ಆನೇಕಲ್ (ಬೆಂಗಳೂರು) : ಬೆಂಗಳೂರಿನಿಂದ ಕೊಂಚ ದೂರದಲ್ಲಿ ಹಚ್ಚ ಹಸಿರಿನ ಇಕ್ಕೆಲಗಳ ಎತ್ತರದ ಮಣ್ಣಿನ ದಿಬ್ಬಗಳಿಂದ ಬಂಡೆಗಳ ಮೇಲೆ ಡಿಕ್ಕಿ ಹೊಡೆದು ಮುತ್ತುಗಳು ಚೆಲ್ಲಿದಂತೆ ಚಿಮ್ಮುವ ಜಲಪಾತವೇ ಮುತ್ಯಾಲಮಡುವು. ಮಳೆಯಿಂದಾಗಿ ಮುನ್ನೂರು ಅಡಿ ಎತ್ತರದಿಂದ ಜಿನುಗುವ ಈ ಜಲಪಾತ, ಜೋಗ ಜಲಪಾತವನ್ನು ನೆನಪಿಸುವಂತೆ ಭಾಸವಾಗುತ್ತಿದೆ.
ಆನೇಕಲ್ ಪಟ್ಟಣದಿಂದ ಐದು ಕಿಲೋಮೀಟರ್ ಸಾಗಿದರೆ ಈ ಪ್ರವಾಸಿತಾಣ ಸಿಗುತ್ತದೆ. ಇಲ್ಲಿಗೆ ಬರುವ ಪ್ರವಾಸಿಗರು ದಿನವೆಲ್ಲ ಇಲ್ಲಿನ ಪ್ರಕೃತಿ ಸೌಂದರ್ಯ ಸವಿದು ನೀರಿನಲ್ಲಿ ಆಟವಾಡಿ ಸಂತೋಷ ಪಡುತ್ತಾರೆ. ಮಳೆ ಬಂದಾಗ ಒಂದೇ ಕಡೆ ಮೂರರಿಂದ ನಾಲ್ಕು ಜಲಪಾತಗಳು ಹರಿಯುವುದರಿಂದ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ.
ಪ್ರವಾಸಿಗರು ಮುತ್ಯಾಲಮಡುವು ಫಾಲ್ಸ್ ಕುರಿತು ಮಾತನಾಡಿದರು (ETV Bharat) ಮುತ್ಯಾಲಮಡುವು ಪ್ರವಾಸಿ ತಾಣಕ್ಕೆ ಆಗಮಿಸುವ ಪ್ರವಾಸಿಗರು ನೂರಾರು ಮೆಟ್ಟಿಲುಗಳನ್ನು ಇಳಿದು ಕೆಳಗೆ ಹೋದರೆ, ಅಲ್ಲಿ ಆಳದಲ್ಲಿ ಮೇಲಿನಿಂದ ನೀರು ಬೀಳುವುದು ಕಂಡುಬರುತ್ತದೆ. ಕೆಲಸಮಯ ಆ ನೀರಿನಲ್ಲಿ ಆಟವಾಡಿ ತಂಪಾಗಿರುವ ಪ್ರಕೃತಿಯ ಮಡಿಲಲ್ಲಿ ಹಾಯಾಗಿ ಕೆಲಹೊತ್ತು ಸಮಯ ಕಳೆಯುತ್ತಾರೆ.
ಮುತ್ಯಾಲಮಡುವು ಫಾಲ್ಸ್ (ETV Bharat) ಇಲ್ಲಿ ಮುತ್ಯಾಲೇಶ್ವರ ದೇವಾಲಯವಿದ್ದು, ಪ್ರವಾಸಿಗರು ಈಶ್ವರ ದೇವರ ದರ್ಶನ ಪಡೆಯುತ್ತಾರೆ. ಕಾಡಂಚಿನ ಪಕ್ಕದಲ್ಲೇ ಇರುವ ಮುತ್ಯಾಲಮಡುವಿನಲ್ಲಿ ಕೋತಿಗಳ ತುಂಟಾಟ ನೋಡಿ ಸಂತಸಪಡುತ್ತಾರೆ. ಜಲಪಾತದ ನೀರಿನ ಭೋರ್ಗರೆತದ ಝುಳು ಝುಳು ನಿನಾದದ ನಡುವೆ ಹಕ್ಕಿಗಳ ದನಿ ಕಿವಿಗೆ ಇಂಪು ನೀಡುತ್ತದೆ. ಅಲ್ಲದೆ, ಮುತ್ಯಾಲಮಡುವಿನ ಗಡ್ಡೆಯಲ್ಲಿ ಬೋಟಿಂಗ್, ಕೆಎಸ್ಟಿಡಿಸಿ ಹೋಟೆಲ್ ಇದ್ದು, ಸಣ್ಣ ಪುಟ್ಟ ಮಕ್ಕಳಾಟದ ಉದ್ಯಾನವನವೂ ಇದೆ. ಹೀಗಾಗಿ ಹೆಚ್ಚಿನ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.
ಮುತ್ಯಾಲಮಡುವು ಫಾಲ್ಸ್ ಹರಿಯುತ್ತಿರುವುದು (ETV Bharat) ಎಂಜಾಯ್ ಮಾಡಿಕೊಂಡು ಹೋಗುತ್ತೇವೆ: ಈ ಕುರಿತು ಪ್ರವಾಸಿಗ ಮನೋಜ್ ಎಂಬುವರು ಮಾತನಾಡಿ, ''ಮಳೆ ಬಿದ್ದಾಗ ಪ್ರತಿ ಸಲ ನಾವು ಆನೇಕಲ್ನ ಫಾಲ್ಸ್ಗೆ ಬರುತ್ತೇವೆ. ಮಳೆ ಬಿದ್ದಾಗ ಮುತ್ಯಾಲಮಡುವು ಫಾಲ್ಸ್ ಚಿಕ್ಕಮಗಳೂರಿನ ಥರ ಫೀಲ್ ಕೊಡುತ್ತೆ, ಅದಕ್ಕೆ ನಾವು ಇಲ್ಲಿಗೆ ಬರ್ತಾ ಇರುತ್ತೇವೆ. ಬಂದು ಎಂಜಾಯ್ ಮಾಡಿಕೊಂಡು ಹೋಗುತ್ತೇವೆ'' ಎಂದರು.
ಮುತ್ಯಾಲಮಡುವು ಫಾಲ್ಸ್ (ETV Bharat) ಫಾಲ್ಸ್ ನೋಡೋಕೆ ಚೆನ್ನಾಗಿರುತ್ತೆ : ಪ್ರವಾಸಿಗ ಪ್ರಶಾಂತ್ ಮಾತನಾಡಿ, ''ಇವತ್ತು ಭಾರಿ ಮಳೆ ಬಂದಿರುವುದರಿಂದ ಫಾಲ್ಸ್ ನೋಡೋಕೆ ಚೆನ್ನಾಗಿರುತ್ತೆ. ಕಳೆದ ವರ್ಷ ಮಳೆ ಇರಲಿಲ್ಲ, ಈ ಬಾರಿ ಬಂದಿರುವ ಮಳೆಗೆ ಫಾಲ್ಸ್ ಹರಿಯುತ್ತಿರುವುದರಿಂದ ಪ್ರೇಕ್ಷಕರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಇಲ್ಲಿನ ಈ ಫಾಲ್ಸ್ ಪ್ರಸಿದ್ಧವಾಗಿದೆ. ಬೆಂಗಳೂರಿನ ಸುತ್ತಮುತ್ತಲಿನ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ'' ಎಂದರು.
ಮುತ್ಯಾಲೇಶ್ವರ ದೇವಾಲಯ (ETV Bharat) ಫಾಲ್ಸ್ ನೋಡಬೇಕೆಂಬ ಆಸೆ ಆಯಿತು: ಪ್ರವಾಸಿಗ ಶ್ರೀನಿವಾಸ್ ಮಾತನಾಡಿ, ''ಇದೇ ಫಸ್ಟ್ ಟೈಮ್ ನಾವಿಲ್ಲಿಗೆ ಬಂದಿರೋದು. ಮಳೆ ಬಂದಾಗ ಫಾಲ್ಸ್ ನೋಡಬೇಕೆಂಬ ಆಸೆ ಆಯಿತು. ಈ ಸ್ಥಳದ ಬಗ್ಗೆ ಯುಟೂಬ್ನಲ್ಲಿ ನೋಡಿ ತಿಳಿದುಕೊಂಡೆ, ನಂತರ ಇಲ್ಲಿಗೆ ಬಂದಿದ್ದೇವೆ'' ಎಂದು ಹೇಳಿದರು.
ಇದನ್ನೂ ಓದಿ :ಭಾರತದ ನಯಾಗರ "ಗೋಕಾಕ್ ಫಾಲ್ಸ್" ಅಭಿವೃದ್ಧಿಯಿಂದ ವಂಚಿತ: ಕನಸಾಗಿಯೇ ಉಳಿದ ಗಾಜಿನ ಸೇತುವೆ - INDIAS NIAGARA GOKAK FALLS