ದೊಡ್ಡಬಳ್ಳಾಪುರ:ತಾಲೂಕಿನಲ್ಲಿ ಹುಲಿಕುಂಟೆ ಗ್ರಾಮದಲ್ಲಿ ನಾಲ್ಕನೇ ವೀರಗಲ್ಲು ಪತ್ತೆಯಾಗಿದೆ. ಹುಲಿ ಬೇಟೆ ವೀರಗಲ್ಲುಗಳು ಗ್ರಾಮದ ಹೆಸರಿನೊಂದಿಗೆ ತಳುಕು ಹಾಕಿಕೊಂಡಿರುವ ಸಾಧ್ಯತೆಯೂ ಇದೆ ಎಂಬ ಕುತೂಹಲ ಕೂಡ ಮೂಡಿದೆ.
ಈ ಕುರಿತು ಮಾತನಾಡಿರುವ ಇತಿಹಾಸಕಾರ ಡಾ.ಎಸ್ ವೆಂಕಟೇಶ್, ಹುಲಿಬೇಟೆಯ ವೀರಗಲ್ಲುಗಳು ದೊರೆತಿರುವುದು ತೀರಾ ಕಡಿಮೆ. ತೂಬಗೆರೆ ಹೋಬಳಿಯ ತಿಮ್ಮೋಜನಹಳ್ಳಿಯಲ್ಲಿ ಎರಡು ಮತ್ತು ಗೆದ್ದಲಪಾಳ್ಯದ ರಸ್ತೆಯಲ್ಲಿ ಒಂದು ಹುಲಿಬೇಟೆ ವೀರಗಲ್ಲುಗಳು ಲಭ್ಯವಾಗಿವೆ. ಈಗ ಹುಲಿಕುಂಟೆ ಗ್ರಾಮದಲ್ಲಿ ಹುಲಿಬೇಟೆಯ ವೀರಗಲ್ಲೊಂದು ಲಭ್ಯವಾಗಿದೆ. ಶಿಲ್ಪಲಕ್ಷಣದ ಆಧಾರದ ಮೇಲೆ ಗಮನಿಸಿದರೆ, ಇದು 10 ನೇ ಶತಮಾನಕ್ಕೆ ಸೇರಿಸಬಹುದು. ವೀರನು ಆಲೀಢಭಂಗಿಯಲ್ಲಿ ನಿಂತಿದ್ದು, ತನ್ನ ಬಲಗೈಯಲ್ಲಿ ಖಡ್ಗವನ್ನು ಹಿಡಿದು ಮೇಲೆತ್ತಿರುವನು. ಎದುರುಗಡೆ ವೀರನತ್ತ ಮುನ್ನುಗ್ಗುತ್ತಿರುವ ಹುಲಿಯ ಚಿತ್ರಣವಿದೆ. ಈ ವೀರಗಲ್ಲಿನ ಮೇಲೆ ಯಾವುದೇ ರೀತಿಯ ಬರೆವಣಿಗೆ ಇಲ್ಲ ಎಂದರು.
ಮುಂದುವರೆದು ಮಾತನಾಡಿರುವ ಅವರು, ಮಾನವ ಮತ್ತು ಹುಲಿಗಳ ಸಂಘರ್ಷ ಇಂದು - ನಿನ್ನೆಯದಲ್ಲ. ಇತಿಹಾಸ ಪೂರ್ವ ಕಾಲದಿಂದಲೂ ಮಾನವ ನಿರಂತರವಾಗಿ ಹುಲಿಗಳ ಜೊತೆಗೆ ಸಂಘರ್ಷ ಮಾಡಿಕೊಂಡು ಬಂದಿದ್ದಾನೆ. ಹೀಗೆ ಹುಲಿಜೊತೆ ಕಾದಾಡುವಾಗ ಮೃತಪಟ್ಟ ವೀರನ ಸ್ಮರಣಾರ್ಥ ನೆಟ್ಟಕಲ್ಲುಗಳೇ ಹುಲಿಬೇಟೆ ವೀರಗಲ್ಲುಗಳಾಗಿವೆ.