ಬೆಂಗಳೂರು: ಉದ್ಯಮಿ ಮತ್ತವರ ಕುಟುಂಬ ಸದಸ್ಯರನ್ನು ವಿಚಾರಣೆ ನೆಪದಲ್ಲಿ ಬೆದರಿಸಿ, ಹಣ ಸುಲಿಗೆ ಮಾಡಿದ್ದ ಆರೋಪದಡಿ ಕೇಂದ್ರೀಯ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಇಲಾಖೆಯ ನಾಲ್ವರು ಅಧಿಕಾರಿಗಳನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು, ಪ್ರಕರಣದಲ್ಲಿ ಹವಾಲ ಹಣ ವರ್ಗಾವಣೆಯಾಗಿರುವುದನ್ನು ಪತ್ತೆ ಹಚ್ಚಿದ್ದಾರೆ. ಮುಂದುವರೆದ ತನಿಖೆಯಲ್ಲಿ, ಮುಕೇಶ್ ಜೈನ್ ಹಾಗೂ ಪ್ರಕಾಶ್ ಜೈನ್ ಎಂಬ ಇಬ್ಬರು ಖಾಸಗಿ ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದರು.
ಬೆದರಿಸಿ ಹವಾಲಾ ಹಣ ಪಡೆದ ಆರೋಪಿಗಳು: ಉದ್ಯಮಿಯೊಬ್ಬರನ್ನು ಬೆದರಿಸಿ ಹಣ ಸುಲಿಗೆ ಮಾಡಿದ್ದ ಆರೋಪದಡಿ ಸೆಪ್ಟೆಂಬರ್ 9ರಂದು ನಾಲ್ವರು ಜಿಎಸ್‌ಟಿ ಅಧಿಕಾರಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಆರೋಪಿತ ಅಧಿಕಾರಿಗಳನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿದಾಗ ಅವರಿಗೆ ಮುಕೇಶ್ ಜೈನ್ ಹಾಗೂ ಪ್ರಕಾಶ್ ಜೈನ್ ಎಂಬ ಇಬ್ಬರು ಆರೋಪಿಗಳು ಸಾಥ್ ನೀಡಿದ್ದರು ಎಂಬುದು ತಿಳಿದು ಬಂದಿತ್ತು. ಅಲ್ಲದೇ, ಆರೋಪಿಗಳಾದ ಮುಕೇಶ್ ಜೈನ್ ಹಾಗೂ ಪ್ರಕಾಶ್ ಜೈನ್ ತಾವೇ ಜಿಎಸ್‌ಟಿ ಅಧಿಕಾರಿಗಳ ಮೂಲಕ ಉದ್ಯಮಿಯನ್ನು ಟ್ರ್ಯಾಪ್ ಮಾಡಿ,ಸಿ ಬಳಿಕ ಅವರ ಮೂಲಕ ಆತನನ್ನು ಬೆದರಿಸಿ ಹವಾಲಾ ಮೂಲಕ 1.1 ಕೋಟಿ ಹಣ ಪಡೆದಿದ್ದರು. ಮತ್ತು ಅದೇ ಹಣದಲ್ಲಿ ಕಮಿಷನ್ ಸಹ ಪಡೆದು ಉಳಿದ ಹಣವನ್ನು ಆರೋಪಿತ ಜಿಎಸ್‌ಟಿ ಅಧಿಕಾರಿಗಳಿಗೆ ತಲುಪಿಸಿದ್ದರು ಎಂದು ತಿಳಿದು ಬಂದಿತ್ತು.