ಕರ್ನಾಟಕ

karnataka

ETV Bharat / state

ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ ಆರೋಪ: ಎಂಡಿ ಜೆ.ಜೆ. ಪದ್ಮನಾಭ, ಲೆಕ್ಕಾಧಿಕಾರಿ ಪರಶುರಾಮ್ ಅಮಾನತು - Two officials suspended - TWO OFFICIALS SUSPENDED

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಎಂಡಿ ಮತ್ತು ಲೆಕ್ಕಾಧಿಕಾರಿಯನ್ನು ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ವಿಧಾನಸೌಧ
ವಿಧಾನಸೌಧ (ETV Bharat)

By ETV Bharat Karnataka Team

Published : May 29, 2024, 5:32 PM IST

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ 187 ಕೋಟಿ ರೂಪಾಯಿ ಅಕ್ರಮ ಆರೋಪ ಸಂಬಂಧ ನಿಗಮದ ಎಂಡಿ ಜೆ.ಜೆ. ಪದ್ಮನಾಭ ಹಾಗೂ ಲೆಕ್ಕಾಧಿಕಾರಿ ಪರಶುರಾಮ್​ ಅವರನ್ನು ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಶಿವಮೊಗ್ಗದಲ್ಲಿ ವಾಲ್ಮಿಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್​ ಭ್ರಷ್ಟಾಚಾರವನ್ನು ಪ್ರಸ್ತಾಪಿಸಿ ನಿಗಮದ ಮೇಲಾಧಿಕಾರಿಗಳ ಹೆಸರು ಹಾಗೂ ಮಂತ್ರಿ ಎಂದು ಉಲ್ಲೇಖಿಸಿ ಡೆತ್​ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣ ರಾಜಕೀಯವಾಗಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವ ಬಿ.ನಾಗೇಂದ್ರರನ್ನು ಸಂಪುಟದಿಂದ ಕೈ ಬಿಡುವಂತೆ ಪ್ರತಿಪಕ್ಷಗಳು ಆಗ್ರಹಿಸುತ್ತಿವೆ. ಇದೀಗ ರಾಜ್ಯ ಸರ್ಕಾರ ನಿಗಮದಲ್ಲಿನ ಅವ್ಯವಹಾರದ ಆರೋಪ ಹಿನ್ನೆಲೆ ಎಂಡಿ ಹಾಗೂ ಲೆಕ್ಕಾಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದೆ.

ಈ ಪ್ರಕರಣವನ್ನು ರಾಜ್ಯ ಸರ್ಕಾರ CID ತನಿಖೆಗೆ ವಹಿಸಿದ್ದು, ಶಿವಮೊಗ್ಗ ಮತ್ತು ಬೆಂಗಳೂರು ವಿಭಾಗದ CID ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಸರ್ಕಾರದ ಪೂರ್ವ ಅನುಮತಿ ಪಡೆದು ಬ್ಯಾಂಕ್ ಅಧಿಕಾರಿಗಳ ವಿರುದ್ಧ FIR ದಾಖಲಿಸಲಾಗಿದೆ.‌ ಬ್ಯಾಂಕ್ ಎಂಡಿ ಮತ್ತು ಸಿಇಒ ಹಾಗೂ ಎಲ್ಲಾ ನಿರ್ದೇಶಕರ ಮೇಲೆ FIR ಈಗಾಗಲೇ ದಾಖಲಾಗಿದೆ. ಒಟ್ಟು 6 ಮಂದಿ ಬ್ಯಾಂಕ್ ಅಧಿಕಾರಿಗಳ ಮೇಲೆ FIR ದಾಖಲಾಗಿದೆ.

