ಬೆಂಗಳೂರು: ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡು ಮೂವರು ಯುವಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ಹೊರವಲಯದ ಆನೇಕಲ್ನ ಕಾಚನಾಯಕನಹಳ್ಳಿಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಸಿಲಿಂಡರ್ ಸ್ಫೋಟದ ರಭಸಕ್ಕೆ ಮೂರು ಮನೆಗಳಿಗೆ ಹಾನಿಯಾಗಿದೆ.
ಆನೇಕಲ್ನ ಕಾಚನಾಯಕನಹಳ್ಳಿಯಲ್ಲಿ ಕೃಷ್ಣಾ ರೆಡ್ಡಿ ಮಗ ರಮೇಶ್ ಎಂಬುವವರ ಮನೆಯಲ್ಲಿ ಅಸ್ಸೋಂ ಮೂಲದ ನಾಲ್ವರು ಯುವಕರು ವಾಸವಾಗಿದ್ದರು. ಕಾರ್ಖಾನೆಯೊಂದರಲ್ಲಿ ಇವರು ಕೆಲಸ ಮಾಡುತ್ತಿದ್ದರು. ಬಿದನ್ ದಾಸ, ದಯಾಲ್ ತಾಂತಿ ಹಾಗೂ ಗುಲಾಭ ಕರ್ಮಾಕರು ಎಂಬ ಯುವಕರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
'ಸ್ಫೋಟದಲ್ಲಿ ಗಾಯಗೊಂಡಿರುವ ಯುವಕರ ಆರೋಗ್ಯ ಪರಿಸ್ಥಿತಿ ತೀರಾ ಗಂಭೀರವಾಗಿದ್ದು, ಚಿಕಿತ್ಸೆ ನೀಡುತ್ತಿದ್ದೇವೆ' ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಕಳೆದ ರಾತ್ರಿ ಅಡುಗೆ ಮಾಡಿ, ಬಳಿಕ ಗ್ಯಾಸ್ ಸರಿಯಾಗಿ ಬಂದ್ ಮಾಡದೇ ಮಲಗಿದ್ದರು. ಪರಿಣಾಮವಾಗಿ ರಾತ್ರಿಯಿಡೀ ಗ್ಯಾಸ್ ರೂಮಿನಲ್ಲಿ ಸೋರಿಕೆಯಾಗಿತ್ತು. ಬೆಳಗ್ಗೆ ಎದ್ದು ಸ್ವಿಚ್ಡ್ ಆನ್ ಮಾಡಿದಾಗ ಈ ಅವಘಡ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಸಿಲಿಂಡರ್ ಸ್ಫೋಟದ ಮಾಹಿತಿ ತಿಳಿಯುತ್ತಿದ್ದ ತಕ್ಷಣವೇ ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ದೌಡಾಯಿಸಿದ್ದರು. ಸೂರ್ಯನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಜಿಟಿ ಜಿಟಿ ಮಳೆ: ಮನೆ ಕುಸಿತ, ವೃದ್ಧ ದಂಪತಿ ರಕ್ಷಣೆ