ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ 2024ಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಇದೇ ಜುಲೈ 26 ರಿಂದ ಆಗಸ್ಟ್ 11 ರವರೆಗೆ ಅಂತಾರಾಷ್ಟ್ರೀಯ ಕ್ರೀಡಾ ಹಬ್ಬ ನಡೆಯಲಿದೆ. ಇದಕ್ಕಾಗಿ 120 ಸದಸ್ಯರ ಭಾರತ ತಂಡ ಫ್ರಾನ್ಸ್ಗೆ ಹೊರಡುತ್ತಿದೆ. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಸೇರಿದಂತೆ ಎಲ್ಲ ಕ್ರೀಡಾಪಟುಗಳನ್ನು ಭೇಟಿ ಮಾಡಿ ಸಂವಾದ ನಡೆಸಿದರು.
ಪ್ಯಾರಿಸ್ ಒಲಿಂಪಿಕ್ಸ್‌ಗೆ ಆಯ್ಕೆ ಆದ ಎಲ್ಲಾ ಆಟಗಾರರನ್ನು ಪ್ರಧಾನಿ ಮೋದಿ ನಿನ್ನೆ ಅಭಿನಂದಿಸಿದ್ದರು. ಈ ಬಾರಿ, ಒಲಿಂಪಿಕ್ಸ್‌ನಲ್ಲಿ ಭಾರತದ ಒಟ್ಟಾರೆ ತಂಡವನ್ನು ನೀರಜ್ ಚೋಪ್ರಾ ಮುನ್ನಡೆಸಲಿದ್ದಾರೆ. ತಂಡದ ಮುಂಚೂಣಿ ಆಟಗಾರನ ಬಳಿ ಮೋದಿ ವಿಶೇಷ ಬೇಡಿಕೆವೊಂದನ್ನು ಇಟ್ಟಿದ್ದಾರೆ. ಚಿನ್ನದ ಹುಡುಗ ನೀರಜ್ ಚೋಪ್ರಾ ಅವರ ತಾಯಿ ಮಾಡಿದ ಚುರ್ಮಾ ತಿನ್ನುವ ಬಯಕೆಯನ್ನು ಮೋದಿ ಅವರು ವ್ಯಕ್ತಪಡಿಸಿದ್ದಾರೆ. ಒಲಿಂಪಿಕ್ಸ್‌ನಿಂದ ಹಿಂದಿರುಗಿದ ನಂತರ, ತನ್ನ ತಾಯಿ ಮಾಡಿದ ವಿಶೇಷ ಚುರ್ಮಾವನ್ನು ಪ್ರಧಾನಿ ಮೋದಿ ಅವರಿಗೆ ತಿನ್ನಿಸುವುದಾಗಿ ನೀರಜ್ ಭರವಸೆ ಕೂಡಾ ನೀಡಿದ್ದಾರೆ.
ಚುರ್ಮಾ ತಿನ್ನಿಸುವ ಭರವಸೆ ನೀಡಿದ ನೀರಜ್ ತಾಯಿ: ನೀರಜ್ ಚೋಪ್ರಾ ಅವರ ತಾಯಿ ಪ್ರಧಾನಿ ಮೋದಿ ಅವರನ್ನು ತಮ್ಮ ಮಗ ಭೇಟಿಯಾದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ದೇವರು ಇಚ್ಛಿಸಿದರೆ ಮೋದಿ ಅವರಿಗೆ ದೇಸಿ ತುಪ್ಪ, ಸಕ್ಕರೆಯಿಂದ ಮಾಡಿದ ವಿಶೇಷ ಚುರ್ಮಾ ತಿನ್ನಿಸುತ್ತೇನೆ ಎಂಬ ಮಾತು ನೀಡಿದ್ದಾರೆ. ಈ ಬಾರಿ ವಿಶೇಷ ಚುರ್ಮಾವನ್ನು ಪ್ರಧಾನಿ ಮೋದಿಗೆ ಕಳುಹಿಸಿಕೊಡಲಾಗುತ್ತದೆ ಎಂದು ನೀರಜ್ ತಾಯಿ ತಿಳಿಸಿದ್ದಾರೆ.
ನೀರಜ್ ಚೋಪ್ರಾ ಅವರ ತಂದೆ ಸತೀಶ್ ಚೋಪ್ರಾ ಕೂಡ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ನೀರಜ್ ಅವರ ತಯಾರಿ ತುಂಬಾ ಚೆನ್ನಾಗಿದೆ ಎಂದು ಮಗನ ಯಶಸ್ಸಿನ ಬಗ್ಗೆ ಹೇಳಿದ್ದಾರೆ. ನೀರಜ್ ಗಾಯದಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಿಂದಾಗಿ ಅವರು ಎರಡು - ಮೂರು ಟೂರ್ನಮೆಂಟ್ಗಳನ್ನು ಕೈ ಬಿಡಬೇಕಾಯಿತು. ದೇಶದ ಕೀರ್ತಿಗಾಗಿ ಆಟದಲ್ಲಿ 100 ಪರ್ಸೆಂಟ್ ನೀಡುತ್ತೇನೆ ಎಂದು ಹೇಳಿದ್ದಾರೆ. ಇದಕ್ಕಾಗಿ 7ರಿಂದ 8 ಗಂಟೆಗಳ ಕಾಲ ನಿರಂತರವಾಗಿ ಅಭ್ಯಾಸ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ನೀರಜ್ ಚೋಪ್ರಾ ಅವರು ಪ್ರಧಾನಿ ಮೋದಿ ಅವರ ಭೇಟಿಯ ಬಗ್ಗೆ ಅವರ ಚಿಕ್ಕಪ್ಪ ಭೀಮ್ ಚೋಪ್ರಾ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ಉತ್ತಮ ಆಡಳಿತಗಾರರಾಗಿದ್ದಾರಲ್ಲದೇ ಉತ್ತಮ ಮನುಷ್ಯ ಕೂಡ ಎಂದು ಹೇಳಿದರು. ಅವರು ಪ್ರತಿಯೊಬ್ಬ ಆಟಗಾರರಿಗೂ ಸಮಾನ ಗೌರವವನ್ನು ನೀಡುತ್ತಾರೆ. ಇತ್ತೀಚೆಗಷ್ಟೇ ಭಾರತ ತಂಡವನ್ನು ಭೇಟಿ ಮಾಡಿ ಟಿ-20 ವಿಶ್ವಕಪ್ ಗೆದ್ದಿದ್ದಕ್ಕಾಗಿ ಅಭಿನಂದಿಸಿದ್ದಾರೆ. ಅವರು ಯಾವಾಗಲೂ ಒಲಿಂಪಿಕ್ ಆಟಗಾರರನ್ನು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ ಎಂದು ಹೇಳಿದ್ದಾರೆ.
ನೀರಜ್ ಅವರ ತಯಾರಿ ತುಂಬಾ ಚೆನ್ನಾಗಿ ನಡೆಯುತ್ತಿದೆ. ಉತ್ತಮವಾಗಿ ಆಡುವ ಮೂಲಕ ದೇಶಕ್ಕೆ ಕೀರ್ತಿ ತರುತ್ತೇನೆ ಎಂದು ಹೇಳಿದ್ದಾರೆ. ನೀರಜ್ ಭಾರತ ತಂಡವನ್ನು ಮುನ್ನಡೆಸುವುದು ಕುಟುಂಬಕ್ಕೆ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ. ಈಗ ಅವರ ಹೆಗಲ ಮೇಲೆ ದೇಶದ ಜವಾಬ್ದಾರಿ ಹೆಚ್ಚಿದೆ. ಈ ಬಾರಿ ಒಲಿಂಪಿಕ್ಸ್‌ನಲ್ಲಿ ಹೆಚ್ಚು ಪದಕಗಳನ್ನು ಪಡೆಯುತ್ತೇವೆ ಎಂದು ನಾನು ಭಾವಿಸುತ್ತೇನೆ. ನೀರಜ್ ಮತ್ತು ನಮ್ಮ ಎಲ್ಲಾ ಆಟಗಾರರು ಮತ್ತೊಮ್ಮೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು ಮತ್ತು ಅವರಿಂದ ಸ್ಫೂರ್ತಿ ಪಡೆಯುವ ಅವಕಾಶವನ್ನು ಪಡೆಯುತ್ತಾರೆ ಎಂದು ಅವರ ಚಿಕ್ಕಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಅಮ್ಮ ಕೇರಳ, ಅಪ್ಪ ತಮಿಳುನಾಡು: ಕರ್ನಾಟಕದಿಂದ ಪ್ಯಾರಿಸ್ ಒಲಿಂಪಿಕ್ಸ್‌ಗೆ ಮಗಳು ಆಯ್ಕೆ - Dhinidhi Desingu