ಬಾಗಲಕೋಟೆ :ಜಾಗೃತ ದೇವರು ಎಂದು ಹೆಸರು ವಾಸಿಯಾಗಿರುವ ತುಳಸಿಗೇರಿ ಆಂಜನೇಯ ದೇವಾಲಯದ ಓಕಳಿ ಉತ್ಸವ ಸಂಭ್ರಮ ಸಡಗರದಿಂದ ಜರುಗಿತು. ಶನಿವಾರದಿಂದ ಮೂರು ದಿನಗಳ ಕಾಲ ನಡೆಯುವ ಈ ಓಕಳಿ ಉತ್ಸವವು ತನ್ನದೇ ಆದ ವೈಶಿಷ್ಟ್ಯತೆ ಪಡೆದುಕೊಂಡಿದೆ.
ಓಕಳಿ ಉತ್ಸವ ನಂತರ ಆರು ತಿಂಗಳ ಕಾಲ ಈ ಗ್ರಾಮದಲ್ಲಿ ಯುವಕರು ಮದುವೆ ಆಗುವಂತಿಲ್ಲ. ಮನೆಗೆ ಸುಣ್ಣ ಬಣ್ಣ ಹಚ್ಚುವಂತಿಲ್ಲ ಹಾಗೂ ಹೊಸ ಕಸಬರಿಗೆ ಮತ್ತು ಎತ್ತುಗಳಿಗೆ ಶೃಂಗಾರ ಮಾಡುವಂತಿಲ್ಲ. ಇದು ಓಕಳಿ ನಂತರ ಈ ಗ್ರಾಮದಲ್ಲಿ ಆಚರಿಸಿಕೊಂಡು ಬರುವ ಸಂಪ್ರದಾಯ ಹಾಗೂ ಪದ್ಧತಿ. ನೂರಾರು ವರ್ಷಗಳ ಇತಿಹಾಸ ಹಿನ್ನೆಲೆ ಹೊಂದಿರುವ ತುಳಸಿಗೇರಿ ಆಂಜನೇಯ ದೇವಾಲಯ ಓಕಳಿಯು ಮೇ ತಿಂಗಳಿನಲ್ಲಿ ನಡೆಯುತ್ತೆ. ಹುಣ್ಣಿಮೆ ಮುಂಚೆಯೇ ಗ್ರಾಮಸ್ಥರು ವಾರ ಹಿಡಿದಿರುತ್ತಾರೆ.
ಮೂರು ವಾರದ ಬಳಿಕ ಶನಿವಾರದ ದಿನದಂದು ಓಕಳಿ ಉತ್ಸವ ಪ್ರಾರಂಭ ಆಗುತ್ತದೆ. ಮೊದಲು ಆಂಜನೇಯ ದೇವರಿಗೆ ವಿಶೇಷ ಪೂಜೆ, ಪುರಸ್ಕಾರ, ನಂತರ ಕಡುಬಿನ ನೈವೇದ್ಯ ಮೂರನೆಯ ದಿನ ಓಕಳಿ ಅಂದರೆ ಪುಟ್ಟ ಹೊಂಡದ ನೀರಿನಲ್ಲಿ ಮಿಂದೇಳುವುದು. ದೇವಾಲಯದ ಆವರಣ ಪಕ್ಕದಲ್ಲಿಯೇ ಚಿಕ್ಕ ಹೊಂಡ ಇದೆ. ಕೊನೆಯ ದಿನದಂದು ಸೋಮವಾರ ಮುಂಜಾನೆಯಿಂದಲೇ ಪೂಜೆ, ಪುರಸ್ಕಾರ ನೇರವೇರಿಸುತ್ತಾರೆ. ನಂತರ ಹೊಂಡದಲ್ಲಿ ಕುಂಕುಮ, ಅರಿಶಿಣ, ಕೊಬ್ಬರಿ ಎಣ್ಣೆ ಸೇರಿದಂತೆ ಇತರ ವಸ್ತುಗಳನ್ನು ಹಾಕಿ, ಶೃಂಗಾರ ಮಾಡಿ, ಪೂಜೆ ಸಲ್ಲಿಸುತ್ತಾರೆ. ಸಂಜೆ ಪಲ್ಲಕ್ಕಿ ಮೆರವಣಿಗೆ ನಡೆಸಲಾಗುತ್ತದೆ.