆಡೆ, ಮಹಾರಾಷ್ಟ್ರದ ಹಾಗೂ ಕರ್ನಾಟಕ ಗಡಿಯಲ್ಲಿ ಕೊಲ್ಹಾಪುರ ಜಿಲ್ಲೆಯ ಶಿಳೋಳ ತಾಲೂಕಿನ ನರಸಿಂಹವಾಡಿ ದೇವಸ್ಥಾನಕ್ಕೆ ಕೃಷ್ಣಾ ಮತ್ತು ಪಂಚಗಂಗಾ ನದಿ ನೀರು ನುಗ್ಗಿದೆ. ಭಕ್ತರು ನೀರಿನ ಮಧ್ಯೆ ದೇವರ ದರ್ಶನ ಪಡೆಯುತ್ತಿದ್ದಾರೆ.
ಇದನ್ನೂ ಓದಿ:ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವಾರಪೂರ್ತಿ ಮಳೆ: ಆರೆಂಜ್ ಅಲರ್ಟ್ ಘೋಷಣೆ - Karnataka Rain Forecast