ಬೆಂಗಳೂರು:ವಾಣಿಜ್ಯ ಕಟ್ಟಡಕ್ಕೆ ತೆರಿಗೆ ಮೊತ್ತದಲ್ಲಿ ಹಣ ಕಡಿತ ಮಾಡಲು 4.5 ಲಕ್ಷ ರೂ. ಲಂಚ ಪಡೆಯುವಾಗ ಇಬ್ಬರು ಬಿಬಿಎಂಪಿ ಅಧಿಕಾರಿಗಳನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಯಶವಂತಪುರ ಬಿಬಿಎಂಪಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಾಯಕ ಕಂದಾಯ ಅಧಿಕಾರಿ (ಎಆರ್ಒ) ರಾಜೇಂದ್ರ ಪ್ರಸಾದ್ ಹಾಗೂ ತೆರಿಗೆ ಮೌಲ್ಯಮಾಪಕ ಪ್ರಕಾಶ್ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದವರು. ಇವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಯಶವಂತಪುರದಲ್ಲಿ ವಾಸವಾಗಿರುವ ದೂರುದಾರ ಚಂದ್ರಶೇಖರ್ ಎಂಬವರಿಗೆ ಕರೆ ಮಾಡಿ, ವಾಣಿಜ್ಯ ಕಟ್ಟಡವೊಂದರ ತೆರಿಗೆ ಪಾವತಿಸಬೇಕಿದೆ. ತೆರಿಗೆ ಹಣ ಕಡಿತಗೊಳಿಸಲು 4.5 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ದೂರುದಾರರು ಮಾಹಿತಿ ನೀಡಿದ ಮೇರೆಗೆ, ಇಂದು 4.5 ಲಕ್ಷ ರೂ. ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಅಗಿ ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ.
ತನಿಖೆ ವೇಳೆ ಪ್ರಕರಣ ಬಯಲು: ತೆರಿಗೆ ಬಾಕಿಯಿಲ್ಲದಿದ್ದರೂ ಹೆಚ್ಚು ತೆರಿಗೆ ಬಾಕಿಯಿರುವುದಾಗಿ ಕರೆ ಮಾಡಿ ತಿಳಿಸುತ್ತಿದ್ದ ಆರೋಪಿಗಳು ಅವರನ್ನ ಯಶವಂತಪುರದಲ್ಲಿರುವ ಬಿಬಿಎಂಪಿ ಕಚೇರಿಗೆ ಕರೆಯಿಸಿಕೊಳ್ಳುತ್ತಿದ್ದರು. 70 ಲಕ್ಷ ರೂಪಾಯಿ ತೆರಿಗೆ ಉಳಿಸಿಕೊಂಡಿದ್ದು, ಕೂಡಲೇ ಟ್ಯಾಕ್ಸ್ ಕಟ್ಟಬೇಕು. ಚೆಕ್ ಮೂಲಕ ಪಾವತಿಸಿ ಎಂದು ಸೂಚಿಸಿದ್ದ ಅರೋಪಿಗಳು ಇನ್ನುಳಿದ ಹಣವನ್ನು ನಗದು ರೂಪದಲ್ಲಿ ಹಣ ನೀಡಬೇಕೆಂದು ಹೇಳುತ್ತಿದ್ದರು. ಇದೇ ರೀತಿ ತಂತ್ರ ಅನುಸರಿಸಿ ಹಲವರಿಂದ ಲಂಚ ಪಡೆದ ಗುಮಾನಿಯಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ದೂರುದಾರ ಚಂದ್ರಶೇಖರ್ ಅವರನ್ನು ಕರೆಯಿಸಿಕೊಂಡು ತೆರಿಗೆ ಹಣ ಕಡಿತ ಮಾಡುತ್ತೇವೆ. ಇದಕ್ಕೆ 4.5 ಲಕ್ಷ ಲಂಚ ನೀಡುವಂತೆ ತಾಕೀತು ಮಾಡಿದ್ದರು. ಇದರಂತೆ ಲಂಚ ಸ್ವೀಕರಿಸುವಾಗ ತಮ್ಮ ಕೈಗೆ ಅರೋಪಿತರು ಸಿಕ್ಕಿಬಿದ್ದಿದ್ದಾರೆ ಎಂದು ಲೋಕಾಯುಕ್ತರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಹಣಕೋಣ ಉದ್ಯಮಿ ಹತ್ಯೆ ಪ್ರಕರಣದಲ್ಲಿ ಮೂವರು ಆರೋಪಿಗಳ ಬಂಧನ: ಎಸ್ಪಿ ಹೇಳಿದ್ದೇನು? - BUSINESSMAN MURDER CASE