ಗಂಗಾವತಿ(ಕೊಪ್ಪಳ):ಮಾಧ್ಯಮ ಲೋಕದ ದಿಗ್ಗಜರಾಮೋಜಿ ರಾವ್(87) ನಿಧನಕ್ಕೆ ತಾಲೂಕಿನ ಕಮ್ಮಾ ಸಮಾಜದಿಂದ ಶನಿವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಗಂಗಾವತಿ ನಗರದಲ್ಲಿರುವ ಕಮ್ಮಾ ಸಮಾಜದ ಕಚೇರಿಯಲ್ಲಿ ರಾಮೋಜಿ ರಾವ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿರುವ ಸಮಾಜದ ಹಿರಿಯರು ಶ್ರದ್ಧಾಂಜಲಿ ಸಲ್ಲಿಸಿದರು.
ಕಮ್ಮಾ ಸಮಾಜದ ತಾಲೂಕು ಅಧ್ಯಕ್ಷ, ಉದ್ಯಮಿ ಚಿನ್ನುಪಾಟಿ ಪ್ರಭಾಕರ ರಾವ್ ಮಾತನಾಡಿ, "ಈನಾಡು ತೆಲುಗು ಪತ್ರಿಕೆ, ಈಟಿವಿಯಂತಹ ಬಹುಭಾಷಾ ಮಾಧ್ಯಮ ಸಂಸ್ಥೆಯ ನಿರ್ಮಾಣದ ಮೂಲಕ ಸಾವಿರಾರು ಜನರ ಅನ್ನದಾತ ರಾಮೋಜಿ ರಾವ್. ಅವರು ಕೇವಲ ಮಾಧ್ಯಮ ಸಂಸ್ಥೆಗೆ ಸೀಮಿತರಾದವರಲ್ಲ. ಉಷಾಕಿರಣ ಎಂಬ ನಿರ್ಮಾಣ ಸಂಸ್ಥೆಯ ಮೂಲಕ ಸದಭಿರುಚಿಯ ಧಾರಾವಾಹಿ, ಸಿನಿಮಾಗಳನ್ನು ನಿರ್ಮಿಸಿ ಭಾರತದ ಸಂಸ್ಕೃತಿಯನ್ನು ಎತ್ತಿ ಹಿಡಿದವರು. ಅಲ್ಲದೇ ಕನ್ನಡ-ತೆಲುಗು ಸೇರಿದಂತೆ ದೇಶದ ನಾನಾ ಭಾಷೆಗಳ ಚಿತ್ರತಂಡಗಳು ಚಿತ್ರೀಕರಣಕ್ಕೆ ವಿದೇಶಕ್ಕೆ ಹೋಗುತ್ತಿದ್ದರು. ಆದರೆ ರಾಮೋಜಿ ಫಿಲಂ ಸಿಟಿ ಮಾಡುವ ಮೂಲಕ ಹಾಲಿವುಡ್ ಕೂಡ ಭಾರತದತ್ತ ತಿರುಗಿ ನೋಡುವಂತೆ ಮಾಡಿದವರು. ಇಂತಹ ಮಹಾನ್ ನಾಯಕನನ್ನು ಕಳೆದುಕೊಂಡಿರುವುದು ಭಾರತದ ಉದ್ಯಮ ವಲಯ ಅದ್ರಲ್ಲೂ ಮುಖ್ಯವಾಗಿ ಆಂಧ್ರಪ್ರದೇಶಕ್ಕೆ ಭರಿಸಲಾದ ನಷ್ಟ. ಅವರ ಕುಟುಂಬಸ್ಥರಿಗೆ ಈ ನೋವು ಸಹಿಸುವ ಶಕ್ತಿ ಸಿಗಲಿ" ಎಂದು ತಿಳಿಸಿದರು.