ಮಂಗಳೂರು:ಗೋವಾದಿಂದ ನಿಷೇಧಿತ ಮಾದಕ ವಸ್ತು ಕೊಕೇನ್ ಖರೀದಿಸಿಕೊಂಡು ಮಂಗಳೂರು ನಗರ ಹಾಗೂ ಕೇರಳದಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಅಂಬ್ಲಮೊಗರಿನ ಸದಕತ್ (31) ಹಾಗೂ ಮಹಮ್ಮದ್ ಅಶ್ಫಕ್ (25) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ 35 ಗ್ರಾಂ ಕೊಕೇನ್ ವಶಪಡಿಸಿಕೊಳ್ಳಲಾಗಿದೆ. ಇವರು ಮಂಗಳೂರು ನಗರಕ್ಕೆ ಗೋವಾದಿಂದ ನಿಷೇಧಿತ ಮಾದಕ ವಸ್ತುವಾದ ಕೊಕೇನ್ ಖರೀದಿಸಿಕೊಂಡು ಬಂದು ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಇನ್ಸ್ಪೆಕ್ಟರ್ ಶ್ಯಾಮ್ ಸುಂದರ್ ಹೆಚ್.ಎಂ. ನೇತೃತ್ವದ ಪೊಲೀಸರ ತಂಡ ಉಳ್ಳಾಲ ತಾಲೂಕು ಆಂಬ್ಲಮೊಗರು ಗ್ರಾಮದ ಎಲಿಯಾರ್ ಪದವು ಮೈದಾನದ ಬಳಿ ದ್ವಿಚಕ್ರ ವಾಹನದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವೇಳೆ ಆರೋಪಿಗಳನ್ನು ಬಂಧಿಸಿದ್ದಾರೆ.