ಚಿಕ್ಕಮಗಳೂರು: ಭಾರೀ ಮಳೆಯಿಂದ ಅವಾಂತರ, ಸೆ.30ರವರೆಗೆ ಪ್ರವಾಸಿ ತಾಣಗಳಲ್ಲಿ ಟ್ರೆಕ್ಕಿಂಗ್ ನಿಷೇಧ (ETV Bharat) ಚಿಕ್ಕಮಗಳೂರು:ಕಾಫಿನಾಡಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಪ್ರಸಿದ್ಧ ಪ್ರವಾಸಿ ತಾಣಗಳಾದ ಬಲ್ಲಾಳ ರಾಯನ ದುರ್ಗ, ರಾಣಿ ಝರಿ, ಬಂಡಾಜೆ ಫಾಲ್ಸ್ ಚಾರಣಕ್ಕೆ ಸೆಪ್ಟೆಂಬರ್ 30 ರವರೆಗೆ ನಿಷೇಧ ಹೇರಲಾಗಿದೆ.
ಗುಡ್ಡಗಾಡು ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ನೀರಿನ ಹರಿವು ಹೆಚ್ಚಳಗೊಂಡಿದೆ. ಪ್ರವಾಸಿಗರು ಚಾರಣದ ವೇಳೆ ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿದೆ. ಪ್ರವಾಸಿಗರ ಹಿತದೃಷ್ಟಿಯಿಂದ ಮೂಡಿಗೆರೆ ತಾಲೂಕಿನ ಬಲ್ಲಾಳ ರಾಯನ ದುರ್ಗ ಪ್ರವಾಸಿ ತಾಣ, ಕಳಸ ತಾಲೂಕಿನ ಬಂಡಾಜೆ ಫಾಲ್ಸ್ ಚಾರಣವನ್ನು ಕೊಪ್ಪ ವಿಭಾಗದ ಅರಣ್ಯ ಇಲಾಖೆ ನಿರ್ಬಂಧಿಸಿದೆ.
ಮೂಡಿಗೆರೆಯ ಚಾರ್ಮಾಡಿ ಘಾಟ್, ಕೊಟ್ಟಿಗೆಹಾರ, ಬಣಕಲ್, ಬಾಳೂರು, ಜಾವಳಿ, ಸಬ್ಬೇನಹಳ್ಳಿ, ಭಾರತಿಬೈಲ್ ನಲ್ಲಿ ಭಾರೀ ಗಾಳಿ-ಮಳೆ ಆಗಿದೆ. ಚಾರ್ಮಾಡಿ ಘಾಟಿಯಲ್ಲಿ ಸಂಚರಿಸಲಾಗದೆ ವಾಹನಗಳು ಕೊಟ್ಟಿಗೆಹಾರದಲ್ಲೇ ನಿಂತಿವೆ.
ಭಾರೀ ಗಾಳಿ-ಮಳೆಯಿಂದ ಈ ಭಾಗದ ಕುಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಭಾರೀ ಮಳೆಗೆ ಚಿಕ್ಕಮಗಳೂರು ತಾಲೂಕಿನ ಬಾಸಪುರ ಗ್ರಾಮದ ಮುಖ್ಯ ರಸ್ತೆ ನದಿಯಂತಾಗಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ. ಬಾಸಾಪುರ ಸೇರಿ ಹಲವು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತವಾಗಿದ್ದು ಗ್ರಾಮಸ್ಥರು ಪರದಾಡುವಂತಾಗಿದೆ. ಇನ್ನು ತೋಟಗಳಿಗೆ ನೀರು ನುಗ್ಗಿ ಕಾಫಿ ಬೆಳೆಗೆ ಹಾನಿಯಾಗಿದೆ.
