ಉಡುಪಿ:ಜಿಲ್ಲೆಯ ಕಾರ್ಕಳ ತಾಲೂಕಿನ ಹೆಬ್ರಿ ಕಬ್ವಿನಾಲೆಯ ಪೀತಬೈಲುವಿನಲ್ಲಿ ಸೋಮವಾರ ರಾತ್ರಿ ನಕ್ಸಲ್ ನಿಗ್ರಹ ಪಡೆ (ಎಎನ್ಎಫ್) ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ಕಾಳಗದಲ್ಲಿನಕ್ಸಲ್ ಮುಖಂಡ ವಿಕ್ರಂ ಗೌಡ ಹತರಾಗಿದ್ದಾರೆ.
ಹೆಬ್ರಿ ಪರಿಸರದಲ್ಲಿ ಕಳೆದ ಕೆಲ ದಿನಗಳಿಂದ ನಕ್ಸಲ್ ಓಡಾಟದ ಶಂಕೆ ವ್ಯಕ್ತವಾಗಿದ್ದರಿಂದ ಎಎನ್ಎಫ್ ತೀವ್ರ ಕೂಂಬಿಂಗ್ ಕಾರ್ಯಾಚರಣೆಗೆ ಇಳಿದಿತ್ತು. ಸೋಮವಾರ ತಡರಾತ್ರಿ ಎಎನ್ಎಫ್ ತಂಡ ಕಾರ್ಯಾಚರಣೆ ನಡೆಸಿದೆ. ಈ ವೇಳೆ ದಾಳಿ-ಪ್ರತಿದಾಳಿ ನಡೆದಿದ್ದು, ಗುಂಡೇಟಿಗೆ ವಿಕ್ರಂ ಗೌಡ ಬಲಿಯಾಗಿದ್ದಾರೆ.
ಪೊಲೀಸರ ಮೇಲೆ ಗುಂಡಿನ ದಾಳಿ ಮಾಡಿದ ಕಾರಣ ಎನ್‌ಕೌಂಟರ್: ಸಚಿವ ಜಿ.ಪರಮೇಶ್ವರ್
ಪೊಲೀಸರ ಮೇಲೆ ನಕ್ಸಲ್ ವಿಕ್ರಂ ಗೌಡ ತಂಡ ಗುಂಡಿನ ದಾಳಿ ಮಾಡಿದ ಕಾರಣ ಪೊಲೀಸರು ಎನ್‌ಕೌಂಟರ್ ಮಾಡಬೇಕಾಯ್ತು ಎಂದು ಗೃಹ ಸಚಿವ ಜಿ. ಪರಮೇಶ್ವರ್ ಮಾಹಿತಿ ನೀಡಿದರು. ಬೆಂಗಳೂರಿನ ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ವಿಕ್ರಂ ಗೌಡ ಎಂಬ ಗ್ರೇಡೆಡ್ ನಕ್ಸಲ್‌ನನ್ನು ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ. ಕಳೆದ 20 ವರ್ಷಗಳಿಂದ ಅವರನ್ನು ಪೊಲೀಸರು ಹುಡುಕುತ್ತಿದ್ದರು. ಅನೇಕ ಎನ್ಕೌಂಟರ್ಗಳಲ್ಲಿ ವಿಕ್ರಂ ಗೌಡ ತಪ್ಪಿಸಿಕೊಂಡಿದ್ದ. ನಿನ್ನೆ ಸಂಜೆ ನಿನ್ನೆ ಪೊಲೀಸರ ಮೇಲೆ ಅವರು ಗುಂಡಿನ ದಾಳಿ ಮಾಡಿದಾಗ ಎನ್‌ಕೌಂಟರ್ ಮಾಡಿದ್ದಾರೆ ಎಂದರು.
ವಿಕ್ರಂ ಗೌಡ ನಕ್ಸಲ್ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರಿಂದ ಅವರ ಚಲನವಲನಗಳನ್ನು ಪೊಲೀಸರು ಗಮನಿಸುತ್ತಿದ್ದರು. ಈಗ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಮಾಡಿದ್ದಾರೆ. ಈಗ ಸದ್ಯಕ್ಕೆ ಇಷ್ಟು ಮಾಹಿತಿ ಸಿಕ್ಕಿದೆ. ಮಧ್ಯಾಹ್ನದ ಮೇಲೆ ಸಂಪೂರ್ಣ ಮಾಹಿತಿ ಸಿಗಲಿದೆ ಎಂದು ತಿಳಿಸಿದರು.