ವಿವಿಧ ನಿಗಮಗಳಿಗೆ ಅನುದಾನ ಹಂಚಿಕೆ ಕುರಿತಂತೆ, ಆರ್ಥಿಕ ಇಲಾಖೆಯಿಂದ ಹೊರಡಿಸಿರುವ ಆದೇಶದಲ್ಲಿ ಎಲ್ಲಾ ನಿಗಮಗಳಿಗೂ ಪಿ.ಡಿ ಖಾತೆ ನೀಡಲಾಗಿದೆ. ಅಲ್ಲದೇ, ವಿವಿಧ ಬ್ಯಾಂಕ್‌ಗಳಲ್ಲಿ ಇರಿಸಲಾಗಿದ್ದ ಎಲ್ಲಾ ಮೊತ್ತವನ್ನು ಪಿ.ಡಿ ಖಾತೆಗೆ ವರ್ಗಾಯಿಸುವಂತೆ ಹಾಗೂ ಇನ್ನು ಮುಂದೆ ಪಿ.ಡಿ ಖಾತೆಯಿಂದಲೇ ನಿಗಮದ ಆರ್ಥಿಕ ವ್ಯವಹಾರ (Financial Transaction) ಕೈಗೊಳ್ಳುವಂತೆ ಈ ಆದೇಶದಲ್ಲಿ ಎಲ್ಲಾ ನಿಗಮಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಆದರೆ, ಈ ನಿರ್ದೇಶನವನ್ನು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮದಲ್ಲಿ ಪಾಲನೆ ಮಾಡದೇ ಅಂದಾಜು ರೂ.89.63 ಕೋಟಿ ರೂ. ಅನುದಾನ ದುರುಪಯೋಗ ಆಗಿರುವುದಾಗಿ ತಿಳಿದು ಬಂದಿದೆ. ಆದ್ದರಿಂದ, ಈ ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿ/ಸಿಬ್ಬಂದಿ ವರ್ಗದವರ ಮೇಲೆ ಅಗತ್ಯ ಕಾನೂನು ಕ್ರಮ ಹಾಗೂ ಸೂಕ್ತ ಶಿಸ್ತು ಕ್ರಮ ಜರುಗಿಸುವಂತೆ ಸೂಚಿಸಿದ್ದರು.

ಬೆಂಗಳೂರಿನ ವಸಂತನಗರ ಶಾಖೆಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉಳಿತಾಯ ಖಾತೆ ಸಂಖ್ಯೆ 520101080091055 ಯಲ್ಲಿರುವ ಹಣವನ್ನು ಏಕಾಏಕಿ ಸರ್ಕಾರದ ಅನುಮತಿ ಇಲ್ಲದೇ ಹೊಸ ಖಾತೆಯನ್ನು ತೆರೆದ ಎಂ.ಜಿ ರೋಡ್ ಬ್ರಾಂಚ್‌ಗೆ ಹಣವನ್ನು ವರ್ಗಾಯಿಸಿರುವುದು ನಿಯಮಬಾಹಿರವಾಗಿರುತ್ತದೆ. ಹಾಗೂ ಈ ಖಾತೆಗಳಿಂದ ವಿವಿಧ ದಿನಾಂಕಗಳಂದು ಒಟ್ಟು ರೂ.187.33 ಕೋಟಿಗಳನ್ನು ಎಂ.ಜಿ ರೋಡ್ ಬ್ರಾಂಚ್‌ಗೆ ವರ್ಗಾಯಿಸಿರುವುದು ಕಂಡುಬಂದಿರುತ್ತದೆ.

ಯೂನಿಯನ್ ಬ್ಯಾಂಕ್ ಎಂ.ಜಿ ರೋಡ್ ಬ್ರಾಂಚ್​ನಿಂದ ಮಾ. 5, 2024 ರಿಂದ ವಿವಿಧ ದಿನಾಂಕಗಳಂದು ಅನಾಮಧೆಯ ಬ್ಯಾಂಕ್ ಖಾತೆಗಳಿಗೆ ಕೋಟಿಗಟ್ಟಲೇ ಹಣವನ್ನು ಡ್ರಾ ಮಾಡಿದ್ದರೂ ಸಹ ಆರ್ಥಿಕ ವರ್ಷದ ಕೊನೆಯಲ್ಲಿ ಅನುದಾನ ವಿನಿಯೋಗಿಸುವುದು ಹಾಗೂ ನಿಗಮದ ಎಲ್ಲಾ ಖಾತೆಯಲ್ಲಿರುವ ಅನುದಾನವನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವುದು ಅವರ ಕರ್ತವ್ಯವಾಗಿರುತ್ತದೆ. ಹಾಗೂ ಅನುದಾನದ ವಿವರಗಳನ್ನು ಆರ್ಥಿಕ ವರ್ಷದ ಕೊನೆಯಲ್ಲಿ ವ್ಯವಸ್ಥಿತವಾಗಿ ಲೆಕ್ಕಪತ್ರ ಇಡುವುದು ಹಾಗೂ ಉಳಿದ ಅನುದಾನವನ್ನು ಆರ್ಥಿಕ ಇಲಾಖೆಗೆ ಅದ್ಯರ್ಪಣ ಮಾಡುವುದು ವ್ಯವಸ್ಥಾಪಕ ನಿರ್ದೇಶಕರ ಕರ್ತವ್ಯವಾಗಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಯೂನಿಯನ್ ಬ್ಯಾಂಕ್ ಶಾಖೆಯಲ್ಲಿ ಖಾತೆ ಸಂಖ್ಯೆ: 520141001659653ರಲ್ಲಿ 5-03-2024 ರಿಂದ 23-05-2024 ರವರೆಗೂ ಸರ್ಕಾರದ ಅನುದಾನವನ್ನು ಅನಾಮಧೇಯ ವ್ಯಕ್ತಿಗಳು ಡ್ರಾ ಮಾಡಿಕೊಂಡಿದ್ದರೂ ಗಮನಿಸದೇ ಇರುವುದು ಒಬ್ಬ ನಿಗಮದ ಜವಾಬ್ದಾರಿಯುತ ವ್ಯವಸ್ಥಾಪಕ ನಿರ್ದೇಶಕರ ಕರ್ತವ್ಯಲೋಪ/ನಿರ್ಲಕ್ಷತೆ/ಆರ್ಥಿಕ ನಿಯಮಗಳು ಉಲ್ಲಂಘನೆಯಾಗಿದ್ದು ಅನುದಾನವು ಅನಾಮಧೇಯ ಖಾತೆಗಳಿಗೆ ವರ್ಗಾವಣೆ ಆಗಲು ವ್ಯವಸ್ಥಾಪಕ ನಿರ್ದೇಶಕರು ಪರೋಕ್ಷವಾಗಿ ಕಾರಣಕರ್ತರಾಗಿರುತ್ತಾರೆ ಎಂದು ಉಲ್ಲೇಖಿಸಲಾಗಿದೆ.

ವ್ಯವಸ್ಥಾಪಕ ನಿರ್ದೇಶಕರು ನಿಗಮದ ರೂ.88.62 ಕೋಟಿ ಹಣವನ್ನು ಫೋರ್ಜರಿ ಮಾಡಿ 14 ಅನಾಮಧೇಯ ಖಾತೆಗಳಿಗೆ ವರ್ಗಾವಣೆಯಾಗಿರುವುದು 22-05-2024 ರಂದು ಗಮನಕ್ಕೆ ಬಂದಿದ್ದರೂ ಸಹ ಈ ವಿಷಯವನ್ನು ಮರೆಮಾಚಿ 27-05-2024 ರಂದು ಟಿ.ವಿ ಮಾಧ್ಯಮ ಮತ್ತು ಪತ್ರಿಕೆಗಳಲ್ಲಿ ಹಾಗೂ ಅಂತರ್ಜಾಲದಲ್ಲಿ ಪ್ರಕಟಗೊಂಡ ನಂತರ ಮತ್ತು ಸರ್ಕಾರದಿಂದ ಆರೋಪಗಳ ಕುರಿತು ವರದಿ ನೀಡುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ವರದಿಯನ್ನು ತಡವಾಗಿ ನೀಡಿರುವುದು ಇವರ ಕರ್ತವ್ಯಲೋಪ/ನಿರ್ಲಕ್ಷ್ಯತೆ/ಆರ್ಥಿಕ ನಿಯಮಗಳನ್ನು ಉಲ್ಲಂಘಿಸಿರುವುದು ಮೇಲ್ನೋಟಕ ಕಂಡುಬಂದಿರುತ್ತದೆ.

ಸರ್ಕಾರದ ಅನುದಾನವನ್ನು ಅನಾಮಧೇಯ ವ್ಯಕ್ತಿಗಳು ಮಾಡಿಕೊಂಡಿದ್ದರೂ ಸಹ ಬ್ಯಾಂಕ್ ಸ್ಟೇಟ್‌ಮೆಂಟ್‌ನ್ನು ಸಲ್ಲಿಸದೇ ಇರುವುದು ಗಂಭೀರವಾದ ಆರೋಪವಾಗಿರುತ್ತದೆ ಹಾಗೂ ಅನಾಮಧೇಯ ಖಾತೆಗಳು ಎಂದು ವರದಿಯಲ್ಲಿ ತಿಳಿಸಿದ್ದು, ಈ ಖಾತೆಗಳ ವ್ಯಕ್ತಿಗಳ ಹೆಸರುಗಳನ್ನು ಉಲ್ಲೇಖಿಸಿರುವುದಿಲ್ಲ ಎಂದು ತಿಳಿಸಲಾಗಿದೆ.

ವ್ಯವಸ್ಥಾಪಕ ನಿರ್ದೇಶಕರ ವರದಿಯಲ್ಲಿ ಅಕ್ರಮವಾಗಿ ಡ್ರಾ ಮಾಡಿಕೊಂಡಿರುವ ವ್ಯಕ್ತಿಗಳು ರೂ.5 ಕೋಟಿ ಹಣವನ್ನು ನಿಗಮದ ಖಾತೆಗೆ ಹಿಂದಿರುಗಿಸಿರುವುದಾಗಿ ತಿಳಿಸಿದ್ದು ಯಾವ ವ್ಯಕ್ತಿಗಳು ಯಾವ ಖಾತೆಯಿಂದ ಹಿಂದಿರುಗಿಸಿರುತ್ತಾರೆ ಎಂಬ ಮಾಹಿತಿಯನ್ನು ನೀಡಿರುವುದಿಲ್ಲ. ಈ ಖಾತೆಗೆ ಸಂಬಂಧಿಸಿದ ವಿವರಗಳು, ಸ್ಟೇಟ್ಮೆಂಟ್‌ಗಳು, ಚೆಕ್ ಪುಸ್ತಕಗಳು ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ಬಾರದಂತೆ ಲೆಕ್ಕವಿಭಾಗದ ಸಿಬ್ಬಂದಿ ತಡೆಹಿಡಿದಿರುವುದಾಗಿ ತಿಳಿಸಿದ್ದು, ಸದರಿ ಸಿಬ್ಬಂದಿಗಳಿಗೆ ಯಾವುದೇ ನೋಟಿಸ್ ಜಾರಿ ಮಾಡದೇ ಹಾಗೂ ಮೇಲಾಧಿಕಾರಿಗಳಾಗಿ ಸರಿಯಾಗಿ ಕರ್ತವ್ಯ ನಿರ್ವಹಿಸದೇ ಕೆಳಹಂತದ ಸಿಬ್ಬಂದಿಗಳ ಮೇಲೆ ಆರೋಪ ಹೊರಡಿಸಿರುವುದು ಸಮಂಜಸವಲ್ಲವೆಂದು ವ್ಯವಸ್ಥಾಪಕ ನಿರ್ದೇಶಕರ ಕರ್ತವ್ಯಲೋಪ/ನಿರ್ಲಕ್ಷ್ಯತೆ ವಹಿಸಿರುವುದು ಕಂಡುಬಂದಿರುತ್ತದೆ.

ಜೆ.ಜಿ ಪದ್ಮನಾಭ ಇವರ ವಿರುದ್ಧದ ಮೇಲಿನ ಆರೋಪಗಳು ಹಾಗೂ ಕರ್ತವ್ಯಲೋಪ/ನಿರ್ಲಕ್ಷ್ಯತೆ/ಆರ್ಥಿಕ ನಿಯಮಗಳು ಉಲ್ಲಂಘನೆಯಾಗಿರುವ ಹಿನ್ನೆಲೆಯಲ್ಲಿ ಇವರ ಮೇಲಿನ ಆರೋಪಗಳ ಸತ್ಯಾಸತ್ಯತೆಯನ್ನು ತಿಳಿಯಲು ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ, ಅಮಾನತ್ತುಗೊಳಿಸಲು ಆದೇಶಿಸಲಾಗಿದೆ.

ಇದನ್ನೂ ಓದಿ:ಅಧಿಕಾರಿ ಆತ್ಮಹತ್ಯೆ ಪ್ರಕರಣ: ನನ್ನ ಹೆಸರು ಯಾಕೆ ತಳುಕು ಹಾಕಿದ್ದಾರೆ ಎಂಬುದೇ ನನಗೆ ಗೊತ್ತಿಲ್ಲ - ಸಚಿವ ನಾಗೇಂದ್ರ - Minister B Nagendra Reaction

ABOUT THE AUTHOR

...view details