ಬೆಂಗಳೂರು/ಧಾರವಾಡ: ಮಾನಸಿಕ ಅಸ್ವಸ್ಥರ ಹೇಳಿಕೆಯನ್ನು ದಾಖಲಿಸಿಕೊಳ್ಳುವ ಸಂದರ್ಭದಲ್ಲಿ ವಿಚಾರಣಾ ನ್ಯಾಯಾಲಯಗಳು ಅನುವಾದಕ ಇಲ್ಲವೇ ತಜ್ಞರ ಸಹಾಯ ಪಡೆದು ವಿಡಿಯೋಗ್ರಫಿ ಮಾಡುವುದು ಕಡ್ಡಾಯ ಎಂದು ಹೈಕೋರ್ಟ್ ಆದೇಶಿಸಿದೆ.
ಅತ್ಯಾಚಾರಕ್ಕೊಳಗಾದ ಮಾನಸಿಕ ಅಸ್ವಸ್ಥೆ(ಸಂತ್ರಸ್ತೆ) ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಮುಂದೆ ಹಾಗೂ ಸೆಷನ್ಸ್ ನ್ಯಾಯಾಧೀಶರ ಮುಂದೆ ಸಿಆರ್‌ಪಿಸಿ ಸೆಕ್ಷನ್ 164ರ ಅಡಿ ದಾಖಲಿಸಿಕೊಂಡಿರುವ ಹೇಳಿಕೆ ರದ್ದು ಮಾಡುವುದು ಮತ್ತು ಸೂಕ್ತ ಕಾರ್ಯವಿಧಾನ ಅನುಸರಿಸಿ ಹೇಳಿಕೆ ದಾಖಲಿಸಿಕೊಳ್ಳವಂತೆ ಸೂಚಿಸುವಂತೆ ಕೋರಿ ವಿಜಯಪುರ ಜಿಲ್ಲೆಯ ಸೋಮನಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದ ಧಾರವಾಡ ಪೀಠ, ಈ ಆದೇಶ ನೀಡಿದೆ.
ಸಿಆರ್‌ಪಿಸಿ ಸೆಕ್ಷನ್ 164(5ಎ)(ಎ) ಅಡಿ ತಿಳಿಸಿರುವಂತೆ ಮಾನಸಿಕ ಅಸ್ವಸ್ಥರಿಂದ ಹೇಳಿಕೆ ದಾಖಲಿಸಿಕೊಳ್ಳಬೇಕಾದಲ್ಲಿ ಭಾಷಾಂತರಕಾರ ಸಹಾಯ ಪಡೆದುಕೊಳ್ಳಬೇಕು. ಎಲ್ಲ ವಿಚಾರಣಾ ಪ್ರಕ್ರಿಯೆಯನ್ನು ಕಡ್ಡಾಯವಾಗಿ ವಿಡಿಯೋಗ್ರಫಿ ಮಾಡಬೇಕು ಎಂಬುದಾಗಿ ತಿಳಿಸಿದೆ. ಈ ಎಲ್ಲ ಪ್ರಕ್ರಿಯೆ ಅನುಸರಿಸಿದಲ್ಲಿ ಮಾತ್ರ ಸಾಕ್ಷ್ಯ ಅಧಿನಿಯಮ 1872ರ ಸೆಕ್ಷನ್ 137ರ ಅಡಿ ಹೇಳಿಕೆಗಳನ್ನು ಪರಿಗಣಿಸಬಹುದು ಎಂದು ತಿಳಿಸಲಾಗಿದೆ. ಈ ಪ್ರಕ್ರಿಯೆ ಅನುಸರಿಸದೆ ದಾಖಲಿಸಿಕೊಂಡಿರುವ ಪ್ರಕ್ರಿಯೆಯನ್ನು ಅನುಮತಿಸಬಹುದೇ ಎಂಬ ಪ್ರಶ್ನೆ ಉದ್ಭವಿಸಲಿದೆ.
ಅಲ್ಲದೇ, ಶಾಶ್ವತವಾಗಿ ಮಾನಸಿಕ ಅಥವಾ ದೈಹಿಕವಾಗಿ ಅಂಗವೈಕಲ್ಯಕ್ಕೆ ಗುರಿಯಾಗಿರುವ ವ್ಯಕ್ತಿಯ ಹೇಳಿಕೆ ದಾಖಲಿಸಿಕೊಳ್ಳುವ ಸಂದರ್ಭದಲ್ಲಿ ಸರಿಯಾದ ಕಾರ್ಯವಿಧಾನ ಅನುಸರಿಸಿ, ಹೇಳಿಕೆ ಪರಿಗಣಿಸದಿದ್ದರೆ ಅಂತಹ ಹೇಳಿಕೆ ಭಾರತ ಸಾಕ್ಷ್ಯ ಅಧಿನಿಯಮ 1872ರ ಸೆಕ್ಷನ್ 137ರ ಅಡಿ ನಿರ್ದಿಷ್ಟಪಡಿಸಿದಂತೆ ನಿಯಮಗಳ ಪ್ರಕಾರ ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ.
ಆದ್ದರಿಂದ, ಮ್ಯಾಜಿಸ್ಟ್ರೆಟ್ ನ್ಯಾಯಾಧೀಶರು ಕಾನೂನಿನ ನಿಯಮಗಳ ಪ್ರಕಾರ ಸಂತ್ರಸ್ತೆ ಹೇಳಿಕೆ ದಾಖಲಿಸಿಕೊಂಡಿಲ್ಲ. ಆದ ಕಾರಣ ಸಂತ್ರಸ್ತೆ ಹೇಳಿಕೆಯನ್ನು ಸಾಕ್ಷ್ಯವನ್ನಾಗಿ ಪರಿಗಣಿಸಲಾಗುವುದಿಲ್ಲ ಎಂದು ಪೀಠ ವಿವರಿಸಿದೆ. ಜತೆಗೆ, ವಿಚಾರಣಾ ನ್ಯಾಯಾಲಯ ಈಗಾಗಲೇ ಪರಿಗಣಿಸಿದ್ದ ಹೇಳಿಕೆಯನ್ನು ರದ್ದುಗೊಳಿಸಿ, ನಿಯಮಗಳ ಅನುಸಾರವಾಗಿ ಸಾಕ್ಷಿಯ ಹೇಳಿಕೆಗಳನ್ನು ದಾಖಲಿಸಬೇಕು ಎಂದು ಸೆಷನ್ಸ್ ನ್ಯಾಯಾಲಯಕ್ಕೆ ಸೂಚನೆ ನೀಡಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರರ ವಿರುದ್ಧ ಮಾನಸಿಕ ಅಸ್ವಸ್ಥರಾಗಿರುವ ಸಂತ್ರಸ್ತೆಯ ಮೇಲೆ ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರ ಗರ್ಭಿಣಿಯಾಗಲು ಕಾರಣರಾಗಿರುವ ಆರೋಪದಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ತನಿಖೆ ನಡೆಸಿದ್ದ ಪೊಲೀಸರು ಆರೋಪಿಗಳ ವಿರುದ್ಧ ಸಿಆರ್‌ಪಿಸಿ ಸೆಕ್ಷನ್ 376(ಎಲ್) ಮತ್ತು 376(ಎನ್) ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಈ ವೇಳೆ ಅರ್ಜಿದಾರರ ವಿರುದ್ಧ ಮಾನಸಿಕ ಅಸ್ವಸ್ಥೆ ನೀಡಿದ್ದ ಹೇಳಿಕೆಯನ್ನು ವಿಚಾರಣಾ ನ್ಯಾಯಾಲಯ ದಾಖಲಿಸಿಕೊಂಡಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಧಾರವಾಡದ ಮಾನಸಿಕ ಮತ್ತು ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯ ಮನಃಶಾಸ್ತ್ರ ವಿಭಾಗದ ಅಧೀಕ್ಷಕರು ಸಂತ್ರಸ್ತೆಯ ಮಾನಸಿಕ ಸ್ಥಿತಿಗತಿಯನ್ನು ನಿರ್ಣಯಿಸಲು ವಿವರವಾದ ವರದಿಯನ್ನು ಸಲ್ಲಿಸಿದ್ದರು. ಈ ವರದಿಯ ಪ್ರಕಾರ ಸಂತ್ರಸ್ತೆ ಬೌದ್ಧಿಕ ಅಂಗ ವೈಖಲ್ಯದಿಂದ ಬಳಲುತ್ತಿದ್ದು, ನ್ಯಾಯಾಲಯಗಳ ಕಲಾಪ ಅರ್ಥಮಾಡಿಕೊಳ್ಳುವುದಕ್ಕೆ ಅರ್ಹರಿಲ್ಲ ಎಂಬುದಾಗಿ ತಿಳಿಸಲಾಗಿದೆ.
ಆದರೆ, ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸುವ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಪಾಲಿಸಿಲ್ಲ. ಸಾಕ್ಷಿಯನ್ನು ದಾಖಲಿಸಿಕೊಳ್ಳುವ ಸಂದರ್ಭದಲ್ಲಿ ಭಾಷಾಂತರಕಾರ ಇಲ್ಲವೇ ವಿಶೇಷ ಶಿಕ್ಷಕರ ನೆರವನ್ನು ಪಡೆದುಕೊಂಡಿಲ್ಲ. ಜತೆಗೆ, ವಿಡಿಯೋಗ್ರಾಫ್ ಮಾಡಿಲ್ಲ. ಆದ ಕಾರಣ ಈಗಾಗಲೇ ದಾಖಲಿಸಿಕೊಂಡಿರುವ ಹೇಳಿಕೆಯಂತೆ ಸಾಕ್ಷ್ಯವನ್ನು ಪರಿಗಣಿಸುವುದಕ್ಕೆ ಸಾಧ್ಯವಿಲ್ಲ ಎಂದು ಪೀಠಕ್ಕೆ ತಿಳಿಸಿದ್ದರು.
ಇದನ್ನೂ ಓದಿ: ಮೂರನೇ ಪತ್ನಿಗೂ ವಿಚ್ಛೇದನ ಕೋರಿ ಅರ್ಜಿ: ಪತಿಗೆ 25 ಸಾವಿರ ರೂ. ದಂಡ ಹಾಕಿದ ಹೈಕೋರ್ಟ್ - DIVORCE FOR THIRD WIFE