ಮೈಸೂರು: ಶುಕ್ರವಾರ ಸಂಜೆ ಸುರಿದ ಆಲಿಕಲ್ಲು ಸಹಿತ ಬಿರುಗಾಳಿ ಮಳೆಗೆ ಕಟ್ಟಡದ ಶೀಟ್ ಬಿದ್ದು ಕಾರ್ಮಿಕ ಸಾವನ್ನಪ್ಪಿದ್ದಾನೆ. ಹಲವು ಕಡೆ ಮರಗಳು ರಸ್ತೆಗೆ ಬಿದಿದ್ದು, ರಾತ್ರಿ ಇಡೀ ಮೈಸೂರು ನಗರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಮೊದಲ ಮಳೆಯ ಅವಾಂತರ ಹೀಗಿದೆ.
ಬಿಸಿಲಿನಿಂದ ಕಂಗೆಟ್ಟಿದ್ದ ಸಾಂಸ್ಕೃತಿಕ ನಗರಿಯ ಜನರಿಗೆ ಶುಕ್ರವಾರ ಸಂಜೆ ಬಿದ್ದ ಆಲಿಕಲ್ಲು ಸಹಿತ ಮಳೆ ಖುಷಿಯನ್ನುಂಟು ಮಾಡಿದೆ. ಇದರ ಜೊತೆಗೆ ಬಿರುಗಾಳಿ ಸಹಿತ ಮಿಂಚು, ಗುಡುಗು, ಆರ್ಭಟಕ್ಕೆ ಹಲವಾರು ಅವಾಂತರಗಳು ಸಂಭವಿಸಿವೆ. ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆಗೆ ಹಲವಾರು ಅನಾಹುತಗಳು ಸಂಭವಿಸಿವೆ.
ಮೈಸೂರು-ಮಡಿಕೇರಿಯಲ್ಲಿ ಇಬ್ಬರು ಸಾವು:ಮೈಸೂರು ನಗರದ ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆ ಕೆಲಸ ಮಾಡುತ್ತಿದ್ದ ಶಿವಕುಮಾರ್ ಎನ್ನುವವರ ಮೇಲೆ ಬಿರುಗಾಳಿಗೆ ಮನೆ ಮೇಲೆ ಹಾಕಿದ್ದ ಶೀಟ್ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವುದು ಕುಟುಂಬಸ್ಥರು ನೀಡಿದ ಮಾಹಿತಿ ಮೂಲಕ ತಿಳಿದುಬಂದಿದೆ.
ಮಡಿಕೇರಿಯಲ್ಲಿ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಅಸ್ಸೋಂ ಮೂಲದ ಪ್ರಮಾತ್ ಗರ್ಮಾನಿ (37) ಎಂಬುವವರಿಗೆ ಸಿಡಿಲು ಬಡಿದು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇನ್ನು H.D.ಕೋಟೆ ಬಳಿಯ ಗ್ರಾಮವೊಂದರಲ್ಲಿ ಸಿಡಿಲು ಬಡಿದು ತೆಂಗಿನ ಮರವೊಂದು ಬೆಂಕಿಯಿಂದ ಹೊತ್ತಿ ಉರಿದಿದೆ.
ಬಿರುಗಾಳಿಗೆ ಮುರಿದು ಬಿದ್ದ ಮರಗಳು:ಶುಕ್ರವಾರ ಸಂಜೆ ಬಿರುಗಾಳಿ ಸಹಿತ ಬಾರಿ ಮಳೆಗೆ ಮೈಸೂರು ನಗರದ ಕುವೆಂಪುನಗರ, ಮಾನಂದವಾದಿ ರಸ್ತೆ, ಕುರುಬರಹಳ್ಳಿ, ಸಿದ್ದಾರ್ಥ ಲೇಔಟ್ ಸೇರಿದಂತೆ ನಗರದ ಹಲವು ಕಡೆ ಬಿರುಗಾಳಿ ಮಳೆಗೆ ಮರಗಳು ಹಾಗೂ ವಿದ್ಯುತ್ ಕಂಬಗಳು ಮುರಿದು ಬಿದಿದ್ದಾವೆ. ಹೀಗಾಗಿ ರಾತ್ರಿ ಇಡೀ ಮೈಸೂರು ನಗರದ ಹಲವು ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು, ಇದರ ಜೊತೆಗೆ ಮೈಸೂರು ನಗರದಲ್ಲಿ 30ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಆಗಿರುವುದು ತಿಳಿದು ಬಂದಿದೆ. ಇದರ ಜೊತೆಗೆ ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ಬಿಸಿದ ಬಿರುಗಾಳಿ ಸಹಿತ ಮಳೆಗೆ ಬಾರಿ ಅನಾಹುತಗಳು ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಓದಿ:ತುಂಬೆ ಡ್ಯಾಂನಲ್ಲಿ ನೀರಿನಮಟ್ಟ ಇಳಿಕೆ: ಇನ್ನು ಮಂಗಳೂರಲ್ಲಿ ಎರಡು ದಿನಕ್ಕೊಮ್ಮೆ ಮಾತ್ರವೇ ನೀರು ಪೂರೈಕೆ - Mangaluru Water Rationing