ಬೆಂಗಳೂರು: "ರಾಜ್ಯದ ಹಣಕಾಸಿನ ವ್ಯವಸ್ಥೆಯಲ್ಲಿ ಒಂದು ರೂಪಾಯಿ ಖರ್ಚು ಮಾಡುವುದಕ್ಕೂ ವಿಧಾನಮಂಡಲದ ಅನುಮೋದನೆ ಕಡ್ಡಾಯ. ಜನರ ತೆರಿಗೆ ಹಣ ಸದ್ಬಳಕೆಯಾಗಬೇಕು ಎನ್ನುವುದೇ ಇದರ ಉದ್ದೇಶ" ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಅಭಿಪ್ರಾಯಪಟ್ಟರು. ಕರ್ನಾಟಕ ವಿಧಾನ ಮಂಡಲದ ತರಬೇತಿ ಸಂಸ್ಥೆಯ ವತಿಯಿಂದ ನಗರದ ಖಾಸಗಿ ಹೋಟೆಲ್ನಲ್ಲಿ ಇಂದು ಶಾಸಕರಿಗೆ ಹಮ್ಮಿಕೊಂಡಿದ್ದ 'ಆಯವ್ಯಯ' ಕುರಿತು ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
"ಈ ವಿಷಯದ ಕುರಿತು ಶಾಸಕರು ಬಜೆಟ್ ಮೇಲೆ ಚರ್ಚೆಯಲ್ಲಿ ಭಾಗವಹಿಸಿ ವಿಷಯಗಳನ್ನು ಪ್ರಸ್ತಾಪಿಸಬೇಕು. ಎಲ್ಲವನ್ನೂ ಏಕಾಏಕಿ ಕಲಿತಿರುವುದಿಲ್ಲ. ಕಲಿಕೆ ಎಂಬುದು ಹಿರಿಯರನ್ನು ನೋಡುತ್ತಾ, ಅನುರಿಸುತ್ತಾ ತಿಳಿದುಕೊಳ್ಳಬೇಕಾಗುತ್ತದೆ. ಶಾಸಕರು ತಮ್ಮ ಕ್ಷೇತ್ರಕ್ಕೆ ಸೀಮಿತವಾಗದೆ, ರಾಜ್ಯದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ವಿಧಾನಮಂಡಲದಲ್ಲಿ ಮೌಲ್ಯಯುತವಾದ ಚರ್ಚೆಗಳಿಗೆ ಪೂರ್ವ ತಯಾರಿ ಮಾಡಿಕೊಳ್ಳಬೇಕು" ಎಂದು ಸಲಹೆ ನೀಡಿದರು.
"ಕ್ಷೇತ್ರದ ಅಭಿವೃದ್ಧಿಗೆ ಮಹತ್ವ ನೀಡಬೇಕು. ಆದರೆ, ತಾವು ಕರ್ನಾಟಕ ವಿಧಾನಸಭಾ ಸದಸ್ಯರೆಂಬುದನ್ನು ಶಾಸಕರು ಮರೆಯಬಾರದು. ವಿಧಾನಮಂಡಲ ಹಾಗೂ ಮುನ್ಸಿಪಾಲಿಟಿ ನಡುವೆ ವ್ಯತ್ಯಾಸವಿದೆ. ಶಾಸಕರು ಸೀಮಿತವಾಗಿ ಯೋಚಿಸಬಾರದು. ವಿಧಾನಮಂಡಲದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಂತಹ ಹಿರಿಯರು ಮಾತನಾಡುವುದನ್ನು ಗಮಸಿದರೆ ಬಹಳಷ್ಟು ವಿಚಾರಗಳು ತಿಳಿಯುತ್ತವೆ. ಆದರೆ, ಎಲ್ಲದಕ್ಕೂ ಆಸಕ್ತಿ ಮುಖ್ಯ" ಎಂದು ಹೇಳಿದರು.
"ಫೆಬ್ರವರಿಯಲ್ಲಿ ಬಜೆಟ್ ಮಂಡನೆಯಾದಾಗ ಸದಸ್ಯರು ಪೂರ್ತಿಯಾಗಿ ಓದಿಕೊಳ್ಳಲು ಆಗುವುದಿಲ್ಲ ಎಂಬ ಕಾರಣಕ್ಕೆ ಆರಂಭದ ಮೂರು ತಿಂಗಳು ಲೇಖಾನುದಾನ ಪಡೆಯಲಾಗುತ್ತದೆ. ಬಳಿಕ ಜೂನ್ ಅಥವಾ ಜುಲೈನಲ್ಲಿ ಪೂರ್ಣ ಪ್ರಮಾಣದ ಬಜೆಟ್ಗೆ ಅಂಗೀಕಾರ ಪಡೆಯಲಾಗುತ್ತದೆ. ಶಾಸಕರು ಬಜೆಟ್ ಭಾಷಣದ ಪ್ರತಿಯನ್ನು ಮಾತ್ರ ಓದದೇ ಅದರ ಜೊತೆಗೆ ನೀಡಲಾಗುವ ಆರ್ಥಿಕ ಸಮೀಕ್ಷಾ ವರದಿ ಸೇರಿದಂತೆ ಹೆಚ್ಚುವರಿ ದಾಖಲೆಗಳನ್ನು ಅಧ್ಯಯನ ಮಾಡಬೇಕು. ಆಗ ಮಾತ್ರವೇ ಬಜೆಟ್ ಮೇಲೆ ಅಧಿಕೃತವಾಗಿ ಮಾತನಾಡುವ ಸಾಮರ್ಥ್ಯ ಬರುತ್ತದೆ. ತಮ್ಮ ಕ್ಷೇತ್ರಕ್ಕೆ ಅನುದಾನವನ್ನು ಕೇಳುವುದಕ್ಕಷ್ಟೇ ಸೀಮಿತವಾಗಬಾರದು. ನಾಡಿನ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಚರ್ಚೆಯಲ್ಲಿ ಭಾಗವಹಿಸಬೇಕು. ಆಸಕ್ತಿ ಇರುವವರಿಗೆ ಅವಕಾಶಗಳು ತಾನಾಗೇ ಒಲಿದು ಬರುತ್ತವೆ" ಎಂದರು.