ಕರ್ನಾಟಕ

karnataka

ETV Bharat / state

ಪ್ರಯಾಣಿಕರ ಗಮನಕ್ಕೆ: ಗುಡ್ಡ ಕುಸಿತ ಹಿನ್ನೆಲೆ ಕೆಲ ರೈಲು ರದ್ದು, ಹಲವು ರೈಲುಗಳ ಮಾರ್ಗ ಬದಲಾವಣೆ - Train Service

ಭೂಕುಸಿತ ಸಂಭವಿಸಿದ ಪರಿಣಾಮ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಕೆಲ ರೈಲು ರದ್ದಾಗಿದ್ದು, ಇನ್ನೂ ಕೆಲ ರೈಲು ಸಂಚಾರ ಮಾರ್ಗದಲ್ಲಿ ಬದಲಾವಣೆ ಆಗಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)

By ETV Bharat Karnataka Team

Published : Jul 27, 2024, 9:43 AM IST

ಮಂಗಳೂರು/ಹುಬ್ಬಳ್ಳಿ: ಭಾರೀ ಮಳೆಯಿಂದ ಶಿರಾಡಿ ಘಾಟಿ ಪ್ರದೇಶದ ಎಡಕುಮೇರಿ ಮತ್ತು ಕಡಗರವಳ್ಳಿ ವಿಭಾಗದ ನಡುವೆ ಭೂಕುಸಿತ ಸಂಭವಿಸಿದೆ. ಇದರಿಂದ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಕೆಲ ರೈಲು ಸಂಚಾರ ರದ್ದುಗೊಳಿಸಲಾಗಿದ್ದು, ಇನ್ನೂ ಕೆಲ ರೈಲುಗಳ ಸಂಚಾರವನ್ನು ಮಾರ್ಪಡಿಸಲಾಗಿದೆ.

27-07-2024ರಂದು ಹೊರಡುವ ರೈಲು ಸಂಖ್ಯೆ 16539 ಯಶವಂತಪುರ-ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ಹಾಗೂ ರೈಲು ಸಂಖ್ಯೆ 16516 ಕಾರವಾರ-ಯಶವಂತಪುರ ಎಕ್ಸ್‌ಪ್ರೆಸ್ ರೈಲುಗಳನ್ನು ರದ್ದುಪಡಿಸಲಾಗಿದೆ.

ಸಕಲೇಶಪುರ ಬಳಿಯ ಶಿರಾಡಿ ಘಾಟಿ ಪ್ರದೇಶದ ಎಡಕುಮೇರಿ – ಕಡಗರವಳ್ಳಿ ನಡುವೆ ರೈಲ್ವೆ ಹಳಿಯ ಮೇಲೆ ಗುಡ್ಡಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಈ ರೈಲುಗಳನ್ನು ರದ್ದು ಮಾಡಲಾಗಿದೆ. ಅದೇ ರೀತಿ ಹಾಸನ- ಮಂಗಳೂರು ನಡುವೆ ಸಂಚರಿಸುವ ಹಲವು ರೈಲುಗಳಿಗೆ ಕೇರಳ-ತಮಿಳುನಾಡು ಮೂಲಕ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಶುಕ್ರವಾರ ಸಂಜೆ ಕಾರವಾರ – ಬೆಂಗಳೂರು ರೈಲು ಮತ್ತು ಕೇರಳದ ಕಣ್ಣೂರಿನಿಂದ ಮಂಗಳೂರು ಮೂಲಕ ಬೆಂಗಳೂರಿಗೆ ಸಾಗುವ ರೈಲಿನ ಸಂಚಾರ ವಿಳಂಬವಾಗಿದ್ದು, ತಮಿಳುನಾಡು ಮೂಲಕ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

ರಾತ್ರಿ 8 ಗಂಟೆಗೆ ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಹೊರಡುವ ಕಣ್ಣೂರು–ಬೆಂಗಳೂರು ರೈಲು ಶುಕ್ರವಾರ ರಾತ್ರಿ 9.30 ಆದರೂ ಹೊರಟಿರಲಿಲ್ಲ. ರೈಲು ಟಿಕೆಟ್ ಪಡೆದು ಕಾದು ಕುಳಿತಿದ್ದ ಪ್ರಯಾಣಿಕರು ಸಂಕಷ್ಟ ಎದುರಿಸುವಂತಾಯಿತು. ಆ ನಂತರ, ರೈಲು ಸಾಗುವ ಹಾದಿಯಲ್ಲಿ ಭೂಕುಸಿತ ಆಗಿದೆಯೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಷ್ಟರಲ್ಲಿ ಕೆಲವು ಪ್ರಯಾಣಿಕರು ಬೆಂಗಳೂರಿಗೆ ತೆರಳುವ ಕೆಎಸ್​ಆರ್​ಟಿಸಿ ಬಸ್ಸಿನಲ್ಲಿ ತೆರಳಿದ್ದಾರೆ.

9.45ರ ಸುಮಾರಿಗೆ ಸದ್ರಿ ರೈಲು ಮರಳಿ ಕೇರಳದತ್ತ ಸಂಚರಿಸಿ, ಕಣ್ಣೂರು, ಸೇಲಂ ಮಾರ್ಗವಾಗಿ ಬೆಂಗಳೂರಿಗೆ ಸಂಚರಿಸಿದೆ.

ಮಾರ್ಗ ಬದಲಾವಣೆ:ಕಾರಣ ಏಳು ರೈಲುಗಳ ಸಂಚಾರವನ್ನ ಮಾರ್ಗ ಬದಲಾವಣೆ ಮಾಡಲಾಗಿದೆ. ಶುಕ್ರವಾರ ಮಂಗಳೂರು ಸೆಂಟ್ರಲ್​ನಿಂದ ಹೊರಟ 07378 ಸಂಖ್ಯೆಯ ವಿಜಯಪುರ ಎಕ್ಸ್ ಪ್ರೆಸ್ ರೈಲು ಸಕಲೇಶಪುರ ಮಾರ್ಗದ ಬದಲು ಕಾರವಾರ, ಮಡಗಾಂವ್, ಕ್ಯಾಲರ್ ರಾಕ್, ಲೋಂಡಾ ಜಂಕ್ಷನ್, ಹುಬ್ಬಳ್ಳಿ ಮೂಲಕ ವಿಜಯಪುರಕ್ಕೆ ತೆರಳಿದೆ.

ಬೆಂಗಳೂರು ನಿಲ್ದಾಣದಿಂದ ಎಂಟು ಗಂಟೆಗೆ ಕಾರವಾರಕ್ಕೆ ಹೊರಟ 16596 ಸಂಖ್ಯೆಯ ರೈಲು ಯಶವಂತಪುರ ನಿಲ್ದಾಣದಿಂದ ಡೈವರ್ಟ್ ಆಗಿದ್ದು, ಬಾಣಸವಾಡಿ, ಸೇಲಂ ಜಂಕ್ಷನ್, ಪೋದನೂರು ಜಂಕ್ಷನ್, ಶೋರನೂರು ಮೂಲಕ ಮಂಗಳೂರು ಜಂಕ್ಷನ್ ತಲುಪಲಿದೆ.

ಶುಕ್ರವಾರ ಮಧ್ಯಾಹ್ನ ಮುರುಡೇಶ್ವರದಿಂದ ಬೆಂಗಳೂರು ಹೊರಟ 16586 ಸಂಖ್ಯೆಯ ರೈಲು ಮಂಗಳೂರು ಜಂಕ್ಷನ್ ಮೂಲಕ ಡೈವರ್ಟ್ ಆಗಿದ್ದು, ಶೋರ್ನೂರು, ಸೇಲಂ ಮೂಲಕ ಬೆಂಗಳೂರು ತಲುಪಲಿದೆ. ಶುಕ್ರವಾರ ಸಂಜೆಯ ವೇಳೆಗೆ ಕೇರಳದ ಕಣ್ಣೂರಿನಿಂದ ಬೆಂಗಳೂರಿಗೆ ಹೊರಟ 16512 ಸಂಖ್ಯೆಯ ರೈಲು ಮಂಗಳೂರು ಸೆಂಟ್ರಲ್​​ಗೆ ಬಂದು ವಿಳಂಬಗೊಂಡಿದ್ದು, ಶೋರನೂರು, ಸೇಲಂ ಜಂಕ್ಷನ್ ಮೂಲಕ ಬೆಂಗಳೂರು ತಲುಪಲಿದೆ.

ಕಾರವಾರದಿಂದ ಬೆಂಗಳೂರಿಗೆ ತೆರಳುವ 16596 ಸಂಖ್ಯೆಯ ರೈಲು ಮಂಗಳೂರು ಜಂಕ್ಷನ್​ನಲ್ಲಿ ಡೈವರ್ಟ್ ಆಗಲಿದ್ದು, ಶೋರನೂರು, ಸೇಲಂ ಜಂಕ್ಷನ್ ಮೂಲಕ ತೆರಳಲಿದೆ. ಬೆಂಗಳೂರಿನಿಂದ ಕೇರಳದ ಕಣ್ಣೂರಿಗೆ ಬರುವ 16511 ಸಂಖ್ಯೆಯ ರೈಲು ಸೇಲಂ ಜಂಕ್ಷನ್, ಶೋರನೂರು ಮೂಲಕ ಮಂಗಳೂರು ಜಂಕ್ಷನ್ ಬರಲಿದೆ. ಬೆಂಗಳೂರಿನಿಂದ ಮುರುಡೇಶ್ವರಕ್ಕೆ ಬರುವ 16585 ಸಂಖ್ಯೆಯ ಎಕ್ಸ್ ಪ್ರೆಸ್ ರೈಲು ತಮಿಳುನಾಡಿನ ಸೇಲಂ ಮೂಲಕ ಶೋರನೂರು ತಲುಪಿ ಅಲ್ಲಿಂದ ಮಂಗಳೂರು ಜಂಕ್ಷನ್ ಮುಖೇನ ತೆರಳಲಿದೆ ಎಂದು ದಕ್ಷಿಣ ರೈಲ್ವೆ ಪ್ರಕಟಣೆ ತಿಳಿಸಿದೆ.

ಈ ನಡುವೆ ಸುಬ್ರಹ್ಮಣ್ಯ‌ - ಸಕಲೇಶಪುರ ಮಧ್ಯೆ ಭೂಕುಸಿತ ಸಂಭವಿಸಿ ರೈಲು ರದ್ದುಪಡಿಸಿದ ಕಾರಣ ರೈಲ್ವೆ ಅಧಿಕಾರಿಗಳು ಪ್ರಯಾಣಿಕರಿಗೆ ಸಮರ್ಪಕ ಬಸ್ಸಿನ ವ್ಯವಸ್ಥೆ ಮಾಡಿಲ್ಲ ಎಂದು ಕುಕ್ಕೆ ಸುಬ್ರಹ್ಮಣ್ಯ(ನೆಟ್ಟಣ) ರೈಲು ನಿಲ್ದಾಣದಲ್ಲಿ ಪ್ರವಾಸಿಗರು ಮತ್ತು ರೈಲ್ವೆ ಅಧಿಕಾರಿಗಳ ನಡುವೆ ಮಾತಿನ ಚಕಮಕಿಯೂ ನಡೆಯಿತು. ಈ ಸಂದರ್ಭದಲ್ಲಿ ವಿಷಯ ತಿಳಿದ ತಕ್ಷಣ ಅಲ್ಲಿಗೆ ಬಂದ ರೈಲು ಬಳಕೆದಾರರ ವೇದಿಕೆಯ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಪ್ರಯಾಣಿಕರಿಗೆ ಸೂಕ್ತ ಸಲಹೆ ನೀಡಿ ಬಸ್ಸಿನ ವ್ಯವಸ್ಥೆ ಮಾಡಿದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಶಿವಮೊಗ್ಗ: ಮಳೆಗೆ ಹಳಿ ಮೇಲೆ ಬಿದ್ದ ಮರ, ಇಂಟರ್ ಸಿಟಿ ರೈಲು ಸಂಚಾರದಲ್ಲಿ ವ್ಯತ್ಯಯ - Inter City Train

ABOUT THE AUTHOR

...view details