ದಾವಣಗೆರೆ:ಅಯೋಧ್ಯೆಯಲ್ಲಿ ಇಂದು ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆಯಲಿದ್ದು ದಾವಣಗೆರೆ ಕೇಸರಿಮಯವಾಗಿದೆ. ನಗರದ ಬಹುತೇಕ ಕಡೆ ಆಕರ್ಷಕ ಲೈಟಿಂಗ್ಸ್, ಕೇಸರಿ ಬಾವುಟ ಶ್ರೀರಾಮನ ಫ್ಲೆಕ್ಸ್ ರಾರಾಜಿಸುತ್ತಿವೆ. ಜಯದೇವ ಸರ್ಕಲ್ ಹಾಗೂ ರಾಮ್ ಆ್ಯಂಡ್ ಕೋ ಸರ್ಕಲ್ನಲ್ಲಿ ಭರ್ಜರಿ ಸಿದ್ಧತೆ ನಡೆಸಲಾಗಿದೆ. ಇದೇ ವೇಳೆ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಡ್ರೋನ್ ಮೂಲಕ ಇಡೀ ನಗರದಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ.
ಸೂಕ್ಷ್ಮ, ಅತಿಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜಿಲ್ಲೆಯಾದ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ನಿಮ್ಮ ಸಂಭ್ರಮ ಮತ್ತೊಬ್ಬರಿಗೆ ತೊಂದರೆ ಆಗದಿರಲಿ ಎಂದು ಎಸ್ಪಿ ಉಮಾ ಪ್ರಶಾಂತ್ ಸಂದೇಶ ರವಾನಿಸಿದ್ದಾರೆ. ಕೋಮು ಭಾವನೆ ಕೆರಳಿಸುವ ಹಾಡುಗಳನ್ನು ಹಾಕುವಂತಿಲ್ಲ. ರಸ್ತೆ ಸಂಚಾರಕ್ಕೆ ತೊಂದರೆ ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಈಗಾಗಲೇ ವಿವಿಧ ಕೋಮಿನ ಮುಖಂಡರೊಂದಿಗೆ ಸಭೆ ನಡೆಸಿ ಹಲವು ಸೂಚನೆಗಳನ್ನು ನೀಡಲಾಗಿದೆ.
1. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹವರು ಮತ್ತು ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು.
2. ಅಯೋಧ್ಯೆಯ ಶ್ರೀರಾಮಮಂದಿರ ಉದ್ಘಾಟನೆಯ ಸಂಭ್ರಮಾಚರಣೆಯ ಸಂದರ್ಭದಲ್ಲಿ ಪ್ರಚೋದನಕಾರಿ ಹಾಡುಗಳನ್ನು ಹಾಕುವುದು, ಪ್ರಚೋದನಕಾರಿ ಘೋಷಣೆಗಳನ್ನು ಕೂಗುವುದು, ಪೋಸ್ಟರ್‌ಗಳನ್ನು ಪ್ರದರ್ಶಿಸುವುದಕ್ಕೆ ಅವಕಾಶ ಇರುವುದಿಲ್ಲ.
3. ಜನಸಂದಣಿ ಪ್ರದೇಶಗಳಲ್ಲಿ ಪಟಾಕಿಗಳನ್ನು ಸಿಡಿಸಬಾರದು.