ಕಾರವಾರ:ಉತ್ತರಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಕುಮಟಾ ಸೇರಿದಂತೆ ಕೆಲ ತಾಲೂಕುಗಳ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಭಾನುವಾರ ಭೂಮಿ ಕಂಪಿಸಿದ ಅನುಭವವಾಗಿದ್ದು ಜನರು ಆತಂಕಗೊಂಡಿದ್ದರು. ಈ ಬೆನ್ನಲ್ಲೇ ಜಿಲ್ಲಾಡಳಿತ ಸ್ಪಷ್ಟನೆ ನೀಡಿ, ರಿಕ್ಟರ್ ಮಾಪಕದಲ್ಲಿ ಯಾವುದೇ ರೀತಿಯ ಭೂಕಂಪನ ದಾಖಲಾಗಿಲ್ಲ ಎಂದು ತಿಳಿಸಿದೆ.
ಮನೆಯಿಂದ ಹೊರಗೆ ಬಂದಿದ್ದ ಜನ: ಶಿರಸಿ ತಾಲೂಕಿನ ಸಂಪಖಂಡ, ಮತ್ತಿಘಟ್ಟಾ ಸೇರಿದಂತೆ ಕೆಲವು ಗ್ರಾಮಗಳು ಹಾಗೂ ಸಿದ್ದಾಪುರ ತಾಲೂಕಿನ ಗೋಳಿಮಕ್ಕಿ, ಹೆಗ್ಗರಣಿ, ಹೇರೂರು, ಕುಮಟಾದ ಮುರೂರು ಸೇರಿದಂತೆ ಕೆಲವು ಗ್ರಾಮಗಳಲ್ಲಿ ಮಧ್ಯಾಹ್ನದ ವೇಳೆಗೆ ಏಕಾಏಕಿ ಭೂಮಿ ಕಂಪಿಸಿದಂತಾಗಿದ್ದು, ಹಲವರು ಭೂಕಂಪ ಇರಬಹುದೆಂದು ಮನೆಯಿಂದ ಹೊರಬಂದಿದ್ದರು.
ಮಧ್ಯಾಹ್ನ ಸುಮಾರು 12 ಗಂಟೆ ವೇಳೆಗೆ ಮನೆಯಲ್ಲಿದ್ದವರಿಗೆ ಏಕಾಏಕಿ ಮನೆಯ ವಸ್ತುಗಳು ಕಂಪಿಸಿದ ಈ ಅನುಭವವಾಗಿದೆ. ಹಲವರಿಗೆ ಕುಳಿತ ಖುರ್ಚಿ, ಸೋಫಾ ಅಲುಗಾಡಿದಂತಾಗಿದ್ದು, ಭೂಕಂಪ ಉಂಟಾಗಿರಬಹುದೆಂದು ಮನೆಯಿಂದ ಹೊರಗೆ ಬಂದಿದ್ದಾರೆ. ಅಲ್ಲದೇ ಅಕ್ಕಪಕ್ಕದವರೂ ಸಹ ತಮಗೂ ಅದೇ ರೀತಿ ಅನುಭವ ಆಗಿದ್ದನ್ನು ಹೇಳಿಕೊಂಡಿದ್ದರಿಂದ ಜನರು ಕೆಲಕಾಲ ಹೆದರಿದ್ದರು.
ಕೆಲವೆಡೆ ತಗಡಿನ ಮನೆಯಲ್ಲಿದ್ದವರಿಗೆ ಭೂಮಿ ಕಂಪಿಸಿದ ಸ್ಪಷ್ಟ ಅನುಭವವಾಗಿದ್ದು, ಕೆಲಕಾಲ ಮನೆಯೊಳಗೆ ಹೋಗದೇ ಅಪಾಯವಾಗುವ ಆತಂಕದಲ್ಲಿ ಹೊರಗೆ ಕಾಲಕಳೆದಿದ್ದಾರೆ. ಆದರೆ ಇದುವರೆಗೂ ಅಧಿಕೃತವಾಗಿ ಯಾವುದೇ ಇಲಾಖೆಯಿಂದ ಭೂಕಂಪನದ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಜಿಲ್ಲಾಧಿಕಾರಿ ಸ್ಪಷ್ಟನೆ: 'ನಾವು ನೈಸರ್ಗಿಕ ಪ್ರಕೃತಿ ವಿಕೋಪ ಕೇಂದ್ರದಲ್ಲಿ ವಿಚಾರಿಸಿದ್ದೇವೆ. ಯಾವುದೇ ರೀತಿಯ ಭೂಕಂಪನವಾಗಿಲ್ಲ. ರಿಕ್ಟರ್ ಮಾಪನದಲ್ಲೂ ದಾಖಲಾಗಿಲ್ಲ, ಹೀಗಾಗಿ ಜನ ಭಯಪಡುವ ಅವಶ್ಯಕತೆ ಇಲ್ಲ. ಇನ್ನು ಈ ಭಾಗದಲ್ಲಿ ಹೆದ್ದಾರಿ ಕಾಮಗಾರಿಗಾಗಿ ಯಾವುದೇ ಸ್ಫೋಟ ನಡೆಸಿಲ್ಲ. ಜನರು ಹೇಳಿರುವ ಬಗ್ಗೆ ಮಾಹಿತಿ ಪಡೆಯುತ್ತೇವೆ' ಎಂದು ಉತ್ತರ ಕನ್ನಡದ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಭೂಮಿ ಕಂಪಿಸಿದ ಬಗ್ಗೆ ಸಾಮಾಜಿಕ ಜಾಲತಾಣ ಹಾಗೂ ಟಿವಿ ಮಾಧ್ಯಮಗಳಲ್ಲಿ ಪ್ರಸಾರಗೊಂಡ ಸಂದೇಶ ಜಿಲ್ಲಾಡಳಿತದ ಗಮನಕ್ಕೂ ಬಂದಿದೆ. ಈ ಬಗ್ಗೆ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರವನ್ನು ಸಂಪರ್ಕಿಸಿದ್ದು, ರಿಕ್ಟರ್ ಮಾಪಕದಲ್ಲಿ ಭೂಕಂಪ ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ. ಆದ್ದರಿಂದ ಜನರು ಆತಂಕ ಪಡಬೇಕಿಲ್ಲ. ಯಾವುದೇ ಕಂಪನದ ಅನುಭವವಾದ್ರೆ ಸಾರ್ವಜನಿಕರು ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರ 1077 ಮತ್ತು 08382229857 ಸಂಖ್ಯೆಗೆ ಸಂಪರ್ಕಿಸಿ ಮಾಹಿತಿ ನೀಡಬಹುದಾಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಸಮೀಪ ಕಾಣಿಸಿಕೊಂಡ ಕಾಡಾನೆ