ಬೆಂಗಳೂರು/ನವದೆಹಲಿ: ರಾಜ್ಯದ ವಿವಿಧ ಹೆದ್ದಾರಿ ಯೋಜನೆಗಳ ಕುರಿತು ತ್ವರಿತ ಕ್ರಮವಹಿಸುವಂತೆ ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್. ಡಿ. ಕುಮಾರಸ್ವಾಮಿ ಮನವಿ ಸಲ್ಲಿಸಿದರು.
ನವದೆಹಲಿಯಲ್ಲಿ ಇಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾದ ಕುಮಾರಸ್ವಾಮಿ, ರಾಜ್ಯದಲ್ಲಿ ಹಲವಾರು ಹೆದ್ದಾರಿ ಯೋಜನೆಗಳ ಅಭಿವೃದ್ಧಿ ಆಗಬೇಕಿದ್ದು, ಆ ಬಗ್ಗೆ ಕ್ರಮ ವಹಿಸಬೇಕು ಎಂದು ಮನವಿ ಸಲ್ಲಿಸಿದರು. ಈ ವೇಳೆ ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಮೈಸೂರು ಮುಂತಾದ ಜಿಲ್ಲೆಗಳ ಹೆದ್ದಾರಿಗಳ ಅಭಿವೃದ್ಧಿ ಕುರಿತು ಚರ್ಚಿಸಿದರು.
ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ನಿತಿನ್ ಖಡ್ಕರಿ, ಯೋಜನೆಗಳ ಬಗ್ಗೆ ತಕ್ಷಣವೇ ಖುದ್ದಾಗಿ ಗಮನ ಹರಿಸುವುದಾಗಿ ಗಡ್ಕರಿ ಅವರು ಭರವಸೆ ನೀಡಿದರು.
ಮಂಡ್ಯದ ಹೊರ ವರ್ತುಲ ರಸ್ತೆ : ಮಂಡ್ಯ ಹೆದ್ದಾರಿಯ ಬೈಪಾಸ್ ರಸ್ತೆ ಅಗಲೀಕರಣ, ವೈಟ್ ಟ್ಯಾಪಿಂಗ್ ಹಾಗೂ ಎನ್ಎಚ್-275ರಲ್ಲಿರುವ ಮಂಡ್ಯ ನಗರದ ಎಲ್ಲಾ ಜಂಕ್ಷನ್ ಗಳು, ಪಾದಚಾರಿ ಮಾರ್ಗಗಳನ್ನೂ ಅಭಿವೃದ್ಧಿ ಮಾಡಬೇಕು.
ಜೇವರ್ಗಿ- ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ (ಎನ್ಎಚ್-150A)ಯಲ್ಲಿನ ಪಾಂಡವಪುರ ಪಟ್ಟಣ, ಕಿರಂಗೂರು ಬಳಿಯ ಹೆದ್ದಾರಿ ಅಭಿವೃದ್ಧಿ ಮಾಡುವ ಬಗ್ಗೆಯೂ ಚರ್ಚಿಸಿದರು. ಆಂಧ್ರ ಪ್ರದೇಶದ ಕುಪ್ಪಂ- ಬಂಗಾರಪೇಟೆ- ಕೋಲಾರ -ಚಿಂತಾಮಣಿ, ಚಿಂತಾಮಣಿಯ ಗಜಾನನ ಸರ್ಕಲ್- ಚೇಳೂರು, ರಾಷ್ಟ್ರೀಯ ಹೆದ್ದಾರಿ ಎನ್ಎಚ್-75ರಿಂದ ಹೊಸಕೋಟೆ -ಹೆಚ್.ಕ್ರಾಸ್- ಚಿಂತಾಮಣಿ ನಡುವೆ ಸಂಪರ್ಕ ಕಲ್ಪಿಸುವ ಎನ್ಎಚ್-69, ಎನ್ಎಚ್-42ರಿಂದ ಹೊಸಕೋಟೆ -ಗೌನಿಪಲ್ಲಿ - ಶ್ರೀನಿವಾಸಪುರ ಮೂಲಕ ಎನ್ಎಚ್-75ಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಯೋಜನೆಗಳ ಕುರಿತು ಸಚಿವರ ಗಮನ ಸೆಳೆದರು.
ಮೈಸೂರಿನಲ್ಲಿ ಆರ್ಪಿಎಫ್ ತರಬೇತಿ ಕೇಂದ್ರ, ಹೆಚ್ಡಿಕೆ ಮನವಿಗೆ ವೈಷ್ಣವಿ ಅಸ್ತು; ಮಂಗಳವಾರ (ಜ. 7) ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿದ್ದ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು, ಮೈಸೂರಿನಲ್ಲಿ ರೈಲ್ವೆ ರಕ್ಷಣಾ ತರಬೇತಿ ಸಂಸ್ಥೆ ಸ್ಥಾಪಿಸುವಂತೆ ಮನವಿ ಮಾಡಿದ್ದರು. ಈ ಮನವಿಗೆ ರೈಲ್ವೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಇದು ಅತ್ಯಂತ ಮಹತ್ವದ ಪ್ರಸ್ತಾವನೆ. ಈ ಬಗ್ಗೆ ಖುದ್ದು ತಾವೇ ಗಮನ ಹರಿಸುವುದಾಗಿ ತಿಳಿಸಿದರು. ಈ ಕುರಿತು ಹೆಚ್ಡಿಕೆ ಮಾಹಿತಿ ಹಂಚಿಕೊಂಡಿದ್ದರು.
ಇದನ್ನೂ ಓದಿ: ಮೈಸೂರಿನಲ್ಲಿ ರೈಲ್ವೆ ರಕ್ಷಣಾ ಪಡೆ ತರಬೇತಿ ಕೇಂದ್ರ ಸ್ಥಾಪನೆ ; ಹೆಚ್ಡಿಕೆ ಮನವಿಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅಸ್ತು