ಮಂಗಳೂರು:ನಾಡಿನೆಲ್ಲೆಡೆ ಮಂಗಳವಾರ ಯುಗಾದಿ ಸಂಭ್ರಮ ನಡೆದಿದ್ದರೆ, ಕರಾವಳಿಯಲ್ಲಿ ಇಂದು ತುಳುವರ ಯುಗಾದಿಯಾದ ಬಿಸು ಪರ್ಬ ಆಚರಿಸಲಾಗುತ್ತಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕೊಂಕಣಿ, ವಿಶ್ವಕರ್ಮ ಸಮುದಾಯದವರು ಮಾತ್ರ ಚಾಂದ್ರಮಾನ ಯುಗಾದಿಯನ್ನು ಆಚರಿಸುತ್ತಾರೆ. ಉಳಿದಂತೆ ಹೆಚ್ಚಿನ ಎಲ್ಲಾ ತುಳುವರು ಸೌರಮಾನ ಯುಗಾದಿಯಾದ ಇಂದು ಬಿಸುಪರ್ಬವನ್ನು ಆಚರಿಸಿದರು.
ಪಗ್ಗು ತಿಂಗಳು (ಎಪ್ರಿಲ್ ಮಧ್ಯದಿಂದ ಮೇ ಮಧ್ಯದವರೆಗೆ) ತುಳುವರಿಗೆ ವರ್ಷ ಪ್ರಾರಂಭದ ಮೊದಲ ತಿಂಗಳು. ಅಂದರೆ ಮೀನ ಮಾಸ ಮುಗಿದು ಮೇಷ ಮಾಸದ ಸಂಕ್ರಮಣಕ್ಕೆ ಹೊಸ ವರ್ಷ ಆಚರಣೆ. ಮೇಷ ಸಂಕ್ರಮಣದ ಮರುದಿನ ಅಂದರೆ 'ಸಿಂಗೊಡೆ'ಯನ್ನು ತುಳುವರು ವರ್ಷದ ಮೊದಲ ದಿನ 'ಬಿಸು ಪರ್ಬ' ಎಂದು ಆಚರಿಸುತ್ತಾರೆ. 'ಬಿಸು ಪರ್ಬ' ಎಂದರೆ ಸೌರಮಾನ ಯುಗಾದಿ ಎಂದರ್ಥ. ಈ ದಿನವೇ ತುಳುವರಿಗೆ ವರ್ಷಾರಂಭದ ದಿನ.
ತುಳುವರು ಮೂಲತಃ ಕೃಷಿಕರು. ಆದ್ದರಿಂದ ಅವರ ಎಲ್ಲಾ ಹಬ್ಬಗಳು ಒಂದಿಲ್ಲೊಂದು ರೀತಿ ಕೃಷಿ ಸಂಸ್ಕೃತಿ ಹಾಸುಹೊಕ್ಕಿದೆ. ಬಿಸು ಪರ್ಬದಲ್ಲೂ ಕಣಿ ಇಡುವುದು, ಬುಳೆ ಕಾಣಿಕೆ ಒಪ್ಪಿಸುವುದು, ಎಣೇಲು ಬೇಸಾಯಕ್ಕೆ ಮುಹೂರ್ತ 'ಕೈ ಬಿತ್ ಹಾಕುವುದು' ಮುಂತಾದ ಆಚರಣೆ ಇದೆ. ಇವೆಲ್ಲದರಲ್ಲಿ ನಾವು ಕೃಷಿ ಪ್ರಾಧಾನ್ಯತೆಯನ್ನು ಕಾಣಬಹುದು.