ರಸ್ತೆ ಮೇಲೆ ಬಿದ್ದ ಭಾರೀ ಗಾತ್ರದ ಮರ: ಬಾಳೆಹೊನ್ನೂರು ಮೆಲ್ವಾಲ್ ರಸ್ತೆಯಲ್ಲಿ ಭಾರೀ ಗಾತ್ರದ ಮರ ಬಿದ್ದ ಪರಿಣಾಮ ಸಂಚಾರ ಅಸ್ತವ್ಯಸ್ತವಾಗಿದೆ. ಹಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿವೆ. ಕೆಲಕಾಲ ರಸ್ತೆ ಸಂಪರ್ಕ ಕಡಿತಗೊಂಡು ಸವಾರರು ಪರದಾಡಬೇಕಾಯಿತು.
ಅಪಾಯ ಮಟ್ಟ ಮೀರಿದ ತುಂಗಾ ನದಿ: ಶೃಂಗೇರಿಯಲ್ಲೂ ಮಳೆ ಅಬ್ಬರ ಮುಂದುವರಿದಿದ್ದು, ತುಂಗಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ನದಿಯ ನೀರು ಶೃಂಗೇರಿ ಪಟ್ಟಣದ ಗಾಂಧಿ ಮೈದಾನ, ಯಾತ್ರಿ ನಿವಾಸದವರೆಗೂ ಬಂದಿದೆ. ನದಿ ತಟದಲ್ಲಿದ್ದ ಅಂಗಡಿ ಮುಂಗಟ್ಟು, ಪಾರ್ಕಿಂಗ್ ಜಾಗ ಮುಳುಗಡೆಯಾಗಿದೆ.
ನಿರಂತರ ಮಳೆಯಿಂದ ಕೊಪ್ಪ ತಾಲೂಕಿನ ಕೊಗ್ರೆ-ಶೃಂಗೇರಿ ರಸ್ತೆ ಹಾಗೂ ಕೊಗ್ರೆ ಸಮೀಪದ ಹುಲ್ಲಿನಗದ್ದೆ ಸೇತುವೆ ಜಲಾವೃತಗೊಂಡಿದೆ. ಕುದುರೆಮುಖ ವ್ಯಾಪ್ತಿಯ ಘಟ್ಟ ಪ್ರದೇಶಗಳಲ್ಲಿ ಮಳೆ ಸುರಿಯುತ್ತಿದ್ದು, ಭದ್ರಾ ನದಿ ಅಪಾಯದ ಮಟ್ಟ ಮೀರಿದೆ. ಕಳಸ ತಾಲೂಕಿನ ಹೊರನಾಡು ಬಳಿಯ ಹೆಬ್ಬಾಳೆ ಸೇತುವೆ ಜಲಾವೃತಗೊಂಡಿದ್ದು, ಹೊರನಾಡು-ಕಳಸ ಸಂಪರ್ಕ ಕಡಿತಗೊಂಡಿದೆ. ಕಳೆದ ರಾತ್ರಿಯಿಂದಲೂ ಸೇತುವೆಯ ಮೇಲೆ ಭದ್ರಾ ನದಿ ಉಕ್ಕಿ ಹರಿಯುತ್ತಿದೆ. ಮುನ್ನೆಚ್ಚರಿ ಕಾರ್ಯಕ್ರಮವಾಗಿ ಸೇತುವೆಯ ಎರಡು ಕಡೆ ಬ್ಯಾರಿಕೇಡ್ ಹಾಕಲಾಗಿದೆ. ಹೆಬ್ಬಾಳೆ ಸೇತುವೆಯ ಮೇಲೆ ವಾಹನಗಳ ಸಂಚಾರ ನಿಷೇಧ ಮಾಡಲಾಗಿದ್ದು, ಸೇತುವೆ ಬಳಿ ಕಳಸ ಪೊಲೀಸರು ಮೊಕ್ಕಾಂ ಹೂಡಿದ್ದಾರೆ.
ಇದನ್ನೂ ಓದಿ:ಕಪಿಲಾ ನದಿಯಲ್ಲಿ ಹೆಚ್ಚಿದ ನೀರಿನ ಪ್ರಮಾಣ: ನಂಜನಗೂಡು ಕಪಿಲಾ ಸ್ನಾನ ಘಟ್ಟಕ್ಕೆ ಪ್ರವೇಶ ನಿರ್ಬಂಧ - water level Increase in Kapila