ಬೆಂಗಳೂರು : ರಾಜಧಾನಿಯಲ್ಲಿ ಚಿನ್ನಾಭರಣ ಕಳ್ಳತನ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಜಾತ್ರೆಯಲ್ಲಿಯೂ ಕೈಚಳಕ ತೋರಿಸ್ತಾರೆ. ಚಿನ್ನದ ಅಂಗಡಿಯಲ್ಲಿ ಕರಾಮತ್ತು ಮಾಡ್ತಾರೆ. ಅಷ್ಟೇ ಅಲ್ಲ ವಯಸ್ಸಾದವರನ್ನ ನೋಡಿಕೊಳ್ಳಿ ಅಂತಾ ಮನೆ ಕೆಲಸದವರನ್ನ ಹಾಗೂ ನರ್ಸ್ಗಳನ್ನ ನೇಮಕ ಮಾಡಿಕೊಂಡರೆ ಅವರೂ ಕಳ್ಳತನಕ್ಕೆ ಇಳಿದು ಬಿಟ್ಟಿದ್ದಾರೆ.
ವಯಸ್ಸಾದವರನ್ನ ಮನೆಯಲ್ಲಿ ಆರೈಕೆ ಮಾಡುವ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳಾ ಆರೋಪಿಗಳು ಕೆಲಸ ಮಾಡುತ್ತಿದ್ದ ನಿವಾಸದಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ. ಇದೀಗ ಜೆ ಪಿ ನಗರ ಪೊಲೀಸರ ಅತಿಥಿಯಾಗಿದ್ದಾರೆ. ಮಂಜುಳಾ ಹಾಗೂ ಮಹದೇವಮ್ಮ ಬಂಧಿತರು. ಮಂಜುಳಾ ನರ್ಸ್ ಆಗಿ ಕೆಲಸ ಮಾಡುತ್ತಿದ್ದರೆ, ಮಹದೇವಮ್ಮ ಮನೆಗೆಲಸ ಮಾಡುತ್ತಿದ್ದರು. ಜೆ ಪಿ ನಗರದ ನಿವಾಸಿಯೊಬ್ಬರು ವಯಸ್ಸಾದ ತಂದೆ ತಾಯಿಯನ್ನ ನೋಡಿಕೊಳ್ಳಲು ಈ ಇಬ್ಬರನ್ನು ನೇಮಕ ಮಾಡಿಕೊಂಡಿದ್ದರು. ಎಷ್ಟು ದಿನ ಅಂತಾ ಹೀಗೆ ಕೆಲಸ ಮಾಡಿಕೊಂಡು ಇರುವುದು ಅಂದುಕೊಂಡು ದಿಢೀರ್ ಶ್ರೀಮಂತರಾಗುವ ದಾರಿ ಹುಡುಕಿದ್ದರು. ಆಗ ಹೊಳೆದಿದ್ದೇ ಕೆಲಸ ಕೊಟ್ಟ ಮನೆಯಲ್ಲೇ ಕಳ್ಳತನ ಮಾಡುವ ಉಪಾಯ.
ಹೌದು, ಯಾರೂ ಇಲ್ಲದ ಸಮಯ ನೋಡಿಕೊಂಡ ಇಬ್ಬರು ಮನೆಯ ಅಲ್ಮೇರಾದಲ್ಲಿದ್ದ 383 ಗ್ರಾಂ ಚಿನ್ನಾಭರಣ, 104 ಗ್ರಾಂ ತೂಕದ ಬೆಳ್ಳಿ ಸಾಮಾನುಗಳನ್ನ ಕದ್ದು ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡ ಜೆಪಿ ನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಕಳುವಾಗಿದ್ದ ಮಾಲನ್ನು ವಶಕ್ಕೆ ಪಡೆದಿದ್ದಾರೆ.