ಶಿವಮೊಗ್ಗ : ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ತೀರ್ಥಹಳ್ಳಿಯ ಬಿಜೆಪಿ ಕಾರ್ಯಕರ್ತ ಸಾಯಿ ಪ್ರಸಾದ್ ಅವರನ್ನು ವಶಕ್ಕೆ ಪಡೆದಿದ್ದ ಎನ್ಐಎ ತಂಡವು ವಿಚಾರಣೆ ನಡೆಸಿ ವಾಪಸ್ ಕಳುಹಿಸಿದೆ. ಇದರ ಬೆನ್ನಲ್ಲೇ ಸಾಯಿ ಪ್ರಸಾದ್ ಎನ್ಐಎ ವಿಚಾರಣೆ ನಡೆಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಸಂಬಂಧ ಮುಜಾಮಿಲ್ ಎಂಬಾತನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಈ ತನಿಖೆ ಭಾಗವಾಗಿ ನನಗೂ ಸೇರಿ ಮೂವರಿಗೆ ನೋಟಿಸ್ ನೀಡಲಾಗಿತ್ತು. ಜೊತೆಗೆ ನನ್ನ ತಮ್ಮನಿಗೂ ನೋಟಿಸ್ ಬಂದಿತ್ತು. ನಮಗೆ ನೋಟಿಸ್ ಏಕೆ ಕೊಟ್ಟಿದ್ದಾರೆಂದು ತಿಳಿದಿರಲಿಲ್ಲ. ಮತೀನ್ ಎಂಬಾತ ಸಾಯಿ ಸ್ಲ್ಯಾಷ್_ಪಿ ಎಂಬ ಅಕೌಂಟ್ ನಿಂದ ಕ್ರಿಪ್ಟೋ ಕರೆನ್ಸಿ ವ್ಯವಹಾರ ಮಾಡಿದ್ದಾನೆ. ಸಾಯಿ ಪಕ್ಕದಲ್ಲಿ ಪಿ ಇರುವುದರಿಂದ ನನ್ನ ತಮ್ಮ ಹಾಗೂ ನನಗೆ ಕರೆಸಿದ್ದರು ಎಂದು ಬಳಿಕ ಗೊತ್ತಾಯಿತು ಎಂದರು.
ಭವಿಷ್ಯದ ದೃಷ್ಟಿಯಿಂದ ನಾನು ಕ್ರಿಪ್ಟೋ ಎಂಬ ಅಧಿಕೃತ ಆ್ಯಪ್ ಮೂಲಕ ಶೇರ್ ನಲ್ಲಿ ಹಣ ಹೂಡಿಕೆ ಮಾಡಿದ್ದೇನೆ. ಅದು ನನ್ನ ಬ್ಯಾಂಕ್ ಮೂಲಕವೇ ಕೆವೈಸಿ ಬಳಸಿ ಮಾಡಿದ್ದೇನೆ. ಈ ಬಗ್ಗೆ ಅಧಿಕಾರಿಗಳಿಗೆ ನಾನು ತಿಳಿಸಿದ್ದೇನೆ. ಹೀಗಾಗಿ ಎಲ್ಲಾ ರೀತಿಯಲ್ಲೂ ಅಧಿಕಾರಿಗಳು ತನಿಖೆ ಮಾಡಿ ಕಳುಹಿಸಿದ್ದಾರೆ. ಜೊತೆಗೆ ಮುಜಾಮಿಲ್ನನ್ನು ವಿಚಾರಣೆ ಮಾಡಿ ಕಳಿಸಿದ್ದಾರೆ. ನಾವು ಅವರು ಸ್ನೇಹಿತರು ಅಷ್ಟೇ. ಅವರ ಕೆಲಸವೇನಾದರೂ ಇದ್ದರೆ ನಾನು ಮಾಡಿಕೊಡುತ್ತಿದ್ದೆ. ಅವರ ಅಂಗಡಿಯಲ್ಲಿ ಮೊಬೈಲ್ ಖರೀದಿ ಮಾಡಿದ್ದೇವೆ. ಆರೋಗ್ಯಕರ ವ್ಯವಹಾರ ಮಾಡುತ್ತಿದ್ದೇವೆ. ಈ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಕೊಟ್ಟಿದ್ದೇನೆ. ನಾನು ಅವರಿಗೆ ಕ್ರಿಪ್ಟೋ ಆ್ಯಪ್ ಬಳಕೆ ಬಗ್ಗೆ ತಿಳಿಸಿಕೊಟ್ಟಿದ್ದು, ಈ ವೇಳೆ ಬೇರೇನೂ ವ್ಯವಹಾರ ಅಧಿಕಾರಿಗಳಿಗೆ ಕಂಡು ಬಂದಿಲ್ಲ ಸಾಯಿ ಪ್ರಸಾದ್ ತಿಳಿಸಿದ್ದಾರೆ.