ಬೆಂಗಳೂರು: ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ರಂಗನಾಥಪುರದಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಗೃಹಿಣಿಯ ಶವ ಪತ್ತೆಯಾಗಿದೆ. ಕುತ್ತಿಗೆಗೆ ಸೀರೆ ಬಿಗಿದ ಸ್ಥಿತಿಯಲ್ಲಿ ನೇತ್ರಾವತಿ (34) ಎಂಬ ಮಹಿಳೆ ಸಾವಿಗೀಡಾಗಿದ್ದಾರೆ. ಪತ್ನಿಯನ್ನು ಹತ್ಯೆಗೈದ ಆರೋಪದಡಿ ಪತಿ ವೆಂಕಟೇಶ ಎಂಬಾತನನ್ನು ಕಾಮಾಕ್ಷಿಪಾಳ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಾಗಡಿಯ ಗೇರುಪುರ ಮೂಲದ ದಂಪತಿ ನಾಲ್ಕು ವರ್ಷಗಳಿಂದ ರಂಗನಾಥಪುರದಲ್ಲಿ ವಾಸವಿದ್ದರು. ಇವರಿಗೆ 9 ವರ್ಷದ ಗಂಡು ಮಗನಿದ್ದಾನೆ. ವೆಂಕಟೇಶ್ ಕ್ರೇನ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ. ನೇತ್ರಾವತಿ ಗಾರ್ಮೆಂಟ್ಸ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದನು. ನಿತ್ಯ ಮದ್ಯಪಾನ ಮಾಡಿ ಮನೆೆಗೆ ಬಂದು ಪತ್ನಿಯೊಂದಿಗೆ ಗಲಾಟೆ ಮಾಡುತ್ತಿದ್ದ ವೆಂಕಟೇಶನಿಗೆ ಸಂಬಂಧಿಕರು ಬುದ್ದಿವಾದ ಹೇಳಿದ್ದರು. ಆದರೂ ಸಹ ಖರ್ಚಿಗೆ ಹಣಕ್ಕಾಗಿ ಪತ್ನಿಯ ಬಳಿಯಿದ್ದ ಒಡವೆಗಳನ್ನು ನೀಡುವಂತೆ ಪೀಡಿಸುತ್ತಿದ್ದನು. ಇದೇ ಕಾರಣಕ್ಕಾಗಿ ಎರಡು ದಿನಗಳ ಹಿಂದೆಯೂ ಗಲಾಟೆಯಾಗಿತ್ತು. ಶನಿವಾರ ರಾತ್ರಿ ಕುಡಿದು ಬಂದು ಗಲಾಟೆ ಮಾಡಿದ್ದ ವೆಂಕಟೇಶ್, ಪತ್ನಿ ಉಸಿರುಗಟ್ಟಿಸಿ ಹತ್ಯೆಗೈದು ಬಳಿಕ ತಲೆಮರೆಸಿಕೊಂಡಿದ್ದಾನೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಬೆಳಗ್ಗೆ ಪಕ್ಕದ ಮನೆಯವರು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಕೃತ್ಯದ ಬಳಿಕ ಬಸ್ ನಿಲ್ದಾಣದ ಬಳಿಯಿದ್ದ ವೆಂಕಟೇಶನನ್ನು ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ನಿರ್ಮಾಣ ಹಂತದ ಕಟ್ಟಡದ ಸಮೀಪ ವ್ಯಕ್ತಿಯ ಶವ ಪತ್ತೆ:ನಿರ್ಮಾಣ ಹಂತದ ಕಟ್ಟಡದ ಬಳಿ ಅನುಮಾನಾಸ್ಪದ ರೀತಿಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ. ಕೋಣನಕುಂಟೆ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ರಾಯಚೂರು ಮೂಲದ ವೀರೇಶ್ (27) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
80 ಅಡಿ ರಸ್ತೆ ಸಮೀಪದ ನಿರ್ಮಾಣ ಹಂತದ ಕಟ್ಟಡದಲ್ಲಿ ಇಂದು ಬೆಳಗ್ಗೆ ಶವ ಪತ್ತೆಯಾಗಿದೆ. ಸ್ಥಳಕ್ಕೆ ಕೋಣನಕುಂಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾರೆ ಕೆಲಸ ಮಾಡಿಕೊಂಡಿದ್ದ ವೀರೇಶ್, ಕೋಣನಕುಂಟೆಯ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡಿಕೊಂಡಿದ್ದ. ಮೃತನ ಸಹೋದ್ಯೋಗಿಗಳ ವಿಚಾರಣೆ ಮಾಡಲಾಗುತ್ತಿದೆ. ಸಂಬಂಧಿಕರಿಂದ ದೂರು ಪಡೆದುಕೊಂಡ ಪೊಲೀಸರು ಸಂಶಯಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.