ಕರ್ನಾಟಕ

karnataka

ETV Bharat / state

ಕಾರವಾರ: ಕಡಲಾಮೆ ಮರಿಗಳನ್ನು ಸಮುದ್ರ ಸೇರಿಸಿದ ಅರಣ್ಯ ಇಲಾಖೆ - ಕಾರವಾರ

ದೇವಭಾಗದ ಕಡಲತೀರದಲ್ಲಿ 50ಕ್ಕೂ ಹೆಚ್ಚು ಕಡಲಾಮೆ ಮರಿಗಳನ್ನು ಸಮುದ್ರಕ್ಕೆ ಬಿಡಲಾಯಿತು.

Etv Bharatturtles-were-released-into-the-sea-in-karwar
ಕಾರವಾರ: ಸಂರಕ್ಷಿಸಿದ ಕಡಲಾಮೆ ಮೊಟ್ಟೆಗಳಿಂದ ಹೊರ ಬಂದ ಮರಿಗಳನ್ನು ಸಮುದ್ರ ಸೇರಿಸಿದ ಅರಣ್ಯ ಇಲಾಖೆ

By ETV Bharat Karnataka Team

Published : Feb 7, 2024, 9:26 PM IST

ಕಡಲಾಮೆ ಮರಿಗಳನ್ನು ಸಮುದ್ರಕ್ಕೆ ಬಿಡಲಾಯಿತು.

ಕಾರವಾರ: ಕಡಲಾಮೆಗಳು ಪರಿಸರಸ್ನೇಹಿ ಜೀವಿಗಳು. ಇತ್ತೀಚಿನ ದಿನಗಳಲ್ಲಿ ಅವುಗಳು ಅಳಿವಿನ ಅಂಚಿನಲ್ಲಿರುವ ಪ್ರಭೇದಗಳ ಪಟ್ಟಿಗೆ ಸೇರಿವೆ. ಅವುಗಳ ಸಂತತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಇಲಾಖೆ, ಆಮೆಯ ಮೊಟ್ಟೆಗಳನ್ನು ಸಂರಕ್ಷಿಸುವ ಕೆಲಸ ಮಾಡುತ್ತಿದೆ. ಹೀಗೆ ಸಂರಕ್ಷಿಸಲಾಗಿದ್ದ ಮೊಟ್ಟೆಗಳಿಂದ ಇದೀಗ ಮರಿಗಳು ಹೊರಬಂದಿವೆ. ಅವುಗಳನ್ನು ಸುರಕ್ಷಿತವಾಗಿ ಇಂದು ಕಾರವಾರ ತಾಲೂಕಿನ ದೇವಭಾಗದಲ್ಲಿ ಕಡಲಿಗೆ ಸೇರಿಸಲಾಯಿತು.

ಇದೇ ಮೊದಲ ಬಾರಿಗೆ ಅರಣ್ಯ ಇಲಾಖೆ ವತಿಯಿಂದ ದೇವಭಾಗ ಕಡಲತೀರದಲ್ಲಿ ಆಲಿವ್ ರಿಡ್ಲೆ ಪ್ರಭೇದದ ಆಮೆಯ ಮೊಟ್ಟೆಗಳನ್ನು ಸಂರಕ್ಷಿಸಿಡಲಾಗಿತ್ತು. ಆ ಮೊಟ್ಟೆಗಳು ಮರಿಗಳಾಗಿ ಹೊರಬಂದಿವೆ. ದೇವಭಾಗ ಕಡಲತೀರದಲ್ಲಿ ಕಳೆದ ಜನವರಿಯಲ್ಲಿ ಆಲಿವ್ ರಿಡ್ಲೆ ಕಡಲಾಮೆ ಒಟ್ಟು 26 ಕಡೆ ಮೊಟ್ಟೆಗಳನ್ನಿಟ್ಟಿದ್ದು ಎಲ್ಲವನ್ನೂ ಅರಣ್ಯ ಇಲಾಖೆ ಗೇಜ್​ಗಳಲ್ಲಿ ಹಾಕಿ ಸಂರಕ್ಷಿಸಿಟ್ಟಿದ್ದರು. ಸುಮಾರು 50 ಆಮೆಮರಿಗಳು ಮೊಟ್ಟೆ ಒಡೆದು ಹೊರಬಂದಿವೆ.

ಕಡಲಾಮೆಗಳಲ್ಲಿ 7 ಪ್ರಭೇದಗಳಿವೆ. ರಾಜ್ಯದ ಕಡಲತೀರದಲ್ಲಿ 3 ಬಗೆಯ ಕಡಲಾಮೆಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ಆಲಿವ್ ರಿಡ್ಲೆ ಕಡಲಾಮೆ ಮಾತ್ರ ಕಡಲತೀರದಲ್ಲಿ ಮೊಟ್ಟೆ ಇಡುವ ಪ್ರಭೇದ. ಕಡಲಾಮೆಗಳ ಸಂತತಿ ಅಳಿವಿನ ಅಂಚಿನಲ್ಲಿರುವ ಕಾರಣದಿಂದ ಜಿಲ್ಲೆಯ ಅರಣ್ಯ ಇಲಾಖೆ ಅವುಗಳ ರಕ್ಷಣೆಗೆ ಕೋಸ್ಟಲ್ ಮರೈನ್ ಆ್ಯಂಡ್ ಇಕೋ ಸಿಸ್ಟಮ್ ಎನ್ನುವ ವಿಭಾಗವನ್ನು ರೂಪಿಸಿದೆ. ಇದರಡಿಯಲ್ಲಿ ಈಗಾಗಲೇ ಕಾರವಾರ ವಿಭಾಗದ ದೇವಭಾಗ ವಿಭಾಗದಲ್ಲಿ ಸುಮಾರು 26 ಕಡೆ ಕಡಲಾಮೆಗಳು ಮೊಟ್ಟೆಯನ್ನಿಟ್ಟಿದ್ದು 1,500ಕ್ಕೂ ಅಧಿಕ ಆಮೆಯ ಮೊಟ್ಟೆಗಳನ್ನು ಸಂರಕ್ಷಿಸಲಾಗಿದೆ.

ಅಲ್ಲದೇ ಆಮೆಯ ಗೂಡುಗಳ ಕುರಿತು ಮಾಹಿತಿ ನೀಡುವ ಸಾರ್ವಜನಿಕರಿಗೆ ಒಂದು ಸಾವಿರ ರೂಪಾಯಿ ಸಹಾಯಧನ ನೀಡುತ್ತಿದ್ದು, ಇದರಿಂದ ಸಾರ್ವಜನಿಕರಿಂದಲೂ ಇದೀಗ ಕಡಲಾಮೆ ಸಂತತಿ ರಕ್ಷಣೆಗೆ ಸಹಕಾರಿಯಾಗಿದೆ. ಇನ್ನು ಕಡಲಾಮೆಗಳು ಕಡಲ ಪರಿಸರದ ಸಮತೋಲನ ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಅವುಗಳ ರಕ್ಷಣೆ ಅತ್ಯಗತ್ಯ. ಹೀಗೆ ಸಂರಕ್ಷಿಸಲ್ಪಟ್ಟ ಆಮೆಯ ಮೊಟ್ಟೆಗಳಿಂದ ಹೊರಬಂದ ಮರಿಗಳನ್ನು ಕಾರವಾರದಲ್ಲಿ ಇದೇ ಮೊದಲ ಬಾರಿಗೆ ಸಮುದ್ರಕ್ಕೆ ಬಿಟ್ಟಿದ್ದರಿಂದ ಹಲವು ಅಧಿಕಾರಿಗಳು ಸಾರ್ವಜನಿಕರು ಹಾಗೂ ಪ್ರವಾಸಿಗರು ಸಹ ಆಗಮಿಸಿದ್ದು, ಆಮೆಯ ಮರಿಗಳು ಸಮುದ್ರದತ್ತ ಹೆಜ್ಜೆ ಹಾಕುವುದನ್ನು ನೋಡಿ ಸಂತಸಪಟ್ಟರು.

ಇದನ್ನೂ ಓದಿ:ಇಂಡಿಯನ್ ಕೋಸ್ಟ್ ಗಾರ್ಡ್ ಡೇ: ಅರಬ್ಬಿ ಸಮುದ್ರದಲ್ಲಿ ರೋಮಾಂಚಕ ಅಣಕು ಕಾರ್ಯಾಚರಣೆ

ABOUT THE AUTHOR

...